ADVERTISEMENT

ಇಂದಿನಿಂದ ಚಾಂಪಿಯನ್ಸ್ ಲೀಗ್ ಟ್ವೆಂಟಿ-20 :ಕೆಕೆಆರ್-ಡೆವಿಲ್ಸ್ ಪೈಪೋಟಿ ಇಂದು

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2012, 19:30 IST
Last Updated 12 ಅಕ್ಟೋಬರ್ 2012, 19:30 IST

ಜೋಹಾನ್ಸ್‌ಬರ್ಗ್ (ಪಿಟಿಐ):  ಚಾಂಪಿಯನ್ಸ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿ ಟೂರ್ನಿಯ ಪ್ರಧಾನ ಹಂತ ಶನಿವಾರ ಆರಂಭವಾಗಲಿದ್ದು, ಕೋಲ್ಕತ್ತ ನೈಟ್ ರೈಡರ್ಸ್ (ಕೆಕೆಆರ್) ಹಾಗೂ ಡೆಲ್ಲಿ ಡೇರ್‌ಡೆವಿಲ್ಸ್ ತಂಡಗಳು ಮುಖಾಮುಖಿಯಾಗಲಿವೆ.

`ಎ~ ಗುಂಪಿನ ಈ ಪಂದ್ಯ ಸೆಂಚೂರಿಯನ್‌ನ ಸೂಪರ್‌ಸ್ಪೋರ್ಟ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಭಾರತೀಯ ಕಾಲಮಾನ ರಾತ್ರಿ 9 ಗಂಟೆಗೆ ಆರಂಭವಾಗಲಿದೆ. ಐಪಿಎಲ್ ಚಾಂಪಿಯನ್ ಆಗಿದ್ದ ನೈಟ್ ರೈಡರ್ಸ್ ಶುಭಾರಂಭದ ನಿರೀಕ್ಷೆಯಲ್ಲಿದೆ. ಈ ತಂಡವನ್ನು ಗೌತಮ್ ಗಂಭೀರ್ ಮುನ್ನಡೆಸಲಿದ್ದಾರೆ.

ಡೇರ್‌ಡೆವಿಲ್ಸ್ ತಂಡವನ್ನು ಶ್ರೀಲಂಕಾದ ಮಾಹೇಲ ಜಯವರ್ಧನೆ ಮುನ್ನಡೆಸಲಿದ್ದಾರೆ. ಶ್ರೀಲಂಕಾದಲ್ಲಿ ನಡೆದ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಗಾಯಗೊಂಡಿದ್ದ ವೀರೇಂದ್ರ ಸೆಹ್ವಾಗ್ ಎಲ್ಲಾ ಪಂದ್ಯಗಳಿಗೆ ಲಭ್ಯರಿರುವುದು ಈ ತಂಡದ ಉತ್ಸಾಹ ಹೆಚ್ಚಿಸಿದೆ.

ಇದಕ್ಕೂ ಮುನ್ನ ಇದೇ ಕ್ರೀಡಾಂಗಣದಲ್ಲಿ ಟೈಟಾನ್ಸ್ ಹಾಗೂ ಪರ್ತ್ ಸ್ಟಾರ್ಚರ್ಸ್‌ ಪೈಪೋಟಿ ನಡೆಸಲಿವೆ. ಈ ಪಂದ್ಯ 5 ಗಂಟೆಗೆ ಶುರುವಾಗಲಿದೆ. ಈ ಟೂರ್ನಿ ಅಕ್ಟೋಬರ್ 28ರವರೆಗೆ ನಡೆಯಲಿದೆ. ಫೈನಲ್ ಜೋಹಾನ್ಸ್‌ಬರ್ಗ್‌ನ ವಾಂಡರರ್ಸ್‌ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಟೂರ್ನಿಯಲ್ಲಿ ಆಯಾ ದೇಶಗಳ ದೇಶಿ ಕ್ರಿಕೆಟ್ ಟೂರ್ನಿಗಳಲ್ಲಿ ಚಾಂಪಿಯನ್ ಆದ ತಂಡಗಳು ಪಾಲ್ಗೊಳ್ಳಲಿವೆ.

ಭಾರತದಿಂದ ಐಪಿಎಲ್ ತಂಡಗಳಾದ ನೈಟ್ ರೈಡರ್ಸ್, ಚೆನ್ನೈ ಸೂಪರ್ ಕಿಂಗ್ಸ್, ಡೆಲ್ಲಿ ಡೇರ್  ಡೆವಿಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ಪಾಲ್ಗೊಂಡಿವೆ. ಹಾಗೇ, ಆಸ್ಟ್ರೇಲಿಯಾದ ಪರ್ತ್ ಸ್ಕಾರ್ಚರ್ಸ್‌ ಹಾಗೂ ಸಿಡ್ನಿ ಸಿಕ್ಸರ್ಸ್‌, ದಕ್ಷಿಣ ಆಫ್ರಿಕಾದ ಹೈವೆಲ್ಡ್ ಲಯನ್ಸ್ ಹಾಗೂ ಟೈಟಾನ್ಸ್, ನ್ಯೂಜಿಲೆಂಡ್‌ನ ಆಕ್ಲೆಂಡ್ ಏಸಸ್ ಹಾಗೂ ಇಂಗ್ಲೆಂಡ್‌ನ    ಯಾರ್ಕ್‌ಷೈರ್ ತಂಡಗಳು ಪೈಪೋಟಿ ನಡೆಸಲಿವೆ. ಯಾರ್ಕ್‌ಷೈರ್ ಹಾಗೂ ಆಕ್ಲೆಂಡ್ ಏಸಸ್ ಅರ್ಹತಾ ಹಂತದಲ್ಲಿ ಗೆದ್ದುಬಂದಿವೆ. 

ಹೋದ ವರ್ಷ ಮುಂಬೈ ಇಂಡಿಯನ್ಸ್ ಚಾಂಪಿಯನ್ ಆಗಿತ್ತು. ಅದಕ್ಕೂ ಮೊದಲ ಮಹೇಂದ್ರ ಸಿಂಗ್ ದೋನಿ ಸಾರಥ್ಯದ ಚೆನ್ನೈ ಸೂಪರ್ ಕಿಂಗ್ಸ್ ಗೆದ್ದಿತ್ತು.

ಪ್ರಧಾನ ಹಂತದಲ್ಲಿ ಸೆಣಸಲಿರುವ ತಂಡಗಳು
      ಗುಂಪು ಎ:
ಆಕ್ಲೆಂಡ್ ಏಸಸ್, ಡೆಲ್ಲಿ ಡೇರ್ ಡೆವಿಲ್ಸ್, ಕೋಲ್ಕತ್ತ ನೈಟ್    ರೈಡರ್ಸ್, ಪರ್ತ್ ಸ್ಕಾರ್ಚರ್ಸ್‌ ಹಾಗೂ ಟೈಟಾನ್ಸ್.

ಗುಂಪು ಬಿ:  ಚೆನ್ನೈ ಸೂಪರ್ ಕಿಂಗ್ಸ್,   ಹೈವೆಲ್ಡ್ ಲಯನ್ಸ್, ಮುಂಬೈ ಇಂಡಿಯನ್ಸ್, ಸಿಡ್ನಿ ಸಿಕ್ಸರ್ಸ್‌ ಹಾಗೂ ಯಾರ್ಕ್‌ಷೈರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.