ADVERTISEMENT

ಆಸ್ಟ್ರೇಲಿಯಾ ಎದುರಿನ ಏಕದಿನ ಸರಣಿ: ವೇದಾ, ರಾಜೇಶ್ವರಿಗೆ ಸ್ಥಾನ

ಭಾರತ ತಂಡ ಪ್ರಕಟ; ಮಿಥಾಲಿ ರಾಜ್‌ಗೆ ನಾಯಕತ್ವ

ಪಿಟಿಐ
Published 27 ಫೆಬ್ರುವರಿ 2018, 19:30 IST
Last Updated 27 ಫೆಬ್ರುವರಿ 2018, 19:30 IST
ಮಿಥಾಲಿ ರಾಜ್‌, ವೇದಾ ಕೃಷ್ಣಮೂರ್ತಿ ಮತ್ತು ರಾಜೇಶ್ವರಿ ಗಾಯಕವಾಡ
ಮಿಥಾಲಿ ರಾಜ್‌, ವೇದಾ ಕೃಷ್ಣಮೂರ್ತಿ ಮತ್ತು ರಾಜೇಶ್ವರಿ ಗಾಯಕವಾಡ   

ನವದೆಹಲಿ: ಮುಂಬರುವ ಆಸ್ಟ್ರೇಲಿಯಾ ಎದುರಿನ ಏಕದಿನ ಸರಣಿಗೆ ಪ್ರಕಟಿಸಲಾಗಿರುವ ಭಾರತ ಮಹಿಳಾ ಕ್ರಿಕೆಟ್‌ ತಂಡದಲ್ಲಿ ಕರ್ನಾಟಕದ ವೇದಾ ಕೃಷ್ಣಮೂರ್ತಿ ಮತ್ತು ರಾಜೇಶ್ವರಿ ಗಾಯಕವಾಡ ಸ್ಥಾನ ಗಳಿಸಿದ್ದಾರೆ.

ಬಿಸಿಸಿಐ ರಾಷ್ಟ್ರೀಯ ಆಯ್ಕೆ ಸಮಿತಿ ಮಂಗಳವಾರ 15 ಸದಸ್ಯರ ತಂಡದ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಹಿರಿಯ ಆಟಗಾರ್ತಿ ಮಿಥಾಲಿ ರಾಜ್‌ ತಂಡವನ್ನು ಮುನ್ನಡೆಸಲಿದ್ದಾರೆ. ಹರ್ಮನ್‌ಪ್ರೀತ್‌ ಕೌರ್‌ಗೆ ಉಪ ನಾಯಕಿಯ ಜವಾಬ್ದಾರಿ ನೀಡಲಾಗಿದೆ.

ADVERTISEMENT

ಆಸ್ಟ್ರೇಲಿಯಾ ಎದುರಿನ ಸರಣಿ ಮಾರ್ಚ್‌ 12ರಿಂದ 18ರವರೆಗೆ ವಡೋದರದಲ್ಲಿ ನಡೆಯಲಿದೆ.

ಮಿಥಾಲಿ, ದಕ್ಷಿಣ ಆಫ್ರಿಕಾ ಎದುರಿನ ಸರಣಿಯಲ್ಲಿ ತಂಡವನ್ನು ಪ್ರಶಸ್ತಿಯತ್ತ ಮುನ್ನಡೆಸಿದ್ದರು.

ಟ್ವೆಂಟಿ–20 ಸರಣಿಯಲ್ಲಿ ಹರ್ಮನ್‌ ಪ್ರೀತ್‌, ಭಾರತಕ್ಕೆ ಟ್ರೋಫಿ ಗೆದ್ದುಕೊಟ್ಟಿದ್ದರು. ಐಸಿಸಿ ಮಹಿಳಾ ಚಾಂಪಿಯನ್‌ ಷಿಪ್‌ನ ಅಂಗವಾಗಿ ನಡೆಯುತ್ತಿರುವ ಮೂರು ಪಂದ್ಯಗಳ ಸರಣಿಯ ಮೊದಲ ಹೋರಾಟ ಮಾರ್ಚ್‌ 12ರಂದು ಜರುಗಲಿದೆ.

ಎರಡು ಮತ್ತು ಮೂರನೇ ಪಂದ್ಯಗಳು ಕ್ರಮವಾಗಿ ಮಾರ್ಚ್‌ 15 ಮತ್ತು ಮಾರ್ಚ್‌ 18ರಂದು ನಿಗದಿಯಾಗಿವೆ.

‘ಏಕದಿನ ಸರಣಿಯ ಬಳಿಕ ತ್ರಿಕೋನ ಟ್ವೆಂಟಿ–20 ಸರಣಿ ಜರುಗಲಿದೆ. ಇದಕ್ಕೆ ನಂತರ ತಂಡ ಪ್ರಕಟಿಸಲಾಗುತ್ತದೆ’ ಎಂದು ಬಿಸಿಸಿಐ ಪ್ರಕಟಣೆಯಲ್ಲಿ ಹೇಳಿದೆ.

ತಂಡ ಇಂತಿದೆ: ಮಿಥಾಲಿ ರಾಜ್‌ (ನಾಯಕಿ), ಹರ್ಮನ್‌ಪ್ರೀತ್‌ ಕೌರ್‌ (ಉಪ ನಾಯಕಿ), ಸ್ಮೃತಿ ಮಂದಾನ, ಪೂನಮ್‌ ರಾವುತ್, ಜೆಮಿಮಾ ರಾಡ್ರಿಗಸ್‌, ವೇದಾ ಕೃಷ್ಣಮೂರ್ತಿ, ಮೋನಾ ಮೆಷ್ರಮ್‌, ಸುಷ್ಮಾ ವರ್ಮಾ (ವಿಕೆಟ್‌ ಕೀಪರ್‌), ಏಕ್ತಾ ಬಿಷ್ಠ್‌, ಪೂನಮ್‌ ಯಾದವ್‌, ರಾಜೇಶ್ವರಿ ಗಾಯಕವಾಡ, ಶಿಖಾ ಪಾಂಡೆ, ಸುಕನ್ಯಾ ಪರಿದಾ, ಪೂಜಾ ವಸ್ತ್ರಕರ್‌ ಮತ್ತು ದೀಪ್ತಿ ಶರ್ಮಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.