ADVERTISEMENT

ಇಂದಿನಿಂದ ವಿಶ್ವಕಪ್‌ ರೋಮಾಂಚನ

ರಷ್ಯಾದ 11 ನಗರಗಳ 12 ಕ್ರೀಡಾಂಗಣಗಳಲ್ಲಿ ಹಣಾಹಣಿ; 32 ರಾಷ್ಟ್ರೀಯ ತಂಡಗಳ ನಡುವೆ ಕದನ

ಏಜೆನ್ಸೀಸ್
Published 13 ಜೂನ್ 2018, 19:30 IST
Last Updated 13 ಜೂನ್ 2018, 19:30 IST
ನಿಜ್ನಿ ನೊವ್‌ಗೊರೋದ್‌ ಕ್ರೀಡಾಂಗಣ
ನಿಜ್ನಿ ನೊವ್‌ಗೊರೋದ್‌ ಕ್ರೀಡಾಂಗಣ   

ಮಾಸ್ಕೊ (ಪಿಟಿಐ/ಎಎಫ್‌ಪಿ): ರಷ್ಯಾದ ವೋಲ್ಗಾ ನದಿಯ ಮೇಲಿಂದ ಬೀಸುವ ತಂಗಾಳಿಯಲ್ಲಿಯೂ ಈಗ ಫುಟ್‌ಬಾಲ್ ಪ್ರೀತಿಯ ಪರಿಮಳ ತುಂಬಿದೆ. ಹಲವು ಸಂಸ್ಕೃತಿಗಳು, ಸಾಹಿತ್ಯ, ಸೃಜನಶೀಲತೆ, ಸಂಘರ್ಷ, ಕ್ರಾಂತಿಗಳನ್ನು ಕಂಡ ನಾಡು ಈಗ ಮತ್ತೊಂದು ಇತಿಹಾಸ ಬರೆಯಲು ಸಿದ್ಧವಾಗಿದೆ.

ಗುರುವಾರದಿಂದ  ಫಿಫಾ ಫುಟ್‌ಬಾಲ್ ವಿಶ್ವಕಪ್ ಟೂರ್ನಿಯ ಮಹಾಸಂಭ್ರಮ ಇಲ್ಲಿ ಗರಿಗೆದರಲಿದೆ. ಇದೇ ಮೊದಲ ಬಾರಿಗೆ ಇಲ್ಲಿ ಈ ಟೂರ್ನಿ ನಡೆಯಲಿದೆ. ಹಲವು ದೇಶ, ಭಾಷೆ, ಧರ್ಮ, ವರ್ಣಗಳ ಸಮ್ಮಿಲನದ ವೇದಿಕೆಯಾಗಿ ಈ ಟೂರ್ನಿ ಗಮನ ಸೆಳೆಯಲು ಸಿದ್ಧವಾಗಿದೆ. ಒಂದು ಕಾಲದಲ್ಲಿ ಅಮೆರಿಕದ ಕ್ರೀಡಾಶಕ್ತಿಗೆ ಸೆಡ್ಡು ಹೊಡೆದು ಮೆರೆದಿದ್ದ ರಷ್ಯಾ ಇತ್ತೀಚಿನ ದಿನಗಳಲ್ಲಿ ಕಳೆಗುಂದಿತ್ತು. ಗತವೈಭವವನ್ನು ಮರಳಿ ಪಡೆಯುವ ಪ್ರಯತ್ನಕ್ಕೆ ಫಿಫಾ ವಿಶ್ವಕಪ್ ಟೂರ್ನಿ ಒಂದು ಅವಕಾಶವಾಗಿದೆ. ಕ್ರೀಡಾಪ್ರಿಯರೂ ಆಗಿರುವ ಇಲ್ಲಿಯ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಯೋಜನೆಯೂ ಇದೇ ಆಗಿದೆ.

32 ತಂಡಗಳ ಹಣಾಹಣಿ: 32 ದೇಶಗಳ ತಂಡಗಳು ತಮ್ಮ ಪರಾಕ್ರಮವನ್ನು ಇಲ್ಲಿ ಒರೆಗೆ ಹಚ್ಚಲಿವೆ. ಹೋದ ಬಾರಿಯ ಚಾಂಪಿಯನ್ ಜರ್ಮನಿ ಪ್ರಶಸ್ತಿಯನ್ನು ತನ್ನ ಬಳಿಯೇ ಉಳಿಸಿಕೊಳ್ಳಲು ಹೋರಾಟಕ್ಕಿಳಿಯಲಿದೆ. ಆತಿಥೇಯ ತಂಡ ರಷ್ಯಾ ಕೂಡ ಹೆಜ್ಜೆಗುರುತು ಮೂಡಿಸಲು ಹಾತೋರೆಯುತ್ತಿದೆ. ಒಟ್ಟು ಏಳು ಬಾರಿ ಫೈನಲ್ ಪ್ರವೇಶಿಸಿದ ಮತ್ತು ಐದು ಬಾರಿಯ ಚಾಂಪಿಯನ್‌ ಬ್ರೆಜಿಲ್‌, ಎಂಟು ಬಾರಿ ಫೈನಲ್‌ನಲ್ಲಿ ಆಡಿ ನಾಲ್ಕು ಸಲ ಪ್ರಶಸ್ತಿಗೆ ಮುತ್ತಿಕ್ಕಿದ ಜರ್ಮನಿ, ತಲಾ ಎರಡು ಬಾರಿ ಚಾಂಪಿಯನ್ ಆದ ಅರ್ಜೆಂಟೀನಾ ಮತ್ತು ಉರುಗ್ವೆ ತಂಡಗಳ ಜೊತೆ ಒಂದೊಂದು ಬಾರಿ ಚಾಂಪಿಯನ್‌ ಪಟ್ಟ ಅಲಂಕರಿಸಿದ ಫ್ರಾನ್ಸ್, ಇಂಗ್ಲೆಂಡ್ ಮತ್ತು ಸ್ಪೇನ್ ತಂಡಗಳು ಈ ಬಾರಿಯೂ ಪ್ರಶಸ್ತಿ ಮೇಲೆ ಕಣ್ಣಿಟ್ಟು ಕಣಕ್ಕೆ ಇಳಿಯಲಿವೆ. ನಾಲ್ಕು ಪ್ರಶಸ್ತಿ ಗೆದ್ದು ಎರಡು ಬಾರಿ ರನ್ನರ್ ಅಪ್‌ ಆಗಿದ್ದ ಇಟಲಿ ಈ ಬಾರಿ ಟೂರ್ನಿಯಲ್ಲಿ ಆಡಲು ಅರ್ಹತೆ ಗಳಿಸಿಲ್ಲ.

ADVERTISEMENT

ಸಂಜೆ ಅದ್ದೂರಿ ಉದ್ಘಾಟನಾ ಸಮಾರಂಭದ ನಂತರ ಆತಿಥೇಯ ರಾಷ್ಟ್ರದ ತಂಡ ಒಳಗೊಂಡ ಉದ್ಘಾಟನಾ ಪಂದ್ಯದೊಂದಿಗೆ ಟೂರ್ನಿಗೆ ಚಾಲನೆ ಸಿಗಲಿದೆ. ಎರಡನೇ ದಿನ ಮೂರು ಮತ್ತು ಮೂರನೇ ದಿನ ನಾಲ್ಕು ಪಂದ್ಯಗಳು ಇವೆ. ಭಾನುವಾರದ ನಂತರ ಪ್ರತಿ ದಿನ  ಮೂರು ಪಂದ್ಯಗಳು ಕ್ರೀಡಾಪ್ರಿಯರಿಗೆ ಮುದ ನೀಡಲಿವೆ.

ಜೂನ್‌ 28ರ ವರೆಗೆ ಗುಂಪು ಹಂತದ ಪಂದ್ಯಗಳು ನಡೆಯಲಿದ್ದು ಜೂನ್‌ 30ರಿಂದ ಜುಲೈ ಮೂರರ ವರೆಗೆ ನಾಕೌಟ್‌ ಪಂದ್ಯಗಳು, ಆರು ಮತ್ತು ಏಳರಂದು ಕ್ವಾರ್ಟರ್ ಫೈನಲ್‌, 10 ಮತ್ತು 11ರಂದು ಸೆಮಿಫೈನಲ್‌ ಹಾಗೂ 15ರಂದು ಪ್ರಶಸ್ತಿ ಸುತ್ತಿನ ಹಣಾಹಣಿ ನಡೆಯಲಿದೆ.

ಕ್ರೀಡೆಯಿಂದ ರಾಜಕೀಯ ದೂರ: ಪುಟಿನ್ ಸಂತಸ 

ಮಾಸ್ಕೊ (ರಾಯಿಟರ್ಸ್‌): ಕ್ರೀಡೆಯಿಂದ ರಾಜಕೀಯವನ್ನು ದೂರ ಇರಿಸಿ ವಿಶ್ವಕಪ್ ಫುಟ್‌ಬಾಲ್ ಟೂರ್ನಿ ಆಯೋಜಿಸಲು ಅವಕಾಶ ಮಾಡಿ
ಕೊಟ್ಟ ಫಿಫಾಗೆ ಅಭಿನಂದನೆಗಳು ಸಲ್ಲಲೇಬೇಕು ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್‌ ಹೇಳಿದರು.

‘ಕ್ರೀಡೆಯ ಬಗೆಗಿನ ಬದ್ಧತೆಯನ್ನು ಉಳಿಸಿಕೊಂಡಿರುವುದು ಫಿಫಾದ ಆಡಳಿತಗಾರರ ದೊಡ್ಡ ಗುಣ. ಅವರ ಕಾಳಜಿಯಿಂದಾಗಿ ಫುಟ್‌ಬಾಲ್‌ನಲ್ಲಿ ರಾಜಕೀಯ ಸೇರಲು ಅವಕಾಶ ಸಿಗಲಿಲ್ಲ’ ಎಂದು ಅವರು ಅಭಿಪ್ರಾಯ ಪಟ್ಟರು.

ಪಿಟಾನ ರೆಫರಿ

ಮಾಸ್ಕೊ (ಎಎಫ್‌ಪಿ): ಅರ್ಜೆಂಟೀನಾದ ನೆಸ್ಟರ್‌ ಪಿಟಾನ ಅವರು ರಷ್ಯಾ ಮತ್ತು ಸೌದಿ ಅರೇಬಿಯಾ ನಡುವಣ ಉದ್ಘಾಟನಾ ಪಂದ್ಯದಲ್ಲಿ ರೆಫರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.

ಈ ವಿಷಯವನ್ನು ಫಿಫಾ, ಬುಧವಾರ ಪ್ರಕಟಿಸಿದೆ.

42ರ ಹರೆಯದ ಪಿಟಾನ, 2014ರಲ್ಲಿ ಬ್ರೆಜಿಲ್‌ನಲ್ಲಿ ನಡೆದಿದ್ದ ಟೂರ್ನಿಯಲ್ಲೂ ರೆಫರಿಯಾಗಿ ಕೆಲಸ ಮಾಡಿದ್ದರು.

ರಷ್ಯಾ ತಂಡಕ್ಕೆ ಜಯದ ಕಾತರ

ಮಾಸ್ಕೊ (ಎಎಫ್‌ಪಿ): ಫಿಫಾ ವಿಶ್ವಕಪ್‌ಗೆ ಆತಿಥ್ಯ ವಹಿಸಿರುವ ರಷ್ಯಾ ತಂಡ ಈ ಬಾರಿಯ ಟೂರ್ನಿಯಲ್ಲಿ ಗೆಲುವಿನ ಮುನ್ನುಡಿ ಬರೆಯುವ ಕಾತರದಲ್ಲಿದೆ.

ಗುರುವಾರ ನಡೆಯುವ ‘ಎ’ ಗುಂಪಿನ ತನ್ನ ಮೊದಲ ಹಣಾ ಹಣಿಯಲ್ಲಿ ಐಗರ್‌ ಅಖಿನ್‌ಫೀವ್‌ ಬಳಗ ಸೌದಿ ಅರೇಬಿಯಾ ತಂಡದ ಸವಾಲು ಎದುರಿಸಲಿದೆ.

ತವರಿನ ಅಭಿಮಾನಿಗಳ ಎದುರು ಆಡುತ್ತಿರುವ ರಷ್ಯಾ 4–1–4–1ರ ಯೋಜನೆಯೊಂದಿಗೆ ಕಣಕ್ಕಿಳಿಯುವ ನಿರೀಕ್ಷೆ ಇದೆ. ಈ ತಂಡ ನಾಲ್ಕು ವರ್ಷಗಳ ಹಿಂದೆ ಬ್ರೆಜಿಲ್‌ನಲ್ಲಿ ನಡೆದಿದ್ದ ಟೂರ್ನಿಯಲ್ಲಿ ಗುಂಪು ಹಂತದಲ್ಲೇ ನಿರ್ಗಮಿಸಿತ್ತು.

ವಿಶ್ವ ಕಪ್‌ಗೆ ಆತಿಥ್ಯ ವಹಿಸುತ್ತಿರುವ ಕಾರಣ ಈ ಬಾರಿ ತಂಡಕ್ಕೆ ನೇರ ಅರ್ಹತೆ ಸಿಕ್ಕಿದೆ.

ಸೌಧಿಗೆ ಜಯದ ಕನಸು: ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ರಷ್ಯಾಗಿಂತಲೂ ಮೇಲಿನ ಸ್ಥಾನದಲ್ಲಿರುವ ಒಸಾಮ ಹವಸಾವಿ ಪಡೆ ಕೂಡಾ ಲುಜ್‌ನಿಕಿ ಕ್ರೀಡಾಂಗಣದಲ್ಲಿ ಗೆಲುವಿನ ತೋರಣ ಕಟ್ಟುವ ಹುಮ್ಮಸ್ಸಿನಲ್ಲಿದೆ. ಈ ತಂಡ ರಷ್ಯಾ ಎದುರು 1–0ರ ಗೆಲುವಿನ ದಾಖಲೆ ಹೊಂದಿದೆ.

ಅಮೆರಿಕ, ಮೆಕ್ಸಿಕೊ, ಕೆನಡಾಗೆ ಆತಿಥ್ಯ: 2026ರ ವಿಶ್ವಕಪ್ ಫುಟ್‌ಬಾಲ್‌ಗೆ ಆತಿಥ್ಯ ವಹಿಸುವ ಅವಕಾಶವನ್ನು ಅಮೆರಿಕ, ಮೆಕ್ಸಿಕೊ ಮತ್ತು ಕೆನಡಾ ರಾಷ್ಟ್ರಗಳು ಸಂಯುಕ್ತವಾಗಿ ಗಳಿಸಿಕೊಂಡಿವೆ.

ಕ್ರಾಂತಿಯ ಕಹಳೆ ಮೊಳಗಿದಲ್ಲಿ ಪುಟಿದ ಕಾಲ್ಚೆಂಡು

ಕ್ರಾಂತಿಯ ಕಹಳೆ ಮೊಳಗಿದ ರಷ್ಯಾದ ಫುಟ್‌ಬಾಲ್ ಇತಿಹಾಸವೂ ಹೋರಾಟ, ಏಳು–ಬೀಳುಗಳಿಗೆ ಸಾಕ್ಷಿಯಾಗಿದೆ. ಸೋವಿಯತ್‌ ಯೂನಿಯನ್‌ನ ಭಾಗ
ವಾಗಿದ್ದ ಸಂದರ್ಭದಲ್ಲಿ ಸಾಧನೆಯ ಶಿಖರವೇರಿದ್ದ ಈ ತಂಡ ಇತ್ತೀಚಿನ ವರ್ಷಗಳಲ್ಲಿ ಪಾತಾಳದತ್ತ ಸಾಗಿದೆ. ವಿಶ್ವಕಪ್‌ಗೆ ಆತಿಥ್ಯ ವಹಿಸುತ್ತಿರುವ ವರ್ಷದಲ್ಲೇ ‌ರ‍್ಯಾಂಕಿಂಗ್‌ ಪಟ್ಟಿಯಲ್ಲಿ ‘ದಾಖಲೆಯ’ ಕುಸಿತ ಕಂಡಿದೆ.

1960ರಲ್ಲಿ, ಯುರೋಪಿಯನ್‌ ಚಾಂಪಿಯನ್‌ಷಿಪ್‌ನ ಚೊಚ್ಚಲ ಆವೃತ್ತಿಯಲ್ಲೇ ಪ್ರಶಸ್ತಿ ಮುಡಿಗೇರಿಸಿಕೊಂಡು ಜೈತ್ರಯಾತ್ರೆ ಆರಂಭಿಸಿದ ತಂಡ ನಂತರ ಜಗತ್ತಿನ ಬಲಿಷ್ಠ ಫುಟ್‌ಬಾಲ್ ಶಕ್ತಿಗಳಲ್ಲಿ ಒಂದಾಗಿತ್ತು. ಸೋವಿಯತ್‌ ಯೂನಿಯನ್‌ ಭಾಗವಾಗಿದ್ದಾಗ 1960ರಲ್ಲಿ ಫಿಫಾ ರ‍್ಯಾಂಕಿಂಗ್‌ನಲ್ಲಿ ಅಗ್ರ ಸ್ಥಾನ ಗಳಿಸಿದ್ದ ತಂಡ ‘ಸ್ವತಂತ್ರ ರಷ್ಯಾ’ವಾದ ನಂತರವೂ ಹೂವಿನ ಹಾದಿಯಲ್ಲಿ ನಡೆದಿತ್ತು. 1996ರಲ್ಲಿ ರ‍್ಯಾಂಕಿಂಗ್‌ನಲ್ಲಿ ಮೂರನೇ ಸ್ಥಾನಕ್ಕೇರಿ ಗಮನ ಸೆಳೆದಿತ್ತು.

ಸೋವಿಯತ್‌ ಒಕ್ಕೂಟದಲ್ಲಿ 1960ರ ನಂತರ ತಂಡ ಸುವರ್ಣ ಕಾಲದ ಸವಿಯುಂಡಿದ್ದರೆ ರಷ್ಯಾ ಹೆಸರಿನಲ್ಲಿ 1992ರಿಂದಲೇ ಉತ್ತುಂಗಕ್ಕೇರಿತ್ತು. ರಷ್ಯಾ ಧ್ವಜದಡಿ 1992ರಲ್ಲಿ ಮೊದಲ ಅಂತರರಾಷ್ಟ್ರೀಯ ಪಂದ್ಯ ಆಡಿ ಉತ್ತಮ ಸಾಮರ್ಥ್ಯ ತೋರಿತ್ತು. ಆದರೆ ನಂತರ ಈ ತಂಡದ ಶಕ್ತಿ ಕುಂದುತ್ತ ಸಾಗಿತು.

ವಿಶ್ವಕಪ್‌ನಲ್ಲಿ ರಷ್ಯಾ/ಸೋವಿಯತ್ ಯೂನಿಯನ್ 1958ರಿಂದ ಆಡುತ್ತಿದೆ. ಈ ವರೆಗೆ 11 ಬಾರಿ ವಿಶ್ವಕಪ್‌ನಲ್ಲಿ ಪಾಲ್ಗೊಂಡಿದೆ. ಆದರೆ ಸಮಾಧಾನಕರ ಫಲಿತಾಂಶಗಳನ್ನು ಗಳಿಸಲು ಆಗಲಿಲ್ಲ. 1966ರಲ್ಲಿ ನಾಲ್ಕನೇ ಸ್ಥಾನ ಗಳಿಸಿದ್ದೇ ತಂಡದ ಉತ್ತಮ ಸಾಧನೆಯಾಗಿದೆ.

ದೇಶಿ ಕೋಚ್‌ಗಳ ವೈಫಲ್ಯ; ವಿದೇಶಿ ಕೋಚ್‌ಗೆ ಮೊರೆ: ಮೊದಲ ಕೆಲವು ದಶಕಗಳಲ್ಲಿ ದೇಶಿ ಕೋಚ್‌ಗಳ ಮೇಲೆ ಮಾತ್ರ ಭರವಸೆ ಇರಿಸಿಕೊಂಡಿದ್ದ ಈ ತಂಡದ ಆಡಳಿತ ಇದರಲ್ಲಿ ಯಶಸ್ಸು ಕಂಡಿತ್ತು. ಆದರೆ ಕ್ರಮೇಣ ಸ್ಥಳೀಯರು ವೈಫಲ್ಯ ಕಾಣುತ್ತಿದ್ದಂತೆ ವಿದೇಶಿಯರ ಮೊರೆ ಹೋದರು. 1994ರ ವಿಶ್ವಕಪ್‌ನ ನಂತರ ರಷ್ಯಾ ಫುಟ್‌ಬಾಲ್ ಆಡಳಿತವು ಕೋಚ್‌ಗಳ ಮೇಲೆ ಕೆಂಗಣ್ಣು ಬೀರಲು ತೊಡಗಿತು. ಈ ಟೂರ್ನಿಯಲ್ಲಿ ತಂಡ ಕಳಪೆ ಸಾಮರ್ಥ್ಯ ತೋರಿದ್ದರಿಂದ ಕೋಚ್‌ ಪವೆಲ್‌ ಸ್ಯಾಡಿ ರಿನ್‌ ತಲೆ ದಂಡ ತೆರಬೇಕಾಯಿತು.

ಒಲೆಗ್ ರೊಮನೆಸ್ಟೆವ್‌ ಅವರ ಹೆಗಲಿಗೆ ತಂಡದ ಜವಾಬ್ದಾರಿ ಹೊರಿಸಲಾಯಿತು. 1996ರ ಯೂರೊಕಪ್‌ ಗೆದ್ದು ಕೊಡುವುದು ಅವರ ಮುಂದಿನ ಸವಾಲಾಗಿತ್ತು. ಆದರೆ ಈ ಟೂರ್ನಿಯಲ್ಲಿ ತಂಡ ಅತ್ಯಂತ ಕಳಪೆ ಆಟವಾಡಿತು. 1998ರ ವಿಶ್ವಕಪ್ ವೇಳೆಗೆ ಬೋರಿಸ್ ಇಗ್ನಟ್ಯೆವ್‌ ಅವರಿಗೆ ತಂಡದ ಜವಾಬ್ದಾರಿ ವಹಿಸಲಾಯಿತು. ವಿಶ್ವಕಪ್ ಮತ್ತು 2000ನೇ ಇಸವಿಯ ಯೂರೊ ಕಪ್‌ನಲ್ಲಿ ಕಳಪೆ ಸಾಮರ್ಥ್ಯ ತೋರಿದ್ದರಿಂದ ಬೋರಿಸ್ ಅವರನ್ನು ವಜಾ ಮಾಡಿ ಅನಾಟಲಿ ಬೈಶೊವೆಟ್ಸ್ ಅವರನ್ನು ನೇಮಕ ಮಾಡಲಾಯಿತು.

ಈ ಪ್ರಯೋಗದಲ್ಲಿ ಯಶಸ್ಸು ಕಾಣದೇ ಇದ್ದಾಗ ಮತ್ತೆ ಬೋರಿಸ್‌ ಅವರಿಗೇ ಕೋಚ್ ಹೊಣೆ ಹೊರಿಸಲಾಯಿತು. 2002 ಯೂರೊ ಕಪ್ ಸಂದರ್ಭದಲ್ಲಿ ಅವರನ್ನು ಮತ್ತೆ ವಜಾ ಮಾಡಿ ವೆಲೆರೆ ಗಜೆವ್‌ಗೆ ಜವಾಬ್ದಾರಿ ವಹಿಸಲಾಯಿತು. ಅವರು ಕೂಡ ಹೆಚ್ಚು ಕಾಲ ತಂಡದೊಂದಿಗೆ ಇರಿಸದ ಆಡಳಿತ
ಜಾರ್ಜಿ ಯರ್ಟ್ಸೆವ್‌ ಅವರನ್ನು ನೇಮಕಮಾಡಿತು.

ಅವರ ರಾಜೀನಾಮೆಯ ನಂತರ ಯೂರಿ ಸೆಮಿನ್ ಅವರನ್ನು ನೇಮಕ ಮಾಡಲಾಯಿತು. 2006ರಲ್ಲಿ ನೆದರ್‌ಲ್ಯಾಂಡ್ಸ್‌ನ ಗೂಸ್ ಹಿಡಿಂಕ್ ಅವರನ್ನು ನೇಮಕ ಮಾಡುವ ಮೂಲಕ ಮೊದಲ ಬಾರಿ ವಿದೇಶಿ ಕೋಚ್‌ಗೆ ತಂಡದ ಜವಾಬ್ದಾರಿ ವಹಿಸಲಾಯಿತು. 2010ಲ್ಲಿ ಡಿಕ್ ಅಡ್ವೊಕೇಟ್‌ ಮೂಲಕ ಮತ್ತೆ ನೆದರ್‌ಲ್ಯಾಂಡ್ಸ್‌ ಕೋಚ್‌ ಮೊರೆ ಹೋದ ರಷ್ಯಾ ಎರಡು ವರ್ಷಗಳ ನಂತರ ಇಟಲಿಯ ಫ್ಯಾಬಿಯೊ ಕೆಪೆಲೊ ಅವರನ್ನು ನೇಮಕ ಮಾಡಿಕೊಂಡಿತು. 2015ರಿಂದ ರಷ್ಯಾದವರೇ ಕೋಚ್‌ ಆಗಿದ್ದು ಸದ್ಯ ಸ್ಟಾನಿಸ್ಲಾವ್ ಚರ್ಚಸೊವ್‌ ತರಬೇತಿ ನೀಡುತ್ತಿದ್ದಾರೆ.

ಫಿಫಾ ವಿಶ್ವಕಪ್‌ ಟ್ರೋಫಿಯ ವಿಶೇಷತೆಗಳು

1974ರ ವಿಶ್ವಕಪ್‌ ಗೆದ್ದ ತಂಡಕ್ಕೆ ಮೊದಲ ಬಾರಿಗೆ ಈ ಟ್ರೋಫಿಯನ್ನು ನೀಡಲಾಯಿತು. ಇಟಲಿಯ ಕಲಾವಿದ ಸಿಲ್ವಿಯೊ ಗಜ್ಜಾನಿಗಾ ಅವರು ಈ ಟ್ರೋಫಿಯನ್ನು ವಿನ್ಯಾಸ ಮಾಡಿದ್ದಾರೆ. ಇಟಲಿಯ ಜಿಡಿಇ ಬರ್ಟೊನಿ ಕಂಪನಿಯು 18 ಕ್ಯಾರಟ್‌ ಚಿನ್ನದಿಂದ ಇದನ್ನು ತಯಾರಿಸಿದೆ. ಇಬ್ಬರು ಭೂಮಿಯನ್ನು ಎತ್ತಿಹಿಡಿದಿರುವಂತೆ ಈ ಟ್ರೋಫಿಯ ವಿನ್ಯಾಸವಿದೆ. ವಿಶ್ವಕಪ್‌ ಗೆದ್ದ ರಾಷ್ಟ್ರಗಳ ಹೆಸರನ್ನು ಈ ಟ್ರೋಫಿಯ ಕೆಳಗೆ ನಮೂದಿಸಲಾಗುತ್ತದೆ.

ಎತ್ತರ: 36.5 ಸೆಂ.

ತೂಕ: 6.175 ಕೆ.ಜಿ.

ಮೌಲ್ಯ: ₹1.7 ಕೋಟಿ (ಈಗಿನ ಡಾಲರ್‌ ಮೌಲ್ಯಕ್ಕೆ ಅನುಗುಣವಾಗಿ ರೂಪಾಯಿಗೆ ಪರಿವರ್ತಿಸಲಾಗಿದೆ)

ಜಬಾವಿಕ ಎಂದರೆ ಗೋಲು ಗಳಿಸುವವ

ರಷ್ಯಾದಲ್ಲಿ ನಡೆಯುತ್ತಿರುವ ಈ ಬಾರಿಯ ವಿಶ್ವಕಪ್‌ನ ಅಧಿಕೃತ ಲಾಂಛನದ ಹೆಸರು ‘ಜಬಾವಿಕ’. ರಷ್ಯನ್ ಭಾಷೆಯಲ್ಲಿ ಜಬಾವಿಕ ಎಂದರೆ ‘ಗೋಲು ಗಳಿಸುವವ’.

ಅಧಿಕೃತ ಲಾಂಛನವನ್ನು ಆಯ್ಕೆ ಮಾಡಲು ಜನರಿಗೆ ಮತ ಹಾಕಲು ಕೇಳಲಾಗಿತ್ತು. ಜಬಾವಿಕ ಹೆಸರಿನ ತೋಳದ ಆಕೃತಿಯ ಪರವಾಗಿ ಫಿಫಾದ ಅಧಿಕೃತ ವೆಬ್‌ಸೈಟ್‌ನಲ್ಲಿ 10 ಲಕ್ಷಕ್ಕೂ ಹೆಚ್ಚು ರಷಿಯನ್ನರು ಮತ ಚಲಾಯಿಸಿದ್ದರು.

ಈ ಲಾಂಛನವು ಟೂರ್ನಿಗೆ ಉತ್ತೇಜನ ನೀಡುವುದಷ್ಟೇ ಅಲ್ಲದೇ, ಫುಟ್‌ಬಾಲ್‌ ಕ್ರೀಡೆಗೆ ಸಂಬಂಧಿಸಿದಂತೆ ರಷ್ಯಾದ ರಾಯಭಾರಿಯಾಗಿಯೂ ಕೆಲಸ ಮಾಡುತ್ತದೆ.

‘ಒನ್‌ ಲೈಫ್‌, ಲಿವ್‌ ಇಟ್‌ ಅಪ್‌’

ಬೆಂಗಳೂರು: ‘ಒನ್‌ ಲೈಫ್‌, ಲಿವ್‌ ಇಟ್‌ ಅಪ್‌, ಬಿಕಾಸ್‌ ವಿ ಗಾಟ್‌ ಒನ್‌ ಲೈಫ್; ಒನ್‌ ಲೈಫ್‌, ಲಿವ್‌ ಇಟ್‌ ಅಪ್‌, ಬಿಕಾಸ್‌ ಯು ಡೊಂಟ್‌ ಗೆಟ್‌ ಇಟ್‌ ಟ್ವೈಸ್‌...’

ಈ ಸಲದ ವಿಶ್ವಕಪ್‌ನ ಅಧಿಕೃತ ಗೀತೆಯ ಮೊದಲ ಸಾಲುಗಳಿವು. ಫುಟ್‌ಬಾಲ್‌ ಅಭಿಮಾನಿಗಳೆಲ್ಲ ಎದುರು ನೋಡುತ್ತಿರುವ ವಿಶ್ವಕಪ್‌ ಟೂರ್ನಿ ಆರಂಭವಾಗಲು ಇನ್ನೇನೂ ಕೆಲವೇ ಗಂಟೆಗಳು ಬಾಕಿ ಇವೆ. ‘ನಾಲ್ಕು ವರ್ಷಕ್ಕೊಮ್ಮೆ ಆಡುವ ಫಿಫಾ ವಿಶ್ವಕಪ್‌ ಟೂರ್ನಿಯ ಕ್ಷಣಗಳನ್ನು ಅನುಭವಿಸಿ. ಮತ್ತೆ ಈ ಕ್ಷಣಗಳ ರೋಮಾಂಚಕತೆಯನ್ನು ಸವಿಯಲು ಸಾಧ್ಯವಿಲ್ಲ’ ಎಂಬ ಅರ್ಥದ ಈ ಗೀತೆಯನ್ನು ಹಲವರು ಸೇರಿ ಬರೆದಿದ್ದಾರೆ.

ಅಮೆರಿಕದ ನಟ ವಿಲ್‌ ಸ್ಮಿತ್‌, ಗಾಯಕ ನಿಕಿ ಜ್ಯಾಮ್‌ ಹಾಗೂ ಗಾಯಕಿ ಎರಾ ಇಸ್ತ್ರೆಫಿ ಈ ಗೀತೆಯನ್ನು ಹಾಡಿದ್ದಾರೆ. ಡಿಪ್ಲೊ, ದಿ ಪಿಕಾರ್ಡ್‌ ಬ್ರದರ್ಸ್‌ ಹಾಗೂ
ಫ್ರೀ ಸ್ಕೂಲ್‌ ಈ ಗೀತೆಯ ನಿರ್ಮಾಪಕರು.

ವಿಶ್ವಕಪ್‌ ಫುಟ್‌ಬಾಲ್‌ನ ಗತ ವೈಭವ ಹಾಗೂ ಕ್ರೀಡೆಯ ಮಹತ್ವವನ್ನು ಸಾರುವ ಈ ಗೀತೆಯನ್ನು ಮೂರು ವಾರಗಳ ಹಿಂದೆ ಬಿಡುಗಡೆ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.