ADVERTISEMENT

ಇಂದಿನಿಂದ ಬ್ಯಾಡ್ಮಿಂಟನ್ ಟೂರ್ನಿ

ಪ್ರಮುಖರಿಂದ ಪೈಪೋಟಿ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2012, 19:58 IST
Last Updated 25 ಡಿಸೆಂಬರ್ 2012, 19:58 IST

ಬೆಂಗಳೂರು: ಸಯ್ಯದ್ ಮೋದಿ ಗ್ರ್ಯಾನ್ ಪ್ರೀ ಟೂರ್ನಿಯ ಸಿಂಗಲ್ಸ್‌ನಲ್ಲಿ ಚಾಂಪಿಯನ್ ಆದ ಪಿ. ಕಶ್ಯಪ್ ಹಾಗೂ ರನ್ನರ್ ಅಪ್ ಪಿ.ವಿ. ಸಿಂಧು ಸೇರಿದಂತೆ ಇನ್ನಿತರ ಖ್ಯಾತನಾಮ ಆಟಗಾರರು ಉದ್ಯಾನನಗರಿಯಲ್ಲಿ ಡಿಸೆಂಬರ್ 26ರಿಂದ 30ರ ವರೆಗೆ ನಡೆಯಲಿರುವ 34ನೇ ಪಿಎಸ್‌ಪಿಬಿ ಅಂತರ ವಿಭಾಗ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆ ಹಾಗೂ ಒಎನ್‌ಜಿಸಿ ಆಶ್ರಯದಲ್ಲಿ ಈ ಟೂರ್ನಿ ಆಯೋಜನೆಯಾಗಿದೆ. ಮೋದಿ ಟೂರ್ನಿಯ ಮಹಿಳಾ ವಿಭಾಗದ ಸಿಂಗಲ್ಸ್‌ನಲ್ಲಿ ರಾಷ್ಟ್ರೀಯ ಚಾಂಪಿಯನ್ ಸಿಂಧು ಫೈನಲ್‌ನಲ್ಲಿ ಸೋಲು ಕಂಡಿದ್ದರು. ಒಲಿಂಪಿಯನ್ ವಿ. ದಿಜು, ಸ್ಥಳೀಯ ಆಟಗಾರ್ತಿ ಅಶ್ವಿನಿ ಪೊನ್ನಪ್ಪ, ಬಿ. ಸಾಯಿಪ್ರಣೀತ್, ಪಿ.ಸಿ. ತುಳಸಿ, ಚೇತನ್ ಆನಂದ್ ಸೇರಿದಂತೆ ಇತರ ಪ್ರಮುಖ ಆಟಗಾರರು ಪಾಲ್ಗೊಳ್ಳಲಿರುವ ಕಾರಣ ಈ ಟೂರ್ನಿಗೆ ಹೆಚ್ಚಿನ ರಂಗು ಬರಲಿದೆ. ಒಟ್ಟು 128 ಬ್ಯಾಡ್ಮಿಂಟನ್ ಆಟಗಾರರು ಪೈಪೋಟಿ ನಡೆಸಲಿದ್ದಾರೆ.

ಒಎನ್‌ಜಿಸಿ, ಐಒಸಿ, ಬಿಪಿಸಿಎಲ್, ಜಿಎಐಎಲ್, ಇಐಎಲ್, ಎಚ್‌ಪಿಸಿಎಲ್ ಮತ್ತು ಎಂಆರ್‌ಪಿಎಲ್ ತಂಡಗಳು ಪಾಲ್ಗೊಳ್ಳಲಿವೆ. ಐದು ದಿನ ನಡೆಯುವ ಈ ಟೂರ್ನಿಯ ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳು ಕ್ರಮವಾಗಿ ಡಿಸೆಂಬರ್ 29 ಮತ್ತು 30ರಂದು ಜರುಗಲಿವೆ. 26ರಂದು ಬೆಳಿಗ್ಗೆ 9ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.