ADVERTISEMENT

ಆಲ್‌ರೌಂಡ್ ಆಟ ಗೆಲುವಿಗೆ ಕಾರಣ

​ಪ್ರಜಾವಾಣಿ ವಾರ್ತೆ
Published 17 ಜೂನ್ 2013, 19:59 IST
Last Updated 17 ಜೂನ್ 2013, 19:59 IST

ಕಾರ್ಡಿಫ್ (ಪಿಟಿಐ): `ಬ್ಯಾಟಿಂಗ್, ಬೌಲಿಂಗ್ ಮತ್ತು ಕ್ಷೇತ್ರರಕ್ಷಣೆ ಮೂರು ವಿಭಾಗಗಳಲ್ಲಿ ತೋರಿದ ಆಲ್‌ರೌಂಡ್ ಪ್ರದರ್ಶನ ತಂಡದ ಗೆಲುವಿಗೆ ಕಾರಣ. ಜಯ ಅನಿವಾರ್ಯವಾಗಿದ್ದ ಪಂದ್ಯದಲ್ಲಿ ಯಶಸ್ಸು ಸಾಧಿಸಿದ್ದಕ್ಕೆ ಖುಷಿಯಾಗಿದೆ' ಎಂದು ಇಂಗ್ಲೆಂಡ್ ತಂಡದ ನಾಯಕ ಅಲಸ್ಟೇರ್ ಕುಕ್ ಹೇಳಿದರು.

`ನ್ಯೂಜಿಲೆಂಡ್ ತಂಡದ ಕೇನ್ ವಿಲಿಮ್ಸನ್ ವೇಗವಾಗಿ ರನ್ ಕಲೆ ಹಾಕಿದರು. ಈ ಸಂದರ್ಭ ಪಂದ್ಯ ಕೈ ಜಾರಲಿದೆಯೇ ಎನ್ನುವ ಆತಂಕ ಎದುರಾಗಿತ್ತು. ಅದರಲ್ಲೂ ಕೊನೆಯ ಓವರ್‌ಗಳಲ್ಲಿ ಸಾಕಷ್ಟು ಒತ್ತಡಕ್ಕೆ ಒಳಗಾದೆವು. ಆದರೆ, ನಮ್ಮ ಆಟಗಾರರು ಬಿಗುವಿನ ಕ್ಷೇತ್ರರಕ್ಷಣೆ ತೋರಿದ್ದರಿಂದ ಗೆಲುವು ಸಾಧ್ಯವಾಯಿತು. ಈ ಜಯದಲ್ಲಿ ಬೌಲರ್‌ಗಳ ಪಾತ್ರ ಬಹುಮುಖ್ಯವಾಗಿದೆ' ಎಂದು ಪಂದ್ಯ ಶ್ರೇಷ್ಠ ಗೌರವ ಪಡೆದ ಕುಕ್ ನುಡಿದರು.

ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ತಂಡ ನ್ಯೂಜಿಲೆಂಡ್ ತಂಡವನ್ನು ಮಣಿಸಿತ್ತು. ಮೊದಲು ಬ್ಯಾಟ್ ಮಾಡಿ ಕುಕ್ ಪಡೆ 23.3 ಓವರ್‌ಗಳಲ್ಲಿ 169 ರನ್ ಗಳಿಸಿತ್ತು. ಇದಕ್ಕುತ್ತರವಾಗಿ ಕಿವೀಸ್ 24 ಓವರ್‌ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 159 ರನ್ ಕಲೆ ಹಾಕಿತ್ತು. ಹತ್ತು ರನ್ ಗೆಲುವು ಸಾಧಿಸಿದ ಆತಿಥೇಯರು `ಎ' ಗುಂಪಿನಿಂದ ಸೆಮಿಫೈನಲ್ ಪ್ರವೇಶಿಸಿದ್ದಾರೆ.

ಮೆಚ್ಚುಗೆ: `ಇಂಗ್ಲೆಂಡ್ ತಂಡದ ವೇಗಿಗಳು ಅತ್ಯುತ್ತಮ ಬೌಲಿಂಗ್ ಮಾಡಿದರು. ಪಂದ್ಯದ ಒಂದು ಹಂತದಲ್ಲಿ ನಮ್ಮ ತಂಡಕ್ಕೆ ಗೆಲುವು ಸಾಧಿಸಲು ಅವಕಾಶವಿತ್ತು. ಎದುರಾಳಿ ತಂಡ ಇನಿಂಗ್ಸ್ ಆರಂಭದಿಂದಲೇ ಉತ್ತಮ ಪ್ರದರ್ಶನ ತೋರಿತು' ಎಂದು ನ್ಯೂಜಿಲೆಂಡ್ ತಂಡದ ನಾಯಕ ಬ್ರೆಂಡನ್ ಮೆಕ್ಲಮ್ ಪ್ರಶಂಸೆ ವ್ಯಕ್ತಪಡಿಸಿದರು.

`ಗೆಲುವಿಗೆ ಸವಾಲಿನ ಗುರಿಯಿದ್ದರೂ ನಮ್ಮ ತಂಡದ ಬ್ಯಾಟ್ಸ್‌ಮನ್‌ಗಳು ತೋರಿದ ಹೋರಾಟ ಖುಷಿ ನೀಡಿದೆ. ಗುರಿ ಮುಟ್ಟುವ ಹಾದಿಯಲ್ಲಿ ವಿಕೆಟ್ ಕಳೆದುಕೊಂಡಿದ್ದರಿಂದ ಒತ್ತಡಕ್ಕೆ ಒಳಗಾಗಬೇಕಾಯಿತು. ಆದರೂ, ಇಂಗ್ಲೆಂಡ್ ತಂಡವನ್ನು ಸೋಲಿಸಲು ಸಾಧ್ಯವಿತ್ತು' ಎಂದೂ ಮೆಕ್ಲಮ್ ಅಭಿಪ್ರಾಯಪಟ್ಟರು.

`ತಂಡವನ್ನು ಗೆಲುವಿನ ಹಾದಿಗೆ ಕೊಂಡೊಯ್ಯುವಲ್ಲಿ ಹೋರಾಟ ನಡೆಸಿದ್ದ ಕೇನ್ ವಿಲಿಮ್ಸನ್ ವಿವಾದಾತ್ಮಕ ತೀರ್ಪಿಗೆ ಬಲಿಯಾದರು' ಎಂದು ಅವರು ಬೇಸರ ವ್ಯಕ್ತಪಡಿಸಿದರು. ವೇಗಿ ಸ್ಟುವರ್ಟ್ ಬ್ರಾಡ್ ಎಸೆತದಲ್ಲಿ ವಿಲಿಮ್ಸನ್ 21.2ನೇ ಓವರ್‌ನಲ್ಲಿ ಔಟ್ ಆಗಿದ್ದರು. ಆದರೆ, ಆ ಎಸೆತ ನೋ ಬಾಲ್ ಆಗಿರುವುದು ಟಿವಿ ರಿಪ್ಲೇಯಲ್ಲಿ ಸ್ಪಷ್ಟವಾಗಿತ್ತು. ಆದರೆ, ಅಂಪೈರ್ ಔಟ್ ಎಂದು ತೀರ್ಪು ನೀಡಿದರು ಎಂದು ಮೆಕ್ಲಮ್ ನುಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.