ADVERTISEMENT

ಆರ್‌ಸಿಬಿ ಕನಸಿಗೆ ಸನ್‌ರೈಸರ್ಸ್‌ ಪೆಟ್ಟು

ಅರ್ಧಶತಕ ಗಳಿಸಿದ ನಾಯಕ ಕೇನ್‌ ವಿಲಿಯಮ್ಸನ್‌; ವೇಗಿ, ಸ್ಪಿನ್‌ ಬೌಲರ್‌ಗಳು ಮಾಡಿದ ಮೋಡಿ

ಪಿಟಿಐ
Published 7 ಮೇ 2018, 19:30 IST
Last Updated 7 ಮೇ 2018, 19:30 IST
ಆರ್‌ಸಿಬಿ ಕನಸಿಗೆ ಸನ್‌ರೈಸರ್ಸ್‌ ಪೆಟ್ಟು
ಆರ್‌ಸಿಬಿ ಕನಸಿಗೆ ಸನ್‌ರೈಸರ್ಸ್‌ ಪೆಟ್ಟು   

ಹೈದರಾಬಾದ್‌: ಎಂಥ ಸವಾಲನ್ನು ಕೂಡ ಮೆಟ್ಟಿ ನಿಂತು ಜಯ ಗಳಿಸಲು ಸಾಧ್ಯ ಎಂಬುದನ್ನು ಸನ್‌ರೈಸರ್ಸ್‌ ಹೈದರಾಬಾದ್ ತಂಡ ಮತ್ತೊಮ್ಮೆ ಸಾಬೀತು ಮಾಡಿತು.

ರಾಜೀವ್‌ ಗಾಂಧಿ ಕ್ರೀಡಾಂಗಣದಲ್ಲಿ ಸೋಮವಾರ ರಾತ್ರಿ ನಡೆದ ಐಪಿಎಲ್‌ ಪಂದ್ಯದಲ್ಲಿ ಈ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವಿರುದ್ಧ ಐದು ರನ್‌ಗಳಿಂದ ಗೆದ್ದಿತು.

147 ರನ್‌ಗಳ ಗುರಿ ಬೆನ್ನತ್ತಿದ ಆರ್‌ಸಿಬಿಗೆ ಆರು ವಿಕೆಟ್ ಕಳೆದುಕೊಂಡು 141 ರನ್‌ ಗಳಿಸಲಷ್ಟೇ ಸಾಧ್ಯವಾಯಿತು. ಈ ಸೋಲಿನೊಂದಿಗೆ ಪ್ಲೇ ಆಫ್ ಹಂತಕ್ಕೆ ಏರುವ ವಿರಾಟ್ ಕೊಹ್ಲಿ ಬಳಗದ ಕನಸು ಬಹುತೇಕ ಕಮರಿತು.

ADVERTISEMENT

ಆತಿಥೇಯರನ್ನು ಸಾಧಾರಣ ಮೊತ್ತಕ್ಕೆ ಕಟ್ಟಿ ಹಾಕಿದ ಆರ್‌ಸಿಬಿ ಭರವಸೆಯಿಂದಲೇ ಬ್ಯಾಟಿಂಗ್ ಆರಂಭಿಸಿತು. ಆದರೆ ನಾಯಕ ವಿರಾಟ್ ಕೊಹ್ಲಿ ಒಳಗೊಂಡಂತೆ ಪ್ರಮುಖ ಬ್ಯಾಟ್ಸ್‌ಮನ್‌ಗಳು ಸನ್‌ರೈಸರ್ಸ್‌ನ ಚುರುಕಿನ ಬೌಲಿಂಗ್‌ಗೆ ತಲೆಬಾಗಿದರು.

12ನೇ ಓವರ್‌ನಲ್ಲಿ 84 ರನ್‌ಗಳಿಗೆ ಐದು ವಿಕೆಟ್ ಕಳೆದುಕೊಂಡಿದ್ದ ತಂಡಕ್ಕೆ ಕಾಲಿನ್ ಡಿ ಗ್ರ್ಯಾಂಡ್‌ಹೋಮ್ ಮತ್ತು ಮನದೀಪ್‌ ಸಿಂಗ್ ಭರವಸೆ ಮೂಡಿಸಿದರು. ಸ್ಪಿನ್ ಮತ್ತು ವೇಗದ ದಾಳಿಯನ್ನು ಸಮರ್ಥವಾಗಿ ಮೆಟ್ಟಿನಿಂತ ಈ ಜೋಡಿ ತಂಡವನ್ನು ಗೆಲುವಿನ ಅಂಚಿಗೆ ತಲುಪಿಸಿತ್ತು. ಆದರೆ ಅಂತಿಮ ಓವರ್‌ಗಳಲ್ಲಿ ಬೌಲರ್‌ಗಳು ಮತ್ತೆ ಆಧಿಪತ್ಯ ಸ್ಥಾಪಿಸಿದರು. ಅಂತಿಮ ಓವರ್‌ ಹಾಕಿದ ಭುವನೇಶ್ವರ್ ಕುಮಾರ್‌ ಕೇವಲ ಆರು ರನ್‌ ನೀಡಿದ ಭುನವೇಶ್ವರ್ ಕುಮಾರ್ ಆರ್‌ಸಿಬಿಯ ಕನಸನ್ನು ನುಚ್ಚು ನೂರು ಮಾಡಿದರು.

ಸಿರಾಜ್‌, ಟಿಮ್ ಸೌಥಿ ಮಿಂಚು
ಟಾಸ್ ಗೆದ್ದು ಬೌಲಿಂಗ್ ಮಾಡಿದ ಆರ್‌ಸಿಬಿ ಪರ ಸ್ಥಳೀಯ ಆಟಗಾರ ಮೊಹಮ್ಮದ್ ಸಿರಾಜ್‌ ಮತ್ತು ನ್ಯೂಜಿಲೆಂಡ್‌ನ ವೇಗಿ ಟಿಮ್ ಸೌಥಿ ಮಿಂಚಿದರು. ತಲಾ ಮೂರು ವಿಕೆಟ್‌ ಉರುಳಿಸಿದ ಇವರಿಬ್ಬರ ದಾಳಿಯಿಂದಾಗಿ ಸನ್‌ರೈಸರ್ಸ್ ಸಾಧಾರಣ ಮೊತ್ತಕ್ಕೆ ಕುಸಿಯಿತು. ನಾಯಕ ಕೇನ್ ವಿಲಿಯಮ್ಸನ್‌ ಮತ್ತು ಶಕೀಬ್‌ ಅಲ್ ಹಸನ್‌ ತೋರಿದ ಪ್ರತಿರೋಧ ಒಡ್ಡದೇ ಇದ್ದಿದ್ದರೆ ತಂಡ 140 ರನ್‌ ದಾಟುವುದೂ ಕಷ್ಟವಾಗುತ್ತಿತ್ತು.

ಮೂರನೇ ಓವರ್‌ನಲ್ಲಿ ಟಿಮ್ ಸೌಥಿ ಆರ್‌ಸಿಬಿ ಪಾಳಯದಲ್ಲಿ ಸಂಭ್ರಮ ಉಕ್ಕಿಸಿದರು. ಅಪಾಯಕಾರಿ ಅಲೆಕ್ಸ್ ಗೇಲ್ಸ್ ಅವರನ್ನು ಸೌಥಿ ಬೌಲ್ಡ್‌ ಮಾಡಿದರು. ಆರನೇ ಓವರ್‌ನಲ್ಲಿ ದಾಳಿಗೆ ಇಳಿದ ಮೊಹಮ್ಮದ್ ಸಿರಾಜ್‌ ಎಡಗೈ ಬ್ಯಾಟ್ಸ್‌ಮನ್‌ ಶಿಖರ್ ಧವನ್ ವಿಕೆಟ್ ಉರುಳಿಸಿದರು. ಬೌನ್ಸ್ ಆದ ಎಸೆತವನ್ನು ಶಿಖರ್‌ ಪುಲ್ ಮಾಡಿದರು. ಫೈನ್‌ಲೆಗ್‌ನಲ್ಲಿದ್ದ ಸೌಥಿ ಸುಲಭ ಕ್ಯಾಚ್ ಪಡೆದರು.

ನಾಯಕ ಕೇನ್‌ ವಿಲಿಯಮ್ಸನ್ ಅವರ ಜೊತೆಗೂಡಿದ ಕನ್ನಡಿಗ ಮನೀಷ್ ಪಾಂಡೆ ನಿರಾಸೆ ಮೂಡಿಸಿದರು. ಕೇವಲ ಐದು ರನ್ ಗಳಿಸಿದ ಅವರು ಲೆಗ್ ಸ್ಪಿನ್ನರ್‌ ಯಜುವೇಂದ್ರ ಚಾಹಲ್ ಎಸೆತದಲ್ಲಿ ವಿರಾಟ್‌ ಕೊಹ್ಲಿಗೆ ಕ್ಯಾಚ್ ನೀಡಿದರು.

ಅರ್ಧಶತಕದ ಮಿಂಚು
48 ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡಿದ್ದ ತಂಡಕ್ಕೆ ವಿಲಿಯಮ್ಸನ್‌ ಮತ್ತು ಎಡಗೈ ಬ್ಯಾಟ್ಸ್‌ಮನ್ ಶಕೀಬ್ ಅಲ್‌ ಹಸನ್‌ ಬಲ ತುಂಬಿದರು. ವಿಲಿಯಮ್ಸನ್‌ 39 ಎಸೆತಗಳಲ್ಲಿ 56 ರನ್ ಸಿಡಿಸಿದರು. ಎರಡು ಸಿಕ್ಸರ್ ಮತ್ತು ಐದು ಬೌಂಡರಿಗಳು ಅವರ ಇನಿಂಗ್ಸ್‌ನಲ್ಲಿದ್ದವು. ಅವರನ್ನು ಉಮೇಶ್‌ ಯಾದವ್ ಔಟ್ ಮಾಡಿದರು.

ನಂತರ ವಿಕೆಟ್‌ಗಳು ನಿರಂತರವಾಗಿ ಉರುಳಿದವು. ಯೂಸುಫ್‌ ಪಠಾಣ್‌ ಮತ್ತು ವೃದ್ಧಿಮಾನ್ ಸಹಾ ಅವರನ್ನು ಸಿರಾಜ್‌ ಬೌಲ್ಡ್ ಮಾಡಿದರೆ ರಶೀದ್ ಖಾನ್‌ ಮತ್ತು ಸಿದ್ಧಾರ್ಥ್ ಕೌಲ್ ರನೌಟ್ ಆದರು. ಅಂತಿಮ ಎಸೆತದಲ್ಲಿ ಸಂದೀಪ್ ಶರ್ಮಾ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು. ಕೊನೆಯ ಐವರು ಸೇರಿದಂತೆ ಒಟ್ಟು ಏಳು ಬ್ಯಾಟ್ಸ್‌ಮನ್‌ ಎರಡಂಕಿ ಮೊತ್ತ ತಲುಪಲಾಗದೆ ಔಟಾದರು. ಅಂತಿಮ ಆರು ವಿಕೆಟ್‌ಗಳು 34 ರನ್‌ಗಳಿಗೆ ಉರುಳಿದವು.

*

*

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.