ಕೊಲಂಬೊ: ಆಲ್‌ರೌಂಡರ್ ಮೈಕಲ್ ಯಾರ್ಡಿ ಅವರು ಮಾನಸಿಕ ಒತ್ತಡದಿಂದ ಬಳಲುತ್ತಿದ್ದು ಅವರನ್ನು ವಿಶ್ವಕಪ್ ಕ್ರಿಕೆಟ್‌ನಲ್ಲಿ ಅಡುತ್ತಿರುವ ಇಂಗ್ಲೆಂಡ್ ತಂಡದಿಂದ ಕೈಬಿಡಲಾಗಿದೆ.
ಶನಿವಾರ ಇಲ್ಲಿನ ಆರ್.ಪ್ರೇಮದಾಸಾ ಕ್ರೀಡಾಂಗಣದಲ್ಲಿ ಆತಿಥೇಯ ಶ್ರೀಲಂಕಾ ವಿರುದ್ಧ ನಡೆಯಲಿರುವ ಕ್ವಾರ್ಟರ ಫೈನಲ್‌ಗೆ ಮುನ್ನವೇ ಅವರನ್ನು ಸ್ವದೇಶಕ್ಕೆ ಕಳುಹಿಸಲು ತಂಡದ ಆಡಳಿತವು ವ್ಯವಸ್ಥೆ ಮಾಡಿದೆ.
ಲೀಗ್ ಹಂತದಲ್ಲಿ ಮೂರು ಪಂದ್ಯಗಳಲ್ಲಿ ಆಡಿದ್ದ ಯಾರ್ಡಿ ಗಳಿಸಿದ್ದು ಕೇವಲ 19 ರನ್. ಬೌಲಿಂಗ್‌ನಲ್ಲಿಯೂ ಪ್ರಭಾವಿ ಎನಿಸಿಲ್ಲ. ಮೂರು ಪಂದ್ಯಗಳಲ್ಲಿ ಒಟ್ಟಾರೆ 26 ಓವರು ಬೌಲಿಂಗ್ ಮಾಡಿದ್ದರೂ ಕೇವಲ ಎರಡು ವಿಕೆಟ್ ಕಬಳಿಸಿದ್ದಾರೆ. ಆದ್ದರಿಂದ ಮಾನಸಿಕವಾಗಿ ಕುಗ್ಗಿಹೋಗಿದ್ದಾರೆ ಎನ್ನುವುದು ನಿಜ. ಇದೇ ಕಾರಣಕ್ಕಾಗಿ ಅವರು ಸ್ವದೇಶಕ್ಕೆ ಹಿಂದಿರುಗುವ ತೀರ್ಮಾನಕ್ಕೆ ಬಂದಿದ್ದಾರೆ.
‘ತಂಡವು ವಿಶ್ವಕಪ್ ಕ್ರಿಕೆಟ್‌ನ ಮಹತ್ವದ ಘಟ್ಟದಲ್ಲಿ ಬಂದು ನಿಂತಿರುವಾಗ, ಹೊರಗೆ ಹೋಗುತ್ತಿರುವುದರಿಂದ ಬೇಸರ ಆಗಿದೆ. ಆದರೆ ತಂಡದ ಹಿತಕ್ಕಾಗಿ ನಾನು ಹಿಂದೆ ಸರಿಯುವುದೇ ಸೂಕ್ತ ಎನಿಸಿತು. ನಾನು ನೀಡಿರುವ ಕಾರಣವೂ ಪ್ರಾಮಾಣಿಕವಾದದ್ದು’ ಎಂದು ಯಾರ್ಡಿ ಅವರು ಗುರುವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
‘ಆ್ಯಂಡ್ರ್ಯೂ ಸ್ಟ್ರಾಸ್ ನೇತೃತ್ವದಲ್ಲಿ ಇಂಗ್ಲೆಂಡ್ ತಂಡವು ಯಶಸ್ವಿಯಾಗಿ ಸ್ವದೇಶಕ್ಕೆ ಹಿಂದಿರುಗಬೇಕು ಎನ್ನುವುದು ನನ್ನ ಆಶಯ. ಅದಕ್ಕಾಗಿ ತಂಡದ ಎಲ್ಲ ಆಟಗಾರರಿಗೆ ಶುಭ ಕೋರುತ್ತೇನೆ’ ಎಂದ ಅವರು ‘ಕೆಲವು ದಿನಗಳ ಕಾಲ ವಿಶ್ರಾಂತಿ ಪಡೆದು, ಕುಟುಂಬದ ಸದಸ್ಯರು ಹಾಗೂ ಗೆಳೆಯರ ಜೊತೆಗೆ ಸಮಯ ಕಳೆಯುತ್ತೇನೆ. ಆನಂತರ ಸಸೆಕ್ಸ್ ಪರವಾಗಿ ಇಂಗ್ಲೆಂಡ್‌ನ ದೇಶಿ ಕ್ರಿಕೆಟ್‌ನಲ್ಲಿ ಆಡುತ್ತೇನೆ’ ಎಂದು ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.