ADVERTISEMENT

ಈಜು: ಕರ್ನಾಟಕ ಮತ್ತೆ ಚಾಂಪಿಯನ್

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2011, 19:30 IST
Last Updated 20 ನವೆಂಬರ್ 2011, 19:30 IST
ಈಜು: ಕರ್ನಾಟಕ ಮತ್ತೆ ಚಾಂಪಿಯನ್
ಈಜು: ಕರ್ನಾಟಕ ಮತ್ತೆ ಚಾಂಪಿಯನ್   

ರಾಂಚಿ: ಕರ್ನಾಟಕದ ಈಜುಪಟುಗಳು ಭಾನುವಾರ ಇಲ್ಲಿ ಕೊನೆಗೊಂಡ 65ನೇ ರಾಷ್ಟ್ರೀಯ ಸೀನಿಯರ್ ಈಜು ಚಾಂಪಿಯನ್‌ಷಿಪ್‌ನಲ್ಲಿ ಮತ್ತೆ ಪ್ರಾಬಲ್ಯ ಮೆರೆದಿದ್ದಾರೆ. 23 ಚಿನ್ನ ಸೇರಿದಂತೆ 43 ಪದಕಗಳೊಂದಿಗೆ ಮತ್ತೊಮ್ಮೆ ಸಮಗ್ರ ಚಾಂಪಿಯನ್ ಪಟ್ಟ ಪಡೆಯಲು ಕಾರಣರಾಗಿದ್ದಾರೆ.

ಐದು ದಿನಗಳ ಈ ಸ್ಪರ್ಧೆಯಲ್ಲಿ ಕರ್ನಾಟಕ ತಂಡ 327 ಪಾಯಿಂಟ್ ಸಂಗ್ರಹಿಸಿ ಈ ಸಾಧನೆ ಮಾಡಿದೆ. ಎರಡನೇ ಸ್ಥಾನ ಪಡೆದ ಮಹಾರಾಷ್ಟ್ರ(176)ಕ್ಕಿಂತ 151 ಪಾಯಿಂಟ್ ಹೆಚ್ಚು ಗಳಿಸಿದ್ದು ವಿಶೇಷ. ಅಷ್ಟು ಮಾತ್ರವಲ್ಲದೇ, ತಂಡ ವಿಭಾಗದಲ್ಲೂ ರಾಜ್ಯದ ಪುರುಷ ಹಾಗೂ ಮಹಿಳೆಯರು ಚಾಂಪಿಯನ್ ಆಗಿದ್ದಾರೆ.

ಒಟ್ಟು ಐದು ಪದಕ ಜಯಿಸಿದ ಕರ್ನಾಟಕದ ಆ್ಯರನ್ ಡಿಸೋಜಾ (ಪುರುಷರ ವಿಭಾಗ) ಹಾಗೂ ಪೊಲೀಸ್ ತಂಡದ ರಿಚಾ ಮಿಶ್ರಾ (ಮಹಿಳೆಯರ ವಿಭಾಗ) ವೈಯಕ್ತಿಕ ಚಾಂಪಿಯನ್ ಎನಿಸಿದರು.

ಕೊನೆಯ ದಿನ ಆ್ಯರನ್ 200 ಮೀ. ಬಟರ್‌ಫ್ಲೈ ಹಾಗೂ 100 ಮೀ.ಫ್ರೀಸ್ಟೈಲ್‌ನಲ್ಲಿ ಚಿನ್ನದ ಪದಕ ಗೆದ್ದರು. ಇದಕ್ಕೂ ಮೊದಲು ರಾಜ್ಯದ ಸೌರಭ್ ಸಾಂಗ್ವೇಕರ್ (15:51.10) ಅವರು 1500 ಮೀ.ಫ್ರೀಸ್ಟೈಲ್‌ನಲ್ಲಿ ನೂತನ ರಾಷ್ಟ್ರೀಯ ದಾಖಲೆ ನಿರ್ಮಿಸಿದರು. 2009ರಲ್ಲಿ ಮಂದಾರ ದಿವ್ಸೆ (15:56.96) ನಿರ್ಮಿಸಿದ್ದ ದಾಖಲೆಯನ್ನು ಅವರು ಅಳಿಸಿ ಹಾಕಿದರು.

ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ಬೇಕಾದ 15:43.74 ಸೆ. ಸಮಯವನ್ನು ತಲುಪಲು ಪ್ರಯತ್ನಿಸುವುದಾಗಿ ಸೌರಭ್ ನುಡಿದಿದ್ದಾರೆ.

1500 ಮೀ.ಫ್ರೀಸ್ಟೈಲ್‌ನಲ್ಲಿ ರಾಜ್ಯದ ಎ.ಪಿ.ಗಗನ್ ಹಾಗೂ 200 ಮೀ. ಬಟರ್‌ಫ್ಲೈನಲ್ಲಿ ರೆಹಾನ್ ಪೂಂಚಾ ಬೆಳ್ಳಿ ಪದಕ ಜಯಿಸಿದರು. 200 ಮೀ. ಬಟರ್‌ಫ್ಲೈನಲ್ಲಿ ಪೂಜಾ ಆರ್.ಆಳ್ವಾ ಮೊದಲ ಸ್ಥಾನ ಗಳಿಸಿದರು. ವಾಟರ್ ಪೋಲೊ ವಿಭಾಗದಲ್ಲಿ ಕೇರಳ (ಮಹಿಳೆಯರ ವಿಭಾಗ) ಹಾಗೂ ಎಸ್‌ಎಸ್‌ಸಿಬಿ (ಪುರುಷರ ವಿಭಾಗ) ಮೊದಲ ಸ್ಥಾನ ಪಡೆದವು.

ಸಮಗ್ರ ಚಾಂಪಿಯನ್: ಕರ್ನಾಟಕ (327 ಪಾಯಿಂಟ್ಸ್; ಪದಕ: 23 ಚಿನ್ನ, 11 ಬೆಳ್ಳಿ, 9 ಕಂಚು). ತಂಡ ಚಾಂಪಿಯನ್‌ಷಿಪ್: ಪುರುಷರು: ಕರ್ನಾಟಕ (164 ಪಾಯಿಂಟ್ಸ್). ಮಹಿಳೆಯರು: ಕರ್ನಾಟಕ (163 ಪಾಯಿಂಟ್ಸ್). ಅತ್ಯುತ್ತಮ ಈಜುಪಟು (ಪುರುಷರು): ಆ್ಯರನ್ ಡಿಸೋಜಾ (ಕರ್ನಾಟಕ; 35     ಪಾಯಿಂಟ್ಸ್). ಮಹಿಳೆಯರು: ರಿಚಾ ಮಿಶ್ರಾ (ಪೊಲೀಸ್; 35 ಪಾಯಿಂಟ್ಸ್). ತಂಡ ಚಾಂಪಿಯನ್‌ಷಿಪ್: ಡೈವಿಂಗ್ (ಪುರುಷರು): ಆರ್‌ಎಸ್‌ಪಿಬಿ (30 ಪಾಯಿಂಟ್). ಮಹಿಳೆಯರು: ಆರ್‌ಎಸ್‌ಪಿಬಿ (26 ಪಾಯಿಂಟ್ಸ್).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.