ADVERTISEMENT

ಆಸ್ಟ್ರೇಲಿಯಾಕ್ಕೆ ಭರ್ಜರಿ ಗೆಲುವು

ಆ್ಯಷಸ್‌ ಟೆಸ್ಟ್‌: ಸರಣಿಯಲ್ಲಿ 2–0 ಮುನ್ನಡೆ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2013, 19:30 IST
Last Updated 9 ಡಿಸೆಂಬರ್ 2013, 19:30 IST

ಅಡಿಲೇಡ್‌ (ಎಎಫ್‌ಪಿ): ಅಂತಿಮ ದಿನದಾಟದಲ್ಲಿ ಯಾವುದೇ ಪವಾಡ ನಡೆಯಲಿಲ್ಲ. ಆ್ಯಷಸ್‌ ಟೆಸ್ಟ್‌ ಸರಣಿಯ ಎರಡನೇ ಪಂದ್ಯದಲ್ಲಿ ಆಸೀಸ್‌ ನಿರೀಕ್ಷೆಯಂತೆಯೇ ಜಯ ಸಾಧಿಸಿತು.

ಅಡಿಲೇಡ್‌ ಓವಲ್‌ ಕ್ರೀಡಾಂಗಣದಲ್ಲಿ ಸೋಮವಾರ ಕೊನೆಗೊಂಡ ಪಂದ್ಯದಲ್ಲಿ ಇಂಗ್ಲೆಂಡ್‌ ತಂಡವನ್ನು 218 ರನ್‌ಗಳಿಂದ ಮಣಿಸಿದ ಆತಿಥೇಯರು ಸರಣಿಯಲ್ಲಿ 2-0ರ ಮಹತ್ವದ ಮುನ್ನಡೆ ಪಡೆದುಕೊಂಡರು.

ಗೆಲುವಿಗೆ 531 ರನ್‌ಗಳ ಗುರಿ ಬೆನ್ನಟ್ಟಿದ್ದ ಅಲಸ್ಟೇರ್‌ ಕುಕ್‌ ಬಳಗ ಭಾನುವಾರದ ಆಟದ ಅಂತ್ಯಕ್ಕೆ 6 ವಿಕೆಟ್‌ಗೆ 247 ರನ್‌ ಗಳಿಸಿ ಸೋಲಿನ ಸುಳಿಯಲ್ಲಿ ಸಿಲುಕಿತ್ತು. ಅಂತಿಮ ದಿನ ಆಟ ಮುಂದುವರಿಸಿದ ಪ್ರವಾಸಿ ತಂಡ 101.4 ಓವರ್‌ಗಳಲ್ಲಿ 312 ರನ್‌ಗಳಿಗೆ ಆಲೌಟಾಯಿತು.

ಪ್ರಭಾವಿ ಬೌಲಿಂಗ್‌ ಪ್ರದರ್ಶನ ನೀಡಿದ ಪೀಟರ್‌ ಸಿಡ್ಲ್‌ (57ಕ್ಕೆ 4) ಮತ್ತು ರ್‍್ಯಾನ್‌ ಹ್ಯಾರಿಸ್‌ (54ಕ್ಕೆ 3) ಆಸೀಸ್‌ ಗೆಲುವನ್ನು ಸುಲಭಗೊಳಿಸಿದರು.

ಮ್ಯಾಟ್‌ ಪ್ರಯರ್‌ ಮತ್ತು ಸ್ಟುವರ್ಟ್‌ ಬ್ರಾಡ್‌ ಕ್ರಮವಾಗಿ 31 ಹಾಗೂ 22 ರನ್‌ಗಳಿಂದ ಆಟ ಮುಂದುವರಿಸಿದ್ದರು. ಬ್ರಾಡ್‌ (29) ವಿಕೆಟ್‌ ಪಡೆದ ಸಿಡ್ಲ್‌ ಎದುರಾಳಿಗೆ ದಿನದ ಮೊದಲ ಆಘಾತ ನೀಡಿದರು.

ಗ್ರೇಮ್‌ ಸ್ವಾನ್‌ (6) ವಿಕೆಟ್‌ ಹ್ಯಾರಿಸ್‌ ಪಾಲಾಯಿತು. ವೇಗವಾಗಿ ರನ್‌ ಪೇರಿಸಿದ ಪ್ರಯರ್‌ (69, 12 ಬೌಂಡರಿ) ಅವರನ್ನು ಸಿಡ್ಲ್‌ ಔಟ್‌ ಮಾಡಿದರು. ಅಲ್ಪ ಸಮಯದ ಬಳಿಕ ಮಾಂಟಿ ಪನೇಸರ್‌ (0) ವಿಕೆಟ್‌ ಪಡೆದ ಹ್ಯಾರಿಸ್‌ ಆಸೀಸ್‌ ಗೆಲುವಿನ ವ್ಯವಹಾರನ್ನು ಪೂರ್ಣಗೊಳಿಸಿದರು.

ಬ್ರಿಸ್ಬೇನ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಮೈಕಲ್‌ ಕ್ಲಾರ್ಕ್‌ ಬಳಗ 381 ರನ್‌ಗಳ ಭರ್ಜರಿ ಗೆಲುವು ಪಡೆದಿತ್ತು. ಇದೀಗ ಸರಣಿ ಗೆಲುವು ಪಡೆಯಬೇಕಾದರೆ ಮುಂದಿನ ಮೂರೂ ಪಂದ್ಯಗಳಲ್ಲಿ ಗೆಲುವು ಪಡೆಯುವ ಅನಿವಾರ್ಯತೆ ಇಂಗ್ಲೆಂಡ್‌ಗೆ ಒದಗಿದೆ.

ಸಂಕ್ಷಿಪ್ತ ಸ್ಕೋರ್‌: ಆಸ್ಟ್ರೇಲಿಯಾ: ಮೊದಲ ಇನಿಂಗ್ಸ್‌: 158 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 570 ಡಿಕ್ಲೇರ್ಡ್‌  ಮತ್ತು ಎರಡನೇ ಇನಿಂಗ್ಸ್‌ 39 ಓವರ್‌ಗಳಲ್ಲಿ 3 ವಿಕೆಟ್‌ಗೆ 132 ಡಿಕ್ಲೇರ್ಡ್‌; ಇಂಗ್ಲೆಂಡ್‌: ಮೊದಲ ಇನಿಂಗ್ಸ್‌ 68.2 ಓವರ್‌ಗಳಲ್ಲಿ 172 ಮತ್ತು ಎರಡನೇ ಇನಿಂಗ್ಸ್‌ 101.4 ಓವರ್‌ಗಳಲ್ಲಿ 312 (ಮ್ಯಾಟ್‌ ಪ್ರಯರ್‌ 69, ಸ್ಟುವರ್ಟ್‌ ಬ್ರಾಡ್‌ 29, ಜೇಮ್ಸ್‌ ಆ್ಯಂಡರ್‌ಸನ್‌ ಔಟಾಗದೆ 13, ಪೀಟರ್‌ ಸಿಡ್ಲ್‌ 57ಕ್ಕೆ 4, ರ್‍್ಯಾನ್‌ ಹ್ಯಾರಿಸ್‌ 54ಕ್ಕೆ 3) ಫಲಿತಾಂಶ:  ಆಸ್ಟ್ರೇಲಿಯಾಕ್ಕೆ 218 ರನ್‌ ಗೆಲುವು, ಪಂದ್ಯಶ್ರೇಷ್ಠ: ಮಿಷೆಲ್‌ ಜಾನ್ಸನ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.