ADVERTISEMENT

ಇದು ಗೆಲ್ಲಲೇಬೇಕಾದ ಪಂದ್ಯ: ಚಿಗುಂಬುರಾ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2011, 19:30 IST
Last Updated 27 ಫೆಬ್ರುವರಿ 2011, 19:30 IST

ನಾಗಪುರ (ಪಿಟಿಐ): ‘ವಿಶ್ವಕಪ್‌ನಲ್ಲಿ ಗೆಲುವಿನ ಖಾತೆ ತೆರೆಯಲು ಇದೊಂದು ನಮಗೆ ಸಿಕ್ಕ ಅವಕಾಶ’ ಕ್ರಿಕೆಟ್ ಶಿಶುಗಳು ಎನಿಸಿರುವ ಕೆನಡಾ ತಂಡದ ನಾಯಕ ಆಶೀಶ್ ಬಾಗೈ ಹಾಗೂ ಜಿಂಬಾಬ್ವೆ ತಂಡದ ನಾಯಕ ಎಲ್ಟೋನ್ ಚಿಗುಂಬುರಾ ಅವರ ಮಾತಿದು. ಈ ತಂಡಗಳು ಜಾಮ್ತಾದ ವಿದರ್ಭ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ಸೋಮವಾರ ಪೈಪೋಟಿ ನಡೆಸುತ್ತಿವೆ. ‘ಈ ಪಂದ್ಯದಲ್ಲಿ ನಾವು ಗೆಲ್ಲಲೇಬೇಕು, ಅದಕ್ಕಾಗಿ ನಾವು ಚೆನ್ನಾಗಿ ಬ್ಯಾಟ್ ಮಾಡಬೇಕು. ಎದುರಾಳಿಯನ್ನು ಒತ್ತಡಕ್ಕೆ ಸಿಲುಕಿಸಬೇಕು’ ಎಂದು ಭಾನುವಾರ ಅಭ್ಯಾಸದ ಬಳಿಕ ಚಿಗುಂಬುರಾ ಹೇಳಿದರು.

‘ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ನಮ್ಮ ಬೌಲರ್‌ಗಳು ಉತ್ತಮ ಪ್ರದರ್ಶನ ತೋರಿದ್ದರು. 262 ರನ್‌ಗಳಿಗೆ ಅವರನ್ನು ನಿಯಂತ್ರಿಸಿದ್ದರು. ಸ್ಪಿನ್ ನಮ್ಮ ಬಲ. ಈ ಬಲಕ್ಕೆ ನಾವು ಬದ್ಧರಾಗಿರುತ್ತೇವೆ. ಫೀಲ್ಡಿಂಗ್ ಕೂಡ ಚೆನ್ನಾಗಿದೆ. ಈಗ ನಾವು ಬ್ಯಾಟಿಂಗ್‌ನತ್ತ ಹೆಚ್ಚು ಗಮನ ಹರಿಸುತ್ತಿದ್ದೇವೆ. ಕೆನಡಾ ಎದುರು ಉತ್ತಮ ಪ್ರದರ್ಶನ ತೋರುವ ವಿಶ್ವಾಸವಿದೆ’ ಎಂದು ಅವರು ವಿವರಿಸಿದರು.

‘ನಮ್ಮ ತಂಡದಲ್ಲಿರುವ ಮಾಜಿ ನಾಯಕರಾದ ತಟೆಂಡ ಟೈಬು ಹಾಗೂ ಪ್ರಾಸ್ಪರ್ ಉತ್ಸೆಯಾ ಸಾಕಷ್ಟು ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಇದರಿಂದ ತಂಡಕ್ಕೆ ನೆರವು ಸಿಗುತ್ತಿದೆ’ ಎಂದು ಚಿಗುಂಬುರಾ ತಿಳಿಸಿದ್ದಾರೆ. ಜೊತೆಗೆ ಬೌಲಿಂಗ್ ಕೋಚ್ ಆಗಿ ಹೀತ್ ಸ್ಟ್ರೀಕ್ ಹಾಗೂ ಕೋಚ್ ಆಗಿ ಗ್ರ್ಯಾಂಟ್ ಫ್ಲವರ್ ಇರುವುದು ತಂಡಕ್ಕೆ ಲಭಿಸಿದ ಸಕಾರಾತ್ಮಕ ಅಂಶ ಎಂದಿದ್ದಾರೆ.

‘ನಮಗೆ ಕೂಡ ಇದು ಮಹತ್ವದ ಪಂದ್ಯ. ತಂಡದ ಅಗ್ರ ಕ್ರಮಾಂಕದ ಮೂರು ಮಂದಿ ಹೆಚ್ಚಿನ ಜವಾಬ್ದಾರಿ ಹೊರಬೇಕು’ ಎಂದು ಕೆನಡಾ ತಂಡದ ನಾಯಕ ಬಾಗೈ ಹೇಳಿದ್ದಾರೆ. ಕೆನಡಾ ತಂಡದ ಅತ್ಯುತ್ತಮ ಬ್ಯಾಟ್ಸ್‌ಮನ್ ಜಾನ್ ಡೇವಿಸನ್ ಕೂಡ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು. ‘ನನ್ನ ಮೇಲೆ ತುಂಬಾ ನಿರೀಕ್ಷೆಯ ಭಾರವಿದೆ. 2003ರ ವಿಶ್ವಕಪ್‌ನಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ ಗಳಿಸಿದ 111 ಹಾಗೂ ನ್ಯೂಜಿಲೆಂಡ್ ಎದುರು ಗಳಿಸಿದ 75 ರನ್‌ಗಳ ಆಟದ ಬಗ್ಗೆ ಜನರು ಪದೇಪದೇ ಮಾತನಾಡುತ್ತಿರುತ್ತಾರೆ. ಆದರೆ ನಾನು ತಂಡದ ಸನ್ನಿವೇಶಕ್ಕೆ ತಕ್ಕ ರೀತಿಯಲ್ಲಿ ಆಡಬೇಕು’ ಎಂದು 40 ವರ್ಷ ವಯಸ್ಸಿನ ಡೇವಿಸನ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.