ವಿಶಾಖಪಟ್ಟಣ (ಪಿಟಿಐ): ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಟೂರ್ನಿಯಲ್ಲಿ ಗೆಲುವಿನ ಹಾದಿಗೆ ಮರಳುವ ಪ್ರಯತ್ನದಲ್ಲಿರುವ ಮುಂಬೈ ಇಂಡಿಯನ್ಸ್ ಮತ್ತು ಡೆಕ್ಕನ್ ಚಾರ್ಜರ್ಸ್ ತಂಡಗಳು ಸೋಮವಾರ ಇಲ್ಲಿ ನಡೆಯುವ ಪಂದ್ಯದಲ್ಲಿ ಪರಸ್ಪರ ಎದುರಾಗಲಿವೆ.
ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ಗೆ ಆಘಾತ ನೀಡಿದ್ದ ಮುಂಬೈ ತನ್ನ ಎರಡನೇ ಪಂದ್ಯದಲ್ಲಿ ಪುಣೆ ವಾರಿಯರ್ಸ್ ಎದುರು ಅಚ್ಚರಿಯ ಸೋಲು ಅನುಭವಿಸಿತ್ತು. ಮತ್ತೊಂದೆಡೆ ಡೆಕ್ಕನ್ ಚಾರ್ಜರ್ಸ್ ಶನಿವಾರ ಮೊದಲ ಪಂದ್ಯದಲ್ಲಿ ಚೆನ್ನೈಗೆ ಶರಣಾಗಿತ್ತು.
ಆದ್ದರಿಂದ ವೈ.ಎಸ್. ರಾಜಶೇಖರ ರೆಡ್ಡಿ ಕ್ರೀಡಾಂಗಣದಲ್ಲಿ ಇಂದು ನಡೆಯುವ ಪಂದ್ಯ ಆತ್ಮವಿಶ್ವಾಸವನ್ನು ಮರಳಿ ಪಡೆಯುವ ನಿಟ್ಟಿನಲ್ಲಿ ಉಭಯ ತಂಡಗಳಿಗೆ ಮಹತ್ವದ್ದಾಗಿದೆ. ಸಚಿನ್ ತೆಂಡೂಲ್ಕರ್ ಅನುಪಸ್ಥಿತಿಯಲ್ಲೂ ಮುಂಬೈ ತಂಡ ಅಲ್ಪ `ಬಲಾಢ್ಯ~ವಾಗಿ ಕಾಣಿಸುತ್ತಿದೆ. ಮೊದಲ ಪಂದ್ಯದ ವೇಳೆ ಕೈಬೆರಳಿನ ಗಾಯಕ್ಕೆ ಒಳಗಾಗಿದ್ದ ಸಚಿನ್ ಪುಣೆ ಎದುರೂ ಆಡಿರಲಿಲ್ಲ.
ಹರಭಜನ್ ಸಿಂಗ್ ಬಳಗ ಪುಣೆ ವಾರಿಯರ್ಸ್ ಎದುರು ಬ್ಯಾಟಿಂಗ್‌ನಲ್ಲಿ ವೈಫಲ್ಯ ಅನುಭವಿಸಿತ್ತು. ದಿನೇಶ್ ಕಾರ್ತಿಕ್ ಮತ್ತು ಜೇಮ್ಸ ಫ್ರಾಂಕ್ಲಿನ್ ಅವರನ್ನು ಹೊರತುಪಡಿಸಿ ಉಳಿದ ಬ್ಯಾಟ್ಸ್‌ಮನ್‌ಗಳು ಮಿಂಚುವಲ್ಲಿ ವಿಫಲರಾಗಿದ್ದರು. ಮುಂಬೈ ಬೌಲರ್‌ಗಳು ಆಡಿದ ಎರಡೂ ಪಂದ್ಯಗಳಲ್ಲಿ ಪ್ರಭಾವಿ ಎನಿಸಿದ್ದಾರೆ. ಲಸಿತ್ ಮಾಲಿಂಗ, ಮುನಾಫ್ ಪಟೇಲ್, ಪ್ರಗ್ಯಾನ್ ಓಜಾ ಮತ್ತು ಹರಭಜನ್ ತಮ್ಮ ಸಾಮರ್ಥ್ಯ ತೋರಿಸಿಕೊಟ್ಟಿದ್ದಾರೆ.
ಆದ್ದರಿಂದ ಡೆಕ್ಕನ್ ಚಾರ್ಜರ್ಸ್ ವಿರುದ್ಧ ಗೆಲುವು ಲಭಿಸಬೇಕಾದರೆ ಬ್ಯಾಟ್ಸ್‌ಮನ್‌ಗಳು ಜವಾಬ್ದಾರಿಯುತ ಪ್ರದರ್ಶನ ನೀಡುವುದು ಅಗತ್ಯ. ರಿಚರ್ಡ್ ಲೆವಿ ಮೊದಲ ಪಂದ್ಯದಲ್ಲಿ ಅರ್ಧಶತಕ ಗಳಿಸಿದ್ದರೂ, ಪುಣೆ ಎದುರು ವಿಫಲರಾಗಿದ್ದರು. ರೋಹಿತ್ ಶರ್ಮ, ಸೂರ್ಯಕುಮಾರ್ ಯಾದವ್ ಮತ್ತು ಕೀರನ್ ಪೊಲಾರ್ಡ್ ಇನ್ನೂ ಲಯ ಕಂಡುಕೊಂಡಿಲ್ಲ.
ಮುಂಬೈ ತಂಡ ಲೆವಿ ಅವರನ್ನೇ ನೆಚ್ಚಿಕೊಂಡಿದೆ. ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಅತಿವೇಗದ ಶತಕ ಗಳಿಸಿರುವ ದಕ್ಷಿಣ ಆಫ್ರಿಕಾದ ಈ ಬ್ಯಾಟ್ಸ್‌ಮನ್ ಸೋಮವಾರ ತನ್ನದೇ ದೇಶದ ಡೇಲ್ ಸ್ಟೇನ್ ವಿರುದ್ಧ ಆಡಲಿದ್ದಾರೆ. ಇದು ಕುತೂಹಲಕ್ಕೆ ಕಾರಣವಾಗಿದೆ.
ಕ್ಯಾಮರೂನ್ ವೈಟ್ ನೇತೃತ್ವದ ಚಾರ್ಜರ್ಸ್ ಸೂಪರ್ ಕಿಂಗ್ಸ್ ಎದುರು ಎಲ್ಲ ವಿಭಾಗಗಳಲ್ಲೂ ವೈಫಲ್ಯ ಅನುಭವಿಸಿತ್ತು. ಆದರೂ ಈ ತಂಡವನ್ನು ಕಡೆಗಣಿಸುವಂತಿಲ್ಲ. ಏಕೆಂದರೆ ವೈಟ್, ಡೇನಿಯಲ್ ಕ್ರಿಸ್ಟಿಯನ್ ಮತ್ತು ಡೇನಿಯಲ್ ಹ್ಯಾರಿಸ್ ಅವರಂತಹ ಆಟಗಾರರು ಯಾವುದೇ ಸವಾಲನ್ನು ಮೆಟ್ಟಿನಿಲ್ಲುವ ತಾಕತ್ತು ಹೊಂದಿದ್ದಾರೆ. ಕರ್ನಾಟಕ ರಣಜಿ ತಂಡದ ಆಟಗಾರ ಭರತ್ ಚಿಪ್ಲಿ ತಮಗೆ ಲಭಿಸುವ ಅವಕಾಶವನ್ನು ಹೇಗೆ ಬಳಸಿಕೊಳ್ಳುವರು ಎಂಬುದನ್ನು ನೋಡಬೇಕು.
ಚಾರ್ಜರ್ಸ್ ತಂಡದ ಬೌಲಿಂಗ್ ವಿಭಾಗದ ನೇತೃತ್ವದಲ್ಲಿ ಸ್ಟೇನ್ ವಹಿಸಿಕೊಳ್ಳಲಿದ್ದಾರೆ. ಅವರಿಗೆ ಸಾಥ್ ನೀಡಲು ಮನ್‌ಪ್ರೀತ್ ಗೋನಿ, ಕ್ರಿಸ್ಟಿಯನ್ ಇದ್ದಾರೆ. ಚೆನ್ನೈ ಬ್ಯಾಟ್ಸ್ ಮನ್‌ಗಳು ಈ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದ್ದರು. ಅದರಲ್ಲೂ ಗೋನಿ ಕಳೇದ ಪಂದ್ಯದಲ್ಲಿ 4 ಓವರ್‌ಗಳಲ್ಲಿ 54 ರನ್‌ಗಳನ್ನು ಬಿಟ್ಟುಕೊಟ್ಟಿದ್ದರು.
ತಂಡಗಳು
ಮುಂಬೈ ಇಂಡಿಯನ್ಸ್: ಹರಭಜನ್ ಸಿಂಗ್ (ನಾಯಕ), ಸಚಿನ್ ತೆಂಡೂಲ್ಕರ್, ಅಬು ನೆಚೀಮ್ ಅಹ್ಮದ್, ಅಂಬಟಿ ರಾಯುಡು, ಧವಳ್ ಕುಲಕರ್ಣಿ, ದಿನೇಶ್ ಕಾರ್ತಿಕ್, ಮುನಾಫ್ ಪಟೇಲ್, ಪ್ರಗ್ಯಾನ್ ಓಜಾ, ರೋಹಿತ್ ಶರ್ಮ, ಸೂರ್ಯಕುಮಾರ್ ಯಾದವ್, ಟಿ. ಸುಮನ್, ಆರ್.ಪಿ. ಸಿಂಗ್, ಜೇಮ್ಸ ಫ್ರಾಂಕ್ಲಿನ್, ಕೀರನ್ ಪೊಲಾರ್ಡ್, ಲಸಿತ್ ಮಾಲಿಂಗ, ರಿಚರ್ಡ್ ಲೆವಿ.
ಡೆಕ್ಕನ್ ಚಾರ್ಜರ್ಸ್: ಕ್ಯಾಮರೂನ್ ವೈಟ್ (ನಾಯಕ), ಡೇನಿಯಲ್ ಹ್ಯಾರಿಸ್, ಶಿಖರ್ ಧವನ್, ಪಾರ್ಥಿವ್ ಪಟೇಲ್, ಭರತ್ ಚಿಪ್ಲಿ, ಡೇನಿಯಲ್ ಕ್ರಿಸ್ಟಿಯನ್, ಮನ್‌ಪ್ರೀತ್ ಗೋನಿ, ರವಿ ತೇಜಾ, ಅಂಕಿತ್ ಶರ್ಮ, ಡೇಲ್ ಸ್ಟೇನ್, ಟಿ.ಪಿ. ಸುಧೀಂದ್ರ, ಜೆಪಿ ಡುಮಿನಿ, ರಸ್ಟಿ ಥೆರಾನ್, ಅಮಿತ್ ಮಿಶ್ರಾ, ತನ್ಮಯ್ ಶ್ರೀವಾಸ್ತವ, ಅಭಿಷೇಕ್ ಜುನ್‌ಜುನ್‌ವಾಲಾ.
ಪಂದ್ಯದ ಆರಂಭ: ರಾತ್ರಿ 8.00ಕ್ಕೆ, ನೇರ ಪ್ರಸಾರ: ಸೆಟ್ ಮ್ಯಾಕ್ಸ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.