ADVERTISEMENT

ಆ್ಯಷಸ್‌ ಕ್ರಿಕೆಟ್‌: ಸೋಲಿನ ಸುಳಿಯಲ್ಲಿ ಇಂಗ್ಲೆಂಡ್‌

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2013, 19:30 IST
Last Updated 16 ಡಿಸೆಂಬರ್ 2013, 19:30 IST

ಪರ್ತ್‌ (ಎಎಫ್‌ಪಿ): ಇಂಗ್ಲೆಂಡ್‌ ತಂಡದವರು ಇಲ್ಲಿ ನಡೆಯುತ್ತಿರುವ ಆ್ಯಷಸ್‌ ಟೆಸ್ಟ್‌ ಕ್ರಿಕೆಟ್‌ ಸರಣಿಯ ಮೂರನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ಎದುರು ಸೋಲಿನ ಸುಳಿಗೆ ಸಿಲುಕಿದ್ದಾರೆ.

ಡಬ್ಲ್ಯುಎಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಕಾಂಗರೂ ಪಡೆ ನೀಡಿರುವ 504 ರನ್‌ಗಳ ಗುರಿಗೆ ಉತ್ತರವಾಗಿ ಪ್ರವಾಸಿ ಇಂಗ್ಲೆಂಡ್‌ ತಂಡದವರು ತಮ್ಮ ಎರಡನೇ ಇನಿಂಗ್ಸ್‌ನಲ್ಲಿ ನಾಲ್ಕನೇ ದಿನದಾಟದ ಅಂತ್ಯಕ್ಕೆ 67 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 251 ರನ್‌ ಗಳಿಸಿದ್ದಾರೆ. ಗೆಲುವಿಗಾಗಿ ಇನ್ನೂ 253 ರನ್‌ ಬೇಕಿದೆ. ಮಂಗಳವಾರ ಪಂದ್ಯದ ಕೊನೆಯ ದಿನವಾಗಿದೆ.

ಆಸ್ಟ್ರೇಲಿಯಾ ತಂಡದವರು ತಮ್ಮ ಎರಡನೇ ಇನಿಂಗ್ಸ್‌ನಲ್ಲಿ 87 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 369 ರನ್‌ ಗಳಿಸಿ ಡಿಕ್ಲೇರ್‌ ಮಾಡಿಕೊಂಡರು. ಶೇನ್‌ ವಾಟ್ಸನ್‌ ಹಾಗೂ ಜಾರ್ಜ್‌ ಬೇಲಿ ಅವರ ಬಿರುಸಿನ ಆಟ ತಂಡದ ಮೊತ್ತವನ್ನು ಹೆಚ್ಚಿಸಿತು. ವಾಟ್ಸನ್‌ ಕೇವಲ 108 ಎಸೆತಗಳಿಂದ 103 ರನ್‌ ಗಳಿಸಿದರು. ಅವರ ಈ ಆಟದಲ್ಲಿ 11 ಬೌಂಡರಿ ಹಾಗೂ ಐದು ಸಿಕ್ಸರ್‌ಗಳಿದ್ದವು. ಕ್ವೀನ್ಸ್‌ಲೆಂಡ್‌ನ ಈ ಆಟಗಾರ ನಾಲ್ಕನೇ ಶತಕ ಗಳಿಸಿದರು.

ಲಾರಾ ದಾಖಲೆ ಸರಿಗಟ್ಟಿದ ಬೇಲಿ: ವೆಸ್ಟ್‌ಇಂಡೀಸ್‌ನ ಮಾಜಿ ಆಟಗಾರ ಬ್ರಯಾನ್‌ ಲಾರಾ ಅವರ ದಾಖಲೆಯನ್ನು ಜಾರ್ಜ್‌ ಬೇಲಿ ಸರಿಗಟ್ಟಿದರು. ತಾಸ್ಮೇನಿಯಾದ ಬೇಲಿ ಒಂದೇ ಓವರ್‌ನಲ್ಲಿ 28 ರನ್‌ ಗಳಿಸುವ ಮೂಲಕ ಈ ಸಾಧನೆ ಮಾಡಿದರು.

ಈ ಮೂಲಕ ಟೆಸ್ಟ್‌ ಕ್ರಿಕೆಟ್‌ನಲ್ಲಿ ಓವರ್‌ವೊಂದರಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಆಟಗಾರ ಎಂಬ ಗೌರವವನ್ನು ಲಾರಾ ಜೊತೆ ಹಂಚಿಕೊಂಡರು. ಮೂರನೇ ಟೆಸ್ಟ್‌ ಪಂದ್ಯದಲ್ಲಿ ಆಡುತ್ತಿರುವ ಬೇಲಿ ಜಿಮಿ ಆ್ಯಂಡರ್ಸನ್‌ ಹಾಕಿದ ಓವರ್‌ನಲ್ಲಿ ಮೂರು ಸಿಕ್ಸರ್‌ ಹಾಗೂ ಎರಡು ಬೌಂಡರಿ ಗಳಿಸಿದರು. ಲಾರಾ 2003ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ರಾಬಿನ್‌ ಪೀಟರ್ಸನ್‌ ಬೌಲಿಂಗ್‌ನಲ್ಲಿ 28 ರನ್‌ ಗಳಿಸಿದ್ದರು.

ಸ್ಕೋರ್‌ ವಿವರ: ಆಸ್ಟ್ರೇಲಿಯಾ: ಮೊದಲ ಇನಿಂಗ್ಸ್‌ 103.3 ಓವರ್‌ಗಳಲ್ಲಿ 385 ಹಾಗೂ 87 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 369 ಡಿಕ್ಲೇರ್ಡ್‌ (ಶೇನ್‌ ವಾಟ್ಸನ್‌ 103, ಜಾರ್ಜ್‌ ಬೇಲಿ ಔಟಾಗದೆ 39; ಟಿಮ್‌ ಬ್ರೆಸ್ನನ್‌ 53ಕ್ಕೆ2, ಬೆನ್‌ ಸ್ಟೋಕ್ಸ್‌ 82ಕ್ಕೆ2); ಇಂಗ್ಲೆಂಡ್‌: ಮೊದಲ ಇನಿಂಗ್ಸ್‌ 88 ಓವರ್‌ಗಳಲ್ಲಿ 251 ಹಾಗೂ 67 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 251 (ಮೈಕಲ್‌ ಕಾರ್ಬೆರಿ 31, ಕೆವಿನ್‌ ಪೀಟರ್ಸನ್‌ 45, ಇಯಾನ್‌ ಬೆಲ್‌ 60, ಬೆನ್‌ ಸ್ಟೋಕ್ಸ್‌ ಔಟಾಗದೆ 72)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.