ADVERTISEMENT

ಇಂಗ್ಲೆಂಡ್ ಪ್ರವಾಸಕ್ಕೆ ಸಿದ್ಧ: ಗಂಭೀರ್

​ಪ್ರಜಾವಾಣಿ ವಾರ್ತೆ
Published 30 ಜೂನ್ 2011, 19:30 IST
Last Updated 30 ಜೂನ್ 2011, 19:30 IST
ಇಂಗ್ಲೆಂಡ್ ಪ್ರವಾಸಕ್ಕೆ ಸಿದ್ಧ: ಗಂಭೀರ್
ಇಂಗ್ಲೆಂಡ್ ಪ್ರವಾಸಕ್ಕೆ ಸಿದ್ಧ: ಗಂಭೀರ್   

ನವದೆಹಲಿ (ಪಿಟಿಐ): ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಗೌತಮ್ ಗಂಭೀರ್ ಅವರು ಮುಂಬರುವ ಇಂಗ್ಲೆಂಡ್ ಪ್ರವಾಸಕ್ಕೆ ಆಯ್ಕೆಗೆ ಲಭ್ಯವಿರುವುದಾಗಿ ತಿಳಿಸಿದ್ದಾರೆ. ಮಾತ್ರವಲ್ಲ ಇಂಗ್ಲೆಂಡ್‌ನ ಪರಿಸ್ಥಿತಿಯಲ್ಲಿ ಮಿಂಚಲು ಕೆಲವೊಂದು ನಿರ್ದಿಷ್ಟ ಬ್ಯಾಟಿಂಗ್ ಯೋಜನೆಗಳನ್ನು ರೂಪಿಸಿರುವುದಾಗಿಯೂ ಹೇಳಿದ್ದಾರೆ.

ಭುಜದ ನೋವಿನ ಕಾರಣ ಗಂಭೀರ್ ಅವರು ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಹಾಗೂ ಟೆಸ್ಟ್ ಸರಣಿಯಲ್ಲಿ ಪಾಲ್ಗೊಂಡಿಲ್ಲ. ಇದೀಗ ಫಿಟ್‌ನೆಸ್ ಮರಳಿ ಪಡೆದಿರುವುದಾಗಿ ತಿಳಿಸಿದ್ದಾರೆ.

`ನಾನು ಫಿಟ್‌ನೆಸ್ ಮರಳಿ ಪಡೆದುಕೊಂಡಿದ್ದೇನೆ. ದೈಹಿಕವಾಗಿ ಮಾತ್ರವಲ್ಲ ಮಾನಸಿಕವಾಗಿಯೂ ಹೊಸ ಹುರುಪು ಲಭಿಸಿದೆ. ಭುಜದಲ್ಲಿ ಕಾಣಿಸಿಕೊಂಡಿದ್ದ ನೋವು ಸಂಪೂರ್ಣವಾಗಿಶಮನವಾಗಿದೆ~ ಎಂದು ಗಂಭೀರ್ ಗುರುವಾರ ನುಡಿದರು.

ದೆಹಲಿಯ ಈ ಆರಂಭಿಕ ಬ್ಯಾಟ್ಸ್‌ಮನ್ ಬೆಂಗಳೂರಿನ ಎನ್‌ಸಿಎನಲ್ಲಿ ಮರುಚೈತನ್ಯ ಶಿಬಿರದಲ್ಲಿ ಪಾಲ್ಗೊಂಡಿದ್ದರು. `ಬೆಂಗಳೂರಿನಿಂದ ಇಲ್ಲಿಗೆ ಆಗಮಿಸುವ ಮುನ್ನ ನೆಟ್ಸ್‌ನಲ್ಲಿ ಎಸ್. ಶ್ರೀಶಾಂತ್ ಅವರಂತಹ ಬೌಲರ್‌ಗಳನ್ನು ಎದುರಿಸಿದ್ದೇನೆ. ಬ್ಯಾಟಿಂಗ್ ವೇಳೆ ನನಗೆ ಯಾವುದೇ ಸಮಸ್ಯೆ ಎದುರಾಗಲಿಲ್ಲ. ಒಂದೆರಡು ದಿನಗಳಲ್ಲಿ ಇಲ್ಲಿ ಅಭ್ಯಾಸ ಆರಂಭಿಸುವೆ~ ಎಂದಿದ್ದಾರೆ.

ಇಂಗ್ಲೆಂಡ್ ಪ್ರವಾಸಕ್ಕೆ ಭಾರತ ಟೆಸ್ಟ್ ತಂಡದ ಆಯ್ಕೆ ಶನಿವಾರ ನಡೆಯಲಿದೆ. ಗಂಭೀರ್ ತಂಡದಲ್ಲಿ ಸ್ಥಾನ ಗಿಟ್ಟಿಸಿದರೆ, ಇಂಗ್ಲೆಂಡ್ ನೆಲದಲ್ಲಿ ಇದೇ ಮೊದಲ ಬಾರಿಗೆ ಟೆಸ್ಟ್ ಆಡುವ ಅವಕಾಶ ಪಡೆಯಲಿದ್ದಾರೆ. ಈ ಎಡಗೈ ಬ್ಯಾಟ್ಸ್‌ಮನ್ ಇದುವರೆಗೆ 38 ಟೆಸ್ಟ್‌ಗಳಿಂದ 51.33ರ ಸರಾಸರಿಯಲ್ಲಿ 3234 ರನ್ ಕಲೆಹಾಕಿದ್ದಾರೆ.

ಇಂಗ್ಲೆಂಡ್ ನೆಲದಲ್ಲಿ ಯಶಸ್ಸು ಪಡೆಯಬೇಕಾದರೆ ಬ್ಯಾಟಿಂಗ್‌ನಲ್ಲಿ ಕೆಲವೊಂದು ನಿರ್ದಿಷ್ಟ ಯೋಜನೆ ರೂಪಿಸಿಕೊಳ್ಳುವುದು ಅಗತ್ಯ ಎಂಬುದು ಗಂಭೀರ್ ಅವರ ಹೇಳಿಕೆ. `ಂಗ್ಲೆಂಡ್‌ನ ಪಿಚ್‌ಗಳಲ್ಲಿ ಮೊದಲ ಕೆಲವು ಎಸೆತಗಳನ್ನು ಎದುರಿಸುವ ವೇಳೆ ಎಚ್ಚರಿಕೆ ವಹಿಸುವುದು ಅಗತ್ಯ. ಅದೇ ರೀತಿ ಕೆಲವೊಂದು ಹೊಡೆತಗಳಿಗೆ ಮುಂದಾಗಲೇಬಾರದು~ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.