ADVERTISEMENT

ಇಎಸ್‌ಪಿಎನ್ ಕ್ರಿಕ್‌ಇನ್ಫೋ: ಸಚಿನ್, ಲಕ್ಷ್ಮಣ್‌ಗೆ ಗೌರವ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2011, 18:20 IST
Last Updated 14 ಫೆಬ್ರುವರಿ 2011, 18:20 IST

ಬೆಂಗಳೂರು: ಸಚಿನ್ ತೆಂಡೂಲ್ಕರ್ ಮತ್ತು ವಿವಿಎಸ್ ಲಕ್ಷ್ಮಣ್ ಅವರು ಸೋಮವಾರ ರಾತ್ರಿ ನಡೆದ ‘ಇಎಸ್‌ಪಿ ಎನ್ ಕ್ರಿಕ್‌ಇನ್ಫೋ’ ನಾಲ್ಕನೇ ವರ್ಷದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪ್ರಮುಖ ಗೌರವ ಪಡೆದುಕೊಂಡರು.

ಲಕ್ಷ್ಮಣ್ ಮತ್ತು ಸಚಿನ್ ಕ್ರಮವಾಗಿ ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್‌ನಲ್ಲಿ ಶ್ರೇಷ್ಠ ಬ್ಯಾಟಿಂಗ್ ಪ್ರದರ್ಶನಕ್ಕೆ ನೀಡ ಲಾಗುವ ಪ್ರಶಸ್ತಿ ತಮ್ಮದಾಗಿಸಿ ಕೊಡರು. ದಕ್ಷಿಣ ಆಫ್ರಿಕಾದ ವೇಗಿ ಡೇಲ್ ಸ್ಟೇನ್ ಅವರು ಟೆಸ್ಟ್‌ನಲ್ಲಿ ಶ್ರೇಷ್ಠ ಬೌಲಿಂಗ್ ಪ್ರದರ್ಶನಕ್ಕೆ ನೀಡುವ ಪ್ರಶಸ್ತಿ ಪಡೆದರು.

ಡಿಸೆಂಬರ್ ತಿಂಗಳಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಡರ್ಬನ್‌ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಗಳಿಸಿದ 96 ರನ್‌ಗಳ ಇನಿಂಗ್ಸ್ ಲಕ್ಷ್ಮಣ್ ಅವರಿಗೆ ಪ್ರಶಸ್ತಿ ತಂದಿತ್ತಿದೆ. ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕ ಸಾಧನೆ ಮಾಡಿದ ಇನಿಂಗ್ಸ್‌ಗೆ ಸಚಿನ್ ಪ್ರಶಸ್ತಿ ಜಯಿಸಿದರು.

ಫೆಬ್ರುವರಿ ತಿಂಗಳಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಗ್ವಾಲಿಯರ್‌ನಲ್ಲಿ ನಡೆದ ಪಂದ್ಯದಲ್ಲಿ ಸಚಿನ್ ದ್ವಿಶತಕ ಗಳಿಸಿ ಐತಿಹಾಸಿಕ ಸಾಧನೆ ಮಾಡಿದ್ದರು. ಏಕದಿನ ಕ್ರಿಕೆಟ್‌ನ 40 ವರ್ಷಗಳ ಇತಿಹಾಸದಲ್ಲಿ ದ್ವಿಶತಕ ಗಳಿಸಿದ ಮೊದಲ ಆಟಗಾರ ಸಚಿನ್ ಆಗಿದ್ದಾರೆ.

ಸಚಿನ್ ಅವರು ಈ ಪ್ರಶಸ್ತಿಗಾಗಿ ಪಾಕಿಸ್ತಾನದ ಅಬ್ದುಲ್ ರಜಾಕ್ ಅವರಿಂದ ಪ್ರಬಲ ಸ್ಪರ್ಧೆ ಎದುರಿಸಿದ್ದರು. ದಕ್ಷಿಣ ಅಫ್ರಿಕಾ ವಿರುದ್ಧದ ಪಂದ್ಯದಲ್ಲಿ ರಜಾಕ್ 109 ರನ್ ಗಳಿಸಿ ತಂಡಕ್ಕೆ ಅದ್ಭುತ ಗೆಲುವು ತಂದುಕೊಟ್ಟಿದ್ದರು.

ಏಕದಿನ ಪಂದ್ಯದಲ್ಲಿ ಶ್ರೇಷ್ಠ ಬೌಲಿಂಗ್ ಪ್ರದರ್ಶನಕ್ಕೆ ನೀಡಲಾಗುವ ಪ್ರಶಸ್ತಿಯನ್ನು ಪಾಕಿಸ್ತಾನದ ಉಮರ್ ಗುಲ್ ಗೆದ್ದುಕೊಂಡರು. ದಿ ಓವಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಗುಲ್ 42 ರನ್‌ಗಳಿಗೆ ಆರು ವಿಕೆಟ್ ಪಡೆದಿದ್ದರು.

ಟ್ವೆಂಟಿ-20 ಪಂದ್ಯದಲ್ಲಿ ಶ್ರೇಷ್ಠ ಇನಿಂಗ್ಸ್‌ಗೆ ನೀಡುವ ಪ್ರಶಸ್ತಿ ಆಸ್ಟ್ರೇಲಿಯಾದ ಮೈಕ್ ಹಸ್ಸಿ ಪಾಲಾಯಿತು. ಶ್ರೇಷ್ಠ ಬೌಲಿಂಗ್ ಪ್ರಶಸ್ತಿಯನ್ನು ನ್ಯೂಜಿಲೆಂಡ್‌ನ ಟಿಮ್ ಸೌಥಿ ಗೆದ್ದುಕೊಂಡರು.

ರಮೀಜ್ ರಾಜಾ, ಕೆಪ್ಲರ್ ವೆಸೆಲ್ಸ್, ಇಯಾನ್ ಚಾಪೆಲ್, ಟೋನಿ ಗ್ರೇಗ್, ಜೆಫ್ ಬಾಯ್ಕಾಟ್, ಸಂಜಯ್ ಮಂಜ್ರೇಕರ್ ಮತ್ತು ಮಾರ್ಟಿನ್ ಕ್ರೋವ್ ಅವರು ತೀರ್ಪುಗಾರರ ತಂಡದಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.