ADVERTISEMENT

ಆರ್‌ಸಿಬಿಗೆ ಪ್ಲೇ ಆಫ್ ಪ್ರವೇಶದ ಕನಸು

ಜೋಸ್ ಬಟ್ಲರ್ ಮತ್ತು ಬೆನ್ ಸ್ಟೋಕ್ಸ್‌ ಅನುಪಸ್ಥಿತಿಯಲ್ಲಿ ಕಣಕ್ಕೆ ಇಳಿಯಲಿರುವ ರಹಾನೆ ಬಳಗ

​ಪ್ರಜಾವಾಣಿ ವಾರ್ತೆ
Published 18 ಮೇ 2018, 19:30 IST
Last Updated 18 ಮೇ 2018, 19:30 IST
ಆರ್‌ಸಿಬಿ ಆಟಗಾರರು ಜಯದ ವಿಶ್ವಾಸದಲ್ಲಿದ್ದಾರೆ
ಆರ್‌ಸಿಬಿ ಆಟಗಾರರು ಜಯದ ವಿಶ್ವಾಸದಲ್ಲಿದ್ದಾರೆ   

ಜೈಪುರ: ಕರ್ನಾಟಕದ ಜನರಿಗೆ ಶನಿವಾರ ಕುತೂಹಲದ ದಿನ. ಬೆಂಗಳೂರಿನಲ್ಲಿ ತಾರಕಕ್ಕೇರಿರುವ ರಾಜಕೀಯದಾಟ ಮತ್ತು ಜೈಪುರದಲ್ಲಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ ಆಟದ ಮೇಲೆ ಅವರ ಕಂಗಳು ನೆಟ್ಟಿವೆ. ಇಲ್ಲಿ ಮುಖ್ಯಮಂತ್ರಿ ಕುರ್ಚಿಗಾಗಿ ಹೋರಾಟ ಮತ್ತು ಅಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಪ್ಲೇ ಆಫ್‌ ಪ್ರವೇಶಿಸುವ ಅವಕಾಶ ಗಿಟ್ಟಿಸಿಕೊಳ್ಳುವ ಹಣಾಹಣೆ ನಡೆಯಲಿದೆ.

ಇದೀಗ ಸಾಮಾಜಿಕ ಜಾಲತಾಣ ಗಳಲ್ಲಿ ಈ ಎರಡು ವಿಷಯಗಳೇ ಹೆಚ್ಚು ಓಡಾಡುತ್ತಿವೆ.

ವಿರಾಟ್ ಕೊಹ್ಲಿ ನಾಯಕತ್ವದ ಆರ್‌ಸಿಬಿ ತಂಡವು ರಾಜಸ್ಥಾನ್ ರಾಯಲ್ಸ್‌ ವಿರುದ್ಧ ಕಣಕ್ಕಿಳಿ ಯಲಿದೆ.  ತಲಾ 13 ಪಂದ್ಯಗಳನ್ನು ಆಡಿರುವ ಉಭಯ ತಂಡಗಳ ಬಗಲಲ್ಲಿ ಈಗ 12 ಪಾಯಿಂಟ್‌ಗಳು ಇವೆ. ಉತ್ತಮ ರನ್‌ ರೇಟ್ ಹೊಂದಿರುವ ಕಾರಣ ಆರ್‌ಸಿಬಿ ತಂಡ ರಾಜಸ್ಥಾನ್ ರಾಯಲ್ಸ್‌ಗಿಂತ ಒಂದು ಹೆಜ್ಜೆ ಮುಂದೆ ಇದೆ. ಪಾಯಿಂಟ್ ಪಟ್ಟಿಯಲ್ಲಿ ಈ ತಂಡ ಐದನೇ ಸ್ಥಾನದಲ್ಲಿದ್ದರೆ ರಾಯಲ್ಸ್‌ ಆರನೇ ಸ್ಥಾನ ಹೊಂದಿದೆ.

ADVERTISEMENT

ಸವಾಯ್‌ ಮಾನ್‌ಸಿಂಗ್‌ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಗೆದ್ದವರಿಗೆ ಮುಂದಿನ ಹಾದಿ ಸುಗಮ ಆಗಲಿದೆ. ಆದ್ದರಿಂದ ಎರಡೂ ತಂಡಗಳಿಗೆ ಗೆಲುವು ಒಂದೇ ಮಂತ್ರವಾಗಲಿದೆ. ತಾಯ್ನಾಡಿನಲ್ಲಿ ಟೆಸ್ಟ್ ಆಡಲು ಮರಳಿರುವುದರಿಂದ ಬೆನ್ ಸ್ಟೋಕ್ಸ್‌ ಮತ್ತು ಜೋಸ್ ಬಟ್ಲರ್‌  ಆತಿಥೇಯ ತಂಡಕ್ಕೆ ಆಡುತ್ತಿಲ್ಲ.  ಇದರ ಲಾಭವನ್ನು ಪಡೆದು ಮುನ್ನುಗ್ಗಲು ಆರ್‌ಸಿಬಿ ಯೋಜನೆ ಹೆಣೆದಿದೆ. ಡೆಲ್ಲಿ ಡೇರ್‌ ಡೆವಿಲ್ಸ್‌ ತಂಡವನ್ನು ಸುಲಭವಾಗಿ ಮಣಿಸಿದ ನಂತರ ಬಲಿಷ್ಠ ತಂಡಗಳಾದ ಕಿಂಗ್ಸ್ ಇಲೆವನ್ ಪಂಜಾಬ್‌ ಮತ್ತು ಸನ್‌ರೈಸರ್ಸ್ ಹೈದರಾಬಾದ್ ಎದುರು ಗೆದ್ದಿರುವುದರಿಂದ ವಿರಾಟ್ ಕೊಹ್ಲಿ ಬಳಗದವರು ಈಗ ಭರವಸೆಯಲ್ಲಿದ್ದಾರೆ.

ವಿರಾಟ್ ಕೊಹ್ಲಿ, ಎಬಿ ಡಿವಿಲಿ ಯರ್ಸ್‌, ಪಾರ್ಥಿವ್ ಪಟೇಲ್‌, ಮನದೀಪ್‌ ಸಿಂಗ್‌, ಕಾಲಿನ್ ಗ್ರ್ಯಾಂಡ್‌ ಹೋಮ್‌ ಮತ್ತು ಮೋಯಿನ್ ಅಲಿ ಮುಂತಾದವರು ಆರ್‌ಸಿಬಿಯ ಬ್ಯಾಟಿಂಗ್‌ ಶಕ್ತಿ. ಕಳೆದ ಪಂದ್ಯದಲ್ಲಿ ಸನ್‌ರೈಸರ್ಸ್ ವಿರುದ್ಧ ಮಿಂಚಿನ ಬ್ಯಾಟಿಂಗ್ ಮಾಡಿದ್ದ ಡಿವಿಲಿಯರ್ಸ್, ಕಾಲಿನ್ ಮತ್ತು ಮೋಯಿನ್ ಆತಿಥೇಯ ತಂಡದ ಬೌಲರ್‌ಗಳಲ್ಲಿ ಆತಂಕ ಮೂಡಿಸಲಿದ್ದಾರೆ.

ಉಮೇಶ್‌ ಯಾದವ್‌ ಮತ್ತು ಟಿಮ್ ಸೌಥಿ ನೇತೃತ್ವದ ಬೌಲಿಂಗ್ ಪಡೆ ಆರ್‌ಸಿಬಿಗೆ ಕೆಲವು ಪಂದ್ಯಗಳಲ್ಲಿ ಜಯ ಗಳಿಸಿಕೊಡುವಲ್ಲಿ ನಿರ್ಣಾಯಕ ಪಾತ್ರ ವಹಿಸಿತ್ತು. ಆದರೆ ಸನ್‌ರೈಸರ್ಸ್‌ ಎದುರಿನ ಪಂದ್ಯದಲ್ಲಿ ಕೇನ್ ವಿಲಿಯಮ್ಸನ್ ಮತ್ತು ಮನೀಷ್ ಪಾಂಡೆ ಅವರನ್ನು ಕಟ್ಟಿಹಾಕಲು ಸಾಧ್ಯವಾಗದೆ ಬೌಲರ್‌ಗಳು ಪರದಾಡಿದ್ದರು. ಕೇನ್‌ ಮತ್ತು ಪಾಂಡೆ 65 ಎಸೆತಗಳಲ್ಲಿ 135 ರನ್‌ ಸೇರಿಸಿ ತಂಡವನ್ನು ಜಯದ ಸನಿಹ ತಲುಪಿಸಿದ್ದರು.

ವೇಗದ ಬೌಲರ್‌ಗಳ ಜೊತೆಯಲ್ಲಿ ಸ್ಪಿನ್ನರ್‌ಗಳಾದ ಯಜುವೇಂದ್ರ ಚಾಹಲ್‌ ಮತ್ತು ಮೋಯಿನ್ ಅಲಿ ಕೂಡ ಲಯಕ್ಕೆ ಮರಳಿದರೆ ರಾಯಲ್ಸ್‌ ಬ್ಯಾಟಿಂಗ್ ಪಡೆ ಸಂಕಷ್ಟಕ್ಕೆ ಸಿಲುಕಲಿದೆ. ಆದರೆ ತವರಿನಲ್ಲಿ ರಾಯಲ್ಸ್‌ ತಂಡಕ್ಕೆ ಪೆಟ್ಟು ನೀಡುವುದು ಅಷ್ಟು ಸುಲಭವಲ್ಲ. ಈ ಹಿಂದೆ ಮುಖಾಮುಖಿಯಾಗಿದ್ದಾಗ ಆರ್‌ಸಿಬಿಯನ್ನು ಮಣಿಸಿದ ಸಾಧನೆಯೂ ರಾಯಲ್ಸ್‌ಗೆ ಭರವಸೆ ತುಂಬಲಿದೆ.

ರಾಜಸ್ಥಾನ್‌ಗೆ ಬ್ಯಾಟಿಂಗ್ ಚಿಂತೆ: ಬೆನ್‌ ಸ್ಟೋಕ್ಸ್‌ ಮತ್ತು ಜೋಸ್ ಬಟ್ಲರ್ ಅವರ ಅನುಪಸ್ಥಿತಿಯಲ್ಲಿ ರಾಜಸ್ಥಾನ್‌ ತಂಡದ ಬ್ಯಾಟಿಂಗ್ ವಿಭಾಗ ಕಳೆಗುಂದಿದೆ. ಬಟ್ಲರ್‌ ನಿರಂತರ ಆರು ಪಂದ್ಯಗಳಲ್ಲಿ ಅರ್ಧಶತಕ ಸಿಡಿಸಿ ದಾಖಲೆ ಬರೆದಿದ್ದಾರೆ. ಆದರೆ ನಾಯಕ ಅಜಿಂಕ್ಯ ರಹಾನೆ, ಸಂಜು ಸ್ಯಾಮ್ಸನ್, ರಾಹುಲ್ ತ್ರಿಪಾಠಿ, ಸ್ಟುವರ್ಟ್‌ ಬಿನ್ನಿ ಸೇರಿದಂತೆ ಪ್ರಮುಖರು ನಿರಂತರ ವೈಫಲ್ಯ ಕಂಡಿರುವುದು ತಂಡದ ಆತಂಕವನ್ನು ಹೆಚ್ಚಿಸಿದೆ.

ತಂಡದ ಬೌಲಿಂಗ್ ಕೂಡ ಪರಿಣಾ ಮಕಾರಿಯಾಗಿಲ್ಲ. ಜಯದೇವ್ ಉನದ್ಕತ್‌, ಧವಲ್ ಕುಲಕರ್ಣಿ ಮತ್ತು ಕೆ.ಗೌತಮ್‌ ಅವರಿಗೆ ನಿರೀಕ್ಷಿತ ಸಾಮರ್ಥ್ಯ ತೋರಲು ಆಗಲಿಲ್ಲ. ಹೀಗಾಗಿ ತಂಡದ ಬೌಲಿಂಗ್‌ ವಿಭಾಗದ ಜವಾಬ್ದಾರಿ ಈಗ ಜೊಫ್ರಾ ಆರ್ಚರ್ ಅವರ ಹೆಗಲ ಮೇಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.