ADVERTISEMENT

ಇನ್ನಷ್ಟು ಪಂದ್ಯಗಳನ್ನು ಗೆಲ್ಲುವೆ

ಟೆನಿಸ್ ಆಟಗಾರ್ತಿ ಸಾನಿಯಾ ವಿಶ್ವಾಸ

​ಪ್ರಜಾವಾಣಿ ವಾರ್ತೆ
Published 13 ಜುಲೈ 2013, 19:59 IST
Last Updated 13 ಜುಲೈ 2013, 19:59 IST

ನವದೆಹಲಿ (ಪಿಟಿಐ): ತಮ್ಮ ವಯಸ್ಸು ಏರುತ್ತಲೇ ಇದೆ ಎಂದ ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ವೃತ್ತಿಪರ ಟೆನಿಸ್‌ಗೆ ವಿದಾಯ ಹೇಳುವ ಮುನ್ನ ಗ್ರ್ಯಾನ್‌ಸ್ಲಾಮ್‌ನ ಇನ್ನೂ ಹಲವು ಪಂದ್ಯಗಳಲ್ಲಿ ಗೆದ್ದು ಎತ್ತರದ ಸಾಧನೆ ತೋರುವ ವಿಶ್ವಾಸದಲ್ಲಿದ್ದಾರೆ.

`ಗಾಯಗಳಿಂದ ಚೇತರಿಸಿಕೊಳ್ಳಲು ಬಹಳ ಸಮಯ ಬೇಕಾಗುತ್ತಿದೆ' ಎಂದು ಮಣಿಕಟ್ಟು ಹಾಗೂ ಮೊಳಕಾಲು ನೋವಿನಿಂದ ಬಳಲುತ್ತಿರುವ 26 ವರ್ಷದ ಹೈದರಾಬಾದ್‌ನ ಈಆಟಗಾರ್ತಿ ಅಭಿಪ್ರಾಯ ಪಟ್ಟಿದ್ದಾರೆ.

`ವಯಸ್ಸಾದಂತೆ ದೈಹಿಕ ಸಾಮರ್ಥ್ಯ ಕಾಯ್ದುಕೊಳ್ಳುವುದು ತುಂಬಾ ಕಷ್ಟ. ನಾನು ಈಗಾಗಲೇ ಮೂರು ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಿದ್ದೇನೆ. ಗಾಯಗಳಿಂದಾಗಿ ನನ್ನ ವೃತ್ತಿ ಜೀವನಕ್ಕೆ ಬಹಳ ತೊಂದರೆಯಾಗಿದೆ' ಎಂದರು.

ಇತ್ತೀಚೆಗೆ ಲಂಡನ್‌ನಲ್ಲಿ ನಡೆದ ವಿಂಬಲ್ಡನ್ ಟೂರ್ನಿಯ ಮಿಶ್ರ ಡಬಲ್ಸ್ ವಿಭಾಗದ ಕ್ವಾರ್ಟರ್ ಫೈನಲ್‌ನಲ್ಲಿ ಸೋಲು ಕಂಡಿದ್ದ ಸಾನಿಯಾ, ಈ ವರ್ಷದ ಕೊನೆಯ ಗ್ರ್ಯಾನ್ ಸ್ಲಾಮ್ ಅಮೆರಿಕ ಓಪನ್ ಟೂರ್ನಿಯ ಮೇಲೆ ಕಣ್ಣಿಟ್ಟಿದ್ದಾರೆ.

`ಮುಂಬರುವ ಅಮೆರಿಕ ಓಪನ್ ಟೆನಿಸ್ ಟೂರ್ನಿಯನ್ನು ಎದುರು ನೋಡುತ್ತಿದ್ದೇನೆ. ನನ್ನ ನೆಚ್ಚಿನ ಕೋರ್ಟ್‌ನಲ್ಲಿ ಖಂಡಿತವಾಗಿಯೂ ಉತ್ತಮ ಪ್ರದರ್ಶನ ತೋರುವ ಗುರಿ ಇದೆ. ಆದರೆ ಇನ್ನುಳಿದ 124 ಆಟಗಾರರು ಗುರಿಯೂ ಅದೇ ಆಗಿರುತ್ತದೆ.ಸಾಧ್ಯವಾದಷ್ಟು ಗ್ರ್ಯಾನ್ ಸ್ಲಾಮ್‌ಗಳಲ್ಲಿ ಆಡಬೇಕು. ಟ್ರೋಫಿ  ಜಯಿಸಬೇಕು ಎಂದು ಎಲ್ಲಾ ಆಟಗಾರರು ಆಶಿಸುತ್ತಾರೆ' ಎಂದೂ ಸಾನಿಯಾಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.