ADVERTISEMENT

ಈಜುಕೊಳದಲ್ಲಿ ರುತಾ ಅಬ್ಬರ

​ಪ್ರಜಾವಾಣಿ ವಾರ್ತೆ
Published 31 ಜುಲೈ 2012, 19:30 IST
Last Updated 31 ಜುಲೈ 2012, 19:30 IST
ಈಜುಕೊಳದಲ್ಲಿ ರುತಾ ಅಬ್ಬರ
ಈಜುಕೊಳದಲ್ಲಿ ರುತಾ ಅಬ್ಬರ   

ಲಂಡನ್ (ಎಎಫ್‌ಪಿ/ಐಎಎನ್‌ಎಸ್): ಇವರಿಗಿನ್ನೂ 15 ವರ್ಷ ವಯಸ್ಸು. ಶಾಲಾ ಹುಡುಗಿ. ಆದರೆ ಇವರೀಗ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತೆ. ಈಜು ಸ್ಪರ್ಧೆ ಮುಗಿದ ಬಳಿಕ ಸ್ಕೋರ್ ಬೋರ್ಡ್ ನೋಡಿದ ಲಿಥುವೇನಿಯಾದ ರುತಾ ಮಿಲುಟೈಟ್ ಅವರಿಗೆ ತಮ್ಮ ಕಣ್ಣುಗಳನ್ನೇ ನಂಬಲು ಸಾಧ್ಯವಾಗಲಿಲ್ಲ.

ಲಂಡನ್ ಒಲಿಂಪಿಕ್ಸ್‌ನ ಮಹಿಳೆಯರ 100 ಮೀಟರ್ ಬ್ರೆಸ್ಟ್‌ಸ್ಟ್ರೋಕ್‌ನಲ್ಲಿ ಸೋಮವಾರ ರುತಾ ಮಿಲುಟೈಟ್ ಚಿನ್ನದ ಪದಕದೊಂದಿಗೆ ವಿಜಯ ವೇದಿಕೆ ಮೇಲೆ ನಿಂತಾಗ ಅಲ್ಲಿದ್ದವರಿಗೆಲ್ಲಾ ಅಚ್ಚರಿ. ಕೊನೆಗೆ ಆ ಸಾಧನೆಯನ್ನು ಮೆಚ್ಚಿ ಚಪ್ಪಾಳೆಯ ಶಹಬ್ಬಾಸ್‌ಗಿರಿ ನೀಡಿದರು.

ವಿಜಯ ವೇದಿಕೆ ಮೇಲೆ ನಿಂತಾಗ ದೇಶದ ರಾಷ್ಟ್ರಗೀತೆ ನುಡಿಸುತ್ತಿದ್ದಂತೆ ಈ ಹುಡುಗಿ ಮತ್ತೆ ಭಾವುಕರಾಗಿ ಖುಷಿಯ ಕಣ್ಣೀರಿಟ್ಟರು.

ಈ ಮೂಲಕ ರುತಾ 1972ರ ಮ್ಯೂನಿಕ್ ಒಲಿಂಪಿಕ್ಸ್‌ನಲ್ಲಿ ಆಸ್ಟ್ರೇಲಿಯಾದ ಶೇನ್ ಗೌಲ್ಡ್ ಅವರು ಚಿನ್ನ ಗೆದ್ದು ಕಿರಿಯ ಈಜುಪಟು ಎನಿಸಿದ್ದ ದಾಖಲೆಯನ್ನು ಅಳಿಸಿ ಹಾಕಿದರು. ಜೊತೆಗೆ ಚಿನ್ನ ಗೆದ್ದ ಲಿಥುವೇನಿಯಾದ ಮೊದಲ ಈಜುಪಟು ಎನಿಸಿದರು.

`ಈ ರೇಸ್‌ನಲ್ಲಿ ನನ್ನ ಪೂರ್ಣ ಸಾಮರ್ಥ್ಯ ಬಳಸಿ ಈಜಿದೆ. ಆದರೆ ಚಿನ್ನ ಗೆದ್ದ ಆ ಕ್ಷಣವನ್ನು ನನಗೆ ಇನ್ನೂ ನಂಬಲು ಸಾಧ್ಯವಾಗುತ್ತಿಲ್ಲ. ನಿಜಕ್ಕೂ ನಾನು ಅಚ್ಚರಿಗೆ ಒಳಗಾದೆ. ಹಾಗಾಗಿಯೇ ವಿಜಯ ವೇದಿಕೆ ಮೇಲೆ ನಿಂತಾಗ ಅಳಲು ಶುರು ಮಾಡಿದೆ. ಆಗ ಆ ಅಚ್ಚರಿಯಿಂದ ಹೊರಬಂದೆ. ಈ ಸಾಧನೆ ಬಗ್ಗೆ ನನಗೆ ಹೆಮ್ಮೆ ಇದೆ~ ಎಂದು ಅವರು ನುಡಿದರು.

ಈ ಹಾದಿಯಲ್ಲಿ ಅವರು ಅಮೆರಿದ ರೆಬೆಕ್ಕಾ ಸೋನಿ ಅವರನ್ನು ಹಿಂದಿಕ್ಕಿದರು. ಇದಕ್ಕಾಗಿ ರುತಾ 1 ನಿಮಿಷ 5.47 ಸೆಕೆಂಡ್ಸ್ ತೆಗೆದುಕೊಂಡರು. `ಆಕೆ ಬ್ರಿಟಿಷ್ ಶಾಲೆಗೆ ಹೋಗುತ್ತಾಳೆ. ಬ್ರಿಟಿಷ್ ಕ್ಲಬ್‌ನಲ್ಲಿ ತರಬೇತಿ ನಡೆಸುತ್ತಾಳೆ. ಆದರೆ ಈ ಸಾಧನೆ ಮೂಲಕ ಲಿಥುವೇನಿಯಾದ ಗೌರವ ಹೆಚ್ಚಿಸಿದ್ದಾರೆ. ಆಕೆಗೆ ಉತ್ತಮ ಭವಿಷ್ಯವಿದೆ~ ಎಂದು ರುತಾ ಅವರ ಕೋಚ್ ಜಾನ್ ರುಡ್ ನುಡಿದರು.

ಗ್ರೀವರ್ಸ್‌ಗೆ ಚಿನ್ನ:
ಅಮೆರಿಕದ ಮ್ಯಾಥ್ಯೂ ಗ್ರೀವ ರ್ಸ್ ಪುರುಷರ 100 ಮೀಟರ್ ಬ್ಯಾಕ್‌ಸ್ಟ್ರೋಕ್‌ನಲ್ಲಿ ಚಿನ್ನ ಗೆದ್ದರು. ಅವರು ಒಲಿಂಪಿಕ್ಸ್ ದಾಖಲೆ ಬರೆದರು. ಗ್ರೀವರ್ಸ್ 52.16 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿದರು. 2008ರಲ್ಲಿ ಆ್ಯರನ್ ಪೀಯರ್ಸೊಲ್ (52.54 ಸೆ.) ಅವರ ದಾಖಲೆಯನ್ನು ಅಳಿಸಿ ಹಾಕಿದರು.

ಯಾನಿಕ್‌ಗೆ ಬಂಗಾರ: ಫ್ರಾನ್ಸ್‌ನ ಯಾನಿಕ್ ಆ್ಯಗ್ನೆಲ್ ಪುರುಷರ ವಿಭಾಗದ 200 ಮೀಟರ್ ಫ್ರಿಸ್ಟೈಲ್ ಈಜುವಿನಲ್ಲಿ ಬಂಗಾರದ ಪದಕ ಜಯಿಸಿದರು. ಅದಕ್ಕಾಗಿ ಅವರು 1 ನಿಮಿಷ 43.12 ಸೆಕೆಂಡ್ಸ್ ತೆಗೆದುಕೊಂಡರು. ಹಿಂದಿನ ದಿನವಷ್ಟೇ ಅವರ ಅಚ್ಚರಿ ಪ್ರದರ್ಶನದ ಕಾರಣ ಫ್ರಾನ್ಸ್ ತಂಡ 4್ಡ100 ಮೀ. ಫ್ರಿಸ್ಟೈಲ್ ರಿಲೇಯಲ್ಲಿ ಚಿನ್ನ ಗೆದ್ದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.