ADVERTISEMENT

ಆಸ್ಟ್ರೇಲಿಯಾಕ್ಕೆ ಮಣಿದ ಭಾರತ

ಮಹಿಳಾ ಕ್ರಿಕೆಟ್ ಅಭ್ಯಾಸ ಪಂದ್ಯ

​ಪ್ರಜಾವಾಣಿ ವಾರ್ತೆ
Published 29 ಜನವರಿ 2013, 19:59 IST
Last Updated 29 ಜನವರಿ 2013, 19:59 IST
ಮುಂಬೈಯಲ್ಲಿ ಬುಧವಾರ ನಡೆದ ಆಸ್ಟ್ರೇಲಿಯಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಭಾರತದ ರೀಮಾ ಮಲ್ಹೋತ್ರಾ ಹೊಡೆತಕ್ಕೆ ಮುಂದಾಗಿದ್ದು ಹೀಗೆ	-ಪಿಟಿಐ ಚಿತ್ರ
ಮುಂಬೈಯಲ್ಲಿ ಬುಧವಾರ ನಡೆದ ಆಸ್ಟ್ರೇಲಿಯಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಭಾರತದ ರೀಮಾ ಮಲ್ಹೋತ್ರಾ ಹೊಡೆತಕ್ಕೆ ಮುಂದಾಗಿದ್ದು ಹೀಗೆ -ಪಿಟಿಐ ಚಿತ್ರ   

ಮುಂಬೈ (ಪಿಟಿಐ): ಅಲ್ಪ ಮೊತ್ತದ ಗುರಿಯನ್ನು ಸುಲಭವಾಗಿ ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡದವರು ಇಲ್ಲಿ ಮಂಗಳವಾರ ನಡೆದ ಭಾರತ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಐದು ವಿಕೆಟ್‌ಗಳ ಸುಲಭ ಗೆಲುವು ಸಾಧಿಸಿದರು.

ಟಾಸ್ ಗೆದ್ದ ಆತಿಥೇಯ ತಂಡದವರು ಮೊದಲು ಬ್ಯಾಟಿಂಗ್ ಆರಿಸಿಕೊಂಡರು. ಈ ತಂಡ ನಿಗದಿತ 50 ಓವರ್‌ಗಳಲ್ಲಿ ಎಂಟು ವಿಕೆಟ್ ಕಳೆದುಕೊಂಡು 222 ರನ್ ಕಲೆ ಹಾಕಿತು. ಉತ್ತಮ ಆರಂಭ ಪಡೆದರೂ, ನಂತರದಲ್ಲಿ ವೇಗವಾಗಿ ರನ್ ಕಲೆ ಹಾಕುವಲ್ಲಿ ವಿಫಲವಾಯಿತು.

ಭಾರತ 101 ರನ್ ಗಳಿಸಿದ್ದ ವೇಳೆ ಆರಂಭಿಕ ಆಟಗಾರ್ತಿ ಪೂನಮ್ ರಾವತ್ (31), ಮೊನಾ ಮೆಶ್ರಾಮ್ (25) ಹಾಗೂ ಕರುಣಾ ಜೈನ್ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಕೊನೆಯಲ್ಲಿ ಎನ್. ನಿರಂಜನಾ (ಔಟಾಗದೆ 35) ರನ್  ಗಳಿಸಿ ತಂಡವನ್ನು 200 ರನ್‌ಗಳ ಗಡಿ ದಾಟುವಂತೆ ಮಾಡಿದರು.

ಈ ಮೊತ್ತವನ್ನು ಆಸ್ಟ್ರೇಲಿಯಾ 38.3 ಓವರ್‌ಗಳಲ್ಲಿ ಐದು ವಿಕೆಟ್ ಕಳೆದುಕೊಂಡು ತಲುಪಿತು. ಅಲೆಕ್ಸ್ ಬ್ಲಾಕ್‌ವೆಲ್ (47) ಹಾಗೂ ನಾಯಕಿ ಜೋಡಿಯೆ ಫೀಲ್ಡ್ಸ್ (52) ರನ್ ಗಳಿಸಿ ತಂಡಕ್ಕೆ ಗೆಲುವು ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಮೊದಲ ಅಭ್ಯಾಸ ಪಂದ್ಯದಲ್ಲಿ ಆತಿಥೇಯರು ನ್ಯೂಜಿಲೆಂಡ್ ಎದುರು ಗೆಲುವು ಪಡೆದಿದ್ದರು.

ಸಂಕ್ಷಿಪ್ತ ಸ್ಕೋರು: ಭಾರತ 50 ಓವರ್‌ಗಳಲ್ಲಿ 8 ವಿಕೆಟ್‌ಗೆ 222 (ಪೂನಮ್ ರಾವತ್ 31, ಮೊನಾ ಮೆಶ್ರಾಮ್ 25, ಹರ್ಮಪ್ರೀತ್ ಕೌರ್ 10, ರೀಮಾ ಮಲ್ಹೋತ್ರಾ 35, ಅಮಿತಾ ಶರ್ಮಾ 18, ಎನ್. ನಿರಂಜನಾ ಔಟಾಗದೆ 35; ಲೀಸಾ ಸ್ಟೆಲೆಕರ್ 29ಕ್ಕೆ3, ಹೋಲಿ ಫೆರ್ಲಿಂಗ್ 30ಕ್ಕೆ1). ಆಸ್ಟ್ರೇಲಿಯಾ 38.3 ಓವರ್‌ಗಳಲ್ಲಿ 5 ವಿಕೆಟ್‌ಗೆ 223 (ಜೆಸ್ ಕ್ಯಾಮರೂನ್ 35, ಅಲೆಕ್ಸ್ ಬ್ಲಾಕ್‌ವೆಲ್ 47; ಅಮಿತಾ ಶರ್ಮಾ 26ಕ್ಕೆ2, ಎನ್. ನಿರಂಜನಾ 38ಕ್ಕೆ1). ಫಲಿತಾಂಶ: ಆಸ್ಟ್ರೇಲಿಯಾಕ್ಕೆ 5 ವಿಕೆಟ್ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.