ADVERTISEMENT

ಆಸ್ಪತ್ರೆಯಿಂದ ಯುವಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2012, 19:30 IST
Last Updated 18 ಮಾರ್ಚ್ 2012, 19:30 IST
ಆಸ್ಪತ್ರೆಯಿಂದ ಯುವಿ ಬಿಡುಗಡೆ
ಆಸ್ಪತ್ರೆಯಿಂದ ಯುವಿ ಬಿಡುಗಡೆ   

ನವದೆಹಲಿ (ಪಿಟಿಐ): ಕ್ರಿಕೆಟಿಗ ಯುವರಾಜ್ ಸಿಂಗ್ ಅವರಿಗೆ ನೀಡಲಾಗುತ್ತಿದ್ದ ಕಿಮೋಥೆರಪಿ ಚಿಕಿತ್ಸೆ ಪೂರ್ಣಗೊಂಡಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಹಾಗಾಗಿ ಯುವಿ ಈಗ ತುಂಬಾ ಉತ್ಸಾಹಿತರಾಗಿದ್ದಾರೆ. ಅವರ ಮೂರನೇ ಹಾಗೂ ಕೊನೆಯ ಕಿಮೋಥೆರಪಿ ಚಿಕಿತ್ಸೆ ಭಾನುವಾರ ಕೊನೆಗೊಂಡಿತು. ಶ್ವಾಸಕೋಶದ ನಡುವೆ ಆಗಿದ್ದ ಗೆಡ್ಡೆ ಕರಗಿಸಲು ಅಮೆರಿಕದ ಬಾಸ್ಟನ್‌ನ ಕ್ಯಾನ್ಸರ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನಲ್ಲಿ ಅವರು ಕಿಮೋಥೆರಪಿ ಚಿಕಿತ್ಸೆ ಪಡೆಯುತ್ತ್ದ್ದಿದರು.

ಬಿಡುಗಡೆಯಾದ ಈ ಸಂತಸವನ್ನು ಅವರು ಟ್ವಿಟರ್ ಮೂಲಕ ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. `ಮೂರನೇ ಕಿಮೋಥೆರಪಿ ಚಿಕಿತ್ಸೆ ಮುಗಿದಿದೆ. ಈಗ ನಾನು ಆಸ್ಪತ್ರೆಯಿಂದ ಹೊರಬಂದಿದ್ದೇನೆ. ಇನ್ನು ಚೇತರಿಕೆ ಹಾದಿ ಶುರುವಾಗಲಿದೆ. ಸ್ವದೇಶಕ್ಕೆ ತೆರಳಲು ಮನಸ್ಸು ತುಡಿಯುತ್ತಿದೆ~ ಎಂದಿದ್ದಾರೆ.

`ನೀವು ತೋರಿಸಿದ ಪ್ರೀತಿಗೆ ನನ್ನ ಧನ್ಯವಾದಗಳು. ಅದು ನನ್ನಲ್ಲಿ ವಿಶ್ವಾಸ ತುಂಬಿತು. ಚಿಕಿತ್ಸೆಗೆ ಸ್ಪಂದಿಸಲು ಸಹಕಾರಿಯಾಯಿತು~ ಎಂದು ಯುವರಾಜ್ ತಿಳಿಸಿದ್ದಾರೆ. ಈ ಕ್ರಿಕೆಟ್ ಆಟಗಾರನ ಶ್ವಾಸಕೋಶದ ಗೆಡ್ಡೆಯು ಮೊದಲ ಸುತ್ತಿನ ಚಿಕಿತ್ಸೆಯಲ್ಲಿಯೇ ಸಂಪೂರ್ಣವಾಗಿ ಹೋಗಿದೆ. ಅದನ್ನು ಈ ಮೊದಲೇ ವೈದ್ಯರು ಖಚಿತಪಡಿಸಿದ್ದರು. ವೈದ್ಯರ ಪ್ರಕಾರ ಮೇ ಮೊದಲ ವಾರದಲ್ಲಿ ಯುವರಾಜ್ ಕ್ರೀಡಾಂಗಣಕ್ಕೆ ಇಳಿಯಬಹುದು.

ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಕಗಳ ಶತಕ ಪೂರೈಸಿದ ಸಚಿನ್ ತೆಂಡೂಲ್ಕರ್ ಅವರನ್ನು ಯುವಿ ಅಭಿನಂದಿಸಿದ್ದಾರೆ. `ತುಂಬಾ ಖುಷಿಯಾಗಿದೆ. ಆ ಸಂದರ್ಭದಲ್ಲಿ ನಾನೂ ಭಾವುಕನಾದೆ. ಅವರ ಸಾಧನೆಗಳು ಅದ್ಭುತ. ಅದನ್ನು ಮತ್ತೊಬ್ಬರಿಗೆ ಸಾಧಿಸಲು ಅಸಾಧ್ಯ~ ಎಂದು ಟ್ವಿಟರ್ ಮೂಲಕ ತಿಳಿಸಿದ್ದಾರೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.