ADVERTISEMENT

ಆರ್ಚರಿ: ಭಾರತಕ್ಕೆ ಏಳು ಪದಕ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2012, 19:30 IST
Last Updated 18 ಫೆಬ್ರುವರಿ 2012, 19:30 IST

ಕೋಲ್ಕತ್ತ (ಪಿಟಿಐ): ಪ್ರಭಾವಿ ಪ್ರದರ್ಶನ ನೀಡಿದ ಭಾರತ ತಂಡದವರು ಬ್ಯಾಂಕಾಕ್‌ನಲ್ಲಿ ನಡೆಯುತ್ತಿರುವ ಏಷ್ಯನ್ ಗ್ರ್ಯಾಂಡ್ ಪ್ರಿ ಆರ್ಚರಿ ಟೂರ್ನಿಯಲ್ಲಿ ಮೂರು ಚಿನ್ನ ಸೇರಿದಂತೆ ಒಟ್ಟು ಏಳು ಪದಕಗಳನ್ನು ಗೆದ್ದುಕೊಂಡಿದ್ದಾರೆ.

ಭಾರತ ಮಿಶ್ರ ತಂಡ ರಿಕರ್ವ್ ವಿಭಾಗದಲ್ಲಿ ಚಿನ್ನದ ಪದಕ ಜಯಿಸಿತು. ಜಯಂತ್ ತಾಲ್ಲೂಕ್ದಾರ್ ಹಾಗೂ ಲೈಶಿರಾಮ್ ಬೊಂಬಯಾಲದೇವಿ ಅವರನ್ನೊಳಗೊಂಡ ತಂಡ ಚಿನ್ನದ ಪದಕ ಪಡೆಯಿತು.

ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಭಾರತ 143-142ರಲ್ಲಿ ಜಪಾನ್ ತಂಡವನ್ನು ಸೋಲಿಸಿತು. ಕಾಂಪೌಂಡ್ ವಿಭಾಗದಲ್ಲಿ ಚುರುಕಿನ ಪ್ರದರ್ಶನ ನೀಡಿದ ರಜತ್ ಚವ್ಹಾಣ್ ಹಾಗೂ ಜಾನ್ ಹನ್ಸದಹಾ 151-148ರಲ್ಲಿ ಮಯನ್ಮಾರ್ ಎದುರು ಗೆಲುವು ಪಡೆದರು.

ಒಂದು ಚಿನ್ನ, ಮೂರು ಬೆಳ್ಳಿ ಹಾಗೂ ಒಂದು ಕಂಚು ವೈಯಕ್ತಿಕ ವಿಭಾಗದ ಸ್ಪರ್ಧೆಗಳಲ್ಲಿ ಭಾರತದ ಮಡಿಲು ಸೇರಿದವು. ಚಟ್ಟಿಬೊಮ್ಮ ಜಿಗ್ನಸ್ ಹಾಗೂ ರಾಷ್ಟ್ರೀಯ ಚಾಂಪಿಯನ್ ರಜತ್ ಚವ್ಹಾಣ್ ಪುರುಷರ ವೈಯಕ್ತಿಕ ವಿಭಾಗದ ಕಾಂಪೌಂಡ್‌ನಲ್ಲಿ ಪದಕ ಜಯಿಸಿದರು. ಚವ್ಹಾಣ್‌ಗೆ ಲಭಿಸಿದ ಎರಡನೇ ಚಿನ್ನವಿದು. ಕಳೆದ ವರ್ಷ ಢಾಕಾದಲ್ಲಿ ನಡೆದ 3ನೇ ಏಷ್ಯನ್ ಟೂರ್ನಿಯಲ್ಲಿ ಚೊಚ್ಚಲ ಪ್ರಶಸ್ತಿ ಗೆದ್ದಿದ್ದರು.

ಇದಕ್ಕೂ ಮುನ್ನ ನಡೆದ ಸೆಮಿಫೈನಲ್ ಪಂದ್ಯಗಳಲ್ಲಿ ಚವ್ಹಾಣ್ 149-147ರಲ್ಲಿ ನುಗಾಯಿನ್ ಮೇಲೂ, ಜಿಗ್ನಸ್ 147-143ರಲ್ಲಿ ರಿತುಲ್ ಚಟರ್ಜಿ ವಿರುದ್ಧವೂ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿದ್ದರು ಎಂದು ಇಲ್ಲಿಗೆ ಬಂದಿರುವ ವರದಿಗಳು ತಿಳಿಸಿವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.