ADVERTISEMENT

ಆಳ್ವಾಸ್‌ಗೆ ಸಮಗ್ರ ಪ್ರಶಸ್ತಿ

ಅಂತರ ಕಾಲೇಜು ಕ್ರೀಡಾಕೂಟ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2013, 19:30 IST
Last Updated 12 ಡಿಸೆಂಬರ್ 2013, 19:30 IST

ಮಂಗಳೂರು: ನಗರದ ಮಂಗಳಾ ಕ್ರೀಡಾಂಗಣದಲ್ಲಿ ಮೂರು ದಿನಗಳಿಂದ ನಡೆದ ‘ಮಂಗಳೂರು ವಿಶ್ವವಿದ್ಯಾಲಯ ಅಂತರ ಕಾಲೇಜು ಮಟ್ಟದ 33ನೇ ಅಥ್ಲೆಟಿಕ್‌ ಕ್ರೀಡಾಕೂಟ’ದಲ್ಲಿ ಆಳ್ವಾಸ್‌ ಕಾಲೇಜು ಸತತ 12ನೇ ಬಾರಿಗೆ ಸಮಗ್ರ ಚಾಂಪಿಯನ್‌ ಆಗಿ ಹೊರಹೊಮ್ಮಿದೆ.

280 ಅಂಕಗಳನ್ನು ಗಳಿಸಿ ಸಮಗ್ರ ಚಾಂಪಿಯನ್‌ಶಿಪ್‌ ಗಳಿಸಿದ ಮೂಡುಬಿದಿರೆಯ ಆಳ್ವಾಸ್‌ ಕಾಲೇಜು ತಂಡ ಪುರುಷರ ವಿಭಾಗದಲ್ಲಿ 134 ಅಂಕಗಳೊಂದಿಗೆ ತಂಡ ಪ್ರಶಸ್ತಿಯನ್ನೂ ಗೆದ್ದುಕೊಂಡಿತು. ಎರಡನೇ ಸ್ಥಾನ ಪಡೆದ ಉಜಿರೆಯ ಎಸ್‌ಡಿಎಂ ಕಾಲೇಜು ತಂಡ 46 ಅಂಕ ಗಳಿಸಿದೆ. ಮಂಗಳೂರು ವಿಶ್ವವಿದ್ಯಾಲಯ ಕ್ಯಾಂಪಸ್‌ 17 ಅಂಕಗಳೊಂದಿಗೆ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.

ಮಹಿಳಾ ವಿಭಾಗದಲ್ಲಿಯೂ ತಂಡ ಪ್ರಶಸ್ತಿ ಗೆದ್ದಿರುವ ಆಳ್ವಾಸ್‌ ಕಾಲೇಜು 146 ಅಂಕಗಳೊಂದಿಗೆ ಉಜಿರೆಯ ಎಸ್‌ಡಿಎಂ ತಂಡವನ್ನು (46 ಅಂಕ) ಮಣಿಸಿದೆ. 15 ಅಂಕಗಳೊಂದಿಗೆ ಮಂಗಳೂರು ವಿಶ್ವವಿದ್ಯಾಲಯ ಕ್ಯಾಂಪಸ್‌ ತಂಡ ತೃತೀಯ ಸ್ಥಾನ ಗಳಿಸಿದೆ.

ಪುರುಷರ ವೈಯಕ್ತಿಕ ವಿಭಾಗದಲ್ಲಿ ಮೂಡುಬಿದಿರೆಯ ಆಳ್ವಾಸ್‌ ಕಾಲೇಜಿನ ಸೋನಿತ್‌ ಮೆಂಡನ್‌ (1004 ಅಂಕ), ಮಹಿಳಾ ವಿಭಾಗದಲ್ಲೂ ಅದೇ ಕಾಲೇಜಿನ ಭುವಿ ಜಿ.ಶಂಕರ್‌ (987 ಅಂಕ) ಚಾಂಪಿಯನ್‌ ಆಗಿದ್ದಾರೆ.

ಗುರುವಾರ ನಡೆದ ಸ್ಪರ್ಧೆಯಲ್ಲಿ ಆಳ್ವಾಸ್‌ ಕಾಲೇಜಿನ ಖಾಸಿಂ ಅವರು ಹ್ಯಾಮರ್‌ ಎಸೆತದಲ್ಲಿ ದಾಖಲೆ ಮಾಡಿದ್ದಾರೆ. 2012 ರಲ್ಲಿ ಎಸ್‌ಡಿಎಂ ಕಾಲೇಜಿನಲ್ಲಿದ್ದ ಖಾಸಿಂ 52.34 ಮೀ. ಎಸೆದು ದಾಖಲೆ ನಿರ್ಮಿಸಿದ್ದರು. ಆ ದಾಖಲೆಯನ್ನು ಈ ಬಾರಿ (53.01 ಮೀ) ಸುಧಾರಿಸಿದ್ದಾರೆ.

4X100 ಮೀ. ರಿಲೆಯಲ್ಲೂ ಆಳ್ವಾಸ್‌ ಕಾಲೇಜು 2007ರಲ್ಲಿ ಮಾಡಿದ್ದ ತನ್ನದೇ ದಾಖಲೆಯನ್ನು (3.22.7 ಸೆ.) ಈ ಬಾರಿ (3.19.9 ಸೆ.) ಸುಧಾರಿಸಿದೆ. ಮಹಿಳಾ ವಿಭಾಗದ 4X100 ಮೀ. ರಿಲೇಯಲ್ಲಿ 2010ರಲ್ಲಿ ಆಳ್ವಾಸ್‌ ಕಾಲೇಜು ತಂಡ ಮಾಡಿದ್ದ ದಾಖಲೆಯನ್ನು (49.7 ಮೀ) ಈ ಬಾರಿ ಅದೇ ಕಾಲೇಜು ತಂಡ (49.2 ಸೆ.) ಹಿಂದಿಕ್ಕಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.