ADVERTISEMENT

ಈಜು: ಕರ್ನಾಟಕ ರಿಲೆ ತಂಡಕ್ಕೆ ಚಿನ್ನ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2011, 18:30 IST
Last Updated 13 ಫೆಬ್ರುವರಿ 2011, 18:30 IST
ಈಜು: ಕರ್ನಾಟಕ ರಿಲೆ ತಂಡಕ್ಕೆ ಚಿನ್ನ
ಈಜು: ಕರ್ನಾಟಕ ರಿಲೆ ತಂಡಕ್ಕೆ ಚಿನ್ನ   

ರಾಂಚಿ: ಕರ್ನಾಟಕದ ಪುರುಷರ ಈಜು ತಂಡವು ನೂತನ ಕೂಟ ದಾಖಲೆ ಮತ್ತು ಚಿನ್ನದ ಪದಕದೊಂದಿಗೆ ಭಾನುವಾರ 34ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ತಮ್ಮ ಅಭಿಯಾನ ಆರಂಭಿಸಿದವು.

ಪುರುಷರ 4x100 ಮೀಟರ್ ರಿಲೆಯನ್ನು 3ನಿ, 37.47 ಸೆಕೆಂಡು ಗಳಲ್ಲಿ ಪೂರೈಸುವಲ್ಲಿ ಕರ್ನಾಟಕ ತಂಡ ಯಶಸ್ವಿಯಾಯಿತು. ಜಿ.ಪಿ. ಅರ್ಜುನ್, ಎ.ಪಿ. ಗಗನ್, ಆದಿತ್ಯ ರೋಷನ್ ಮತ್ತು ಅಶ್ವಿನ್ ಮೆನನ್ ಇದ್ದ ತಂಡವು ಈ ಸಾಧನೆ ಮಾಡಿತು. 2002ರಲ್ಲಿದ್ದ ಹಳೆಯ ದಾಖಲೆಯನ್ನು ಅಳಿಸಿ ಹಾಕಿದರು. ರಿಲೆಯಲ್ಲಿ ಸರ್ವಿಸ್‌ಸ್ ತಂಡವು ಬೆಳ್ಳಿ ಮತ್ತು ಮಹಾರಾಷ್ಟ್ರ ಕಂಚು ಪಡೆದುಕೊಂಡವು.

ಖಾಡೆ, ರಿಚಾ ದಾಖಲೆ: ವೀರ ಧವಳ್ ಖಾಡೆ ಮತ್ತು ರಿಚಾ ಮಿಶ್ರಾ ಚಿನ್ನ ಡಬಲ್ ಸಾಧನೆ ಮಾಡಿದರು. ಭಾನುವಾರ 200 ಮೀಟರ್ ಫ್ರೀಸ್ಟೈಲ್ ಮತ್ತು 100 ಮೀಟರ್ ಬಟರ್‌ಫ್ಲೈನಲ್ಲಿ ಚಿನ್ನದ ಪದಕಗಳನ್ನು ತಮ್ಮದಾಗಿಸಿ ಕೊಂಡರು.  200 ಮೀಟರ್ ಫ್ರೀಸ್ಟೈಲ್ ನಲ್ಲಿ 19 ವರ್ಷದ ಖಾಡೆ 1ನಿ 53. 91ಸೆಕೆಂಡುಗಳಲ್ಲಿ ಗುರಿಮುಟ್ಟಿದರು.

ಕರ್ನಾಟಕದ ರೋಹಿತ್ ಹವಾಲ್ದಾರ್ (ಕಾಲ: 1ನಿ 55.16)ಮತ್ತು ಎ.ಪಿ. ಗಗನ್ ಕ್ರಮವಾಗಿ ಬೆಳ್ಳಿ ಮತ್ತು ಕಂಚು ಗಳಿಸಿದರು. ಈ ಸ್ಪರ್ಧೆಯ 15 ನಿಮಿಷಗಳ ನಂತರ ನಡೆದ 100 ಮೀಟರ್ ಬಟರ್‌ಫ್ಲೈನಲ್ಲಿ 55.56 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ನೂತನ ಕೂಟ ದಾಖಲೆ ಬರೆದರು. 2002ರಲ್ಲಿ ಅಕ್ಬರ್ ಅಲಿ ಮಿರ್ (1ನಿ.5ಸೆ) ದಾಖಲೆಯನ್ನು ಮುರಿದರು.

ಮಹಿಳೆಯರ ವಿಭಾಗದಲ್ಲಿ ರಿಚಾ ಮಿಶ್ರಾ 200 ಮೀಟರ್ ಫ್ರೀಸ್ಟೈಲ್ (ಕಾಲ: 2ನಿ09.53ಸೆ) ಮತ್ತು 100 ಮೀಟರ್ ಬಟರ್‌ಫ್ಲೈನಲ್ಲಿ (ಕಾಲ: 1ನಿ,04.41ಸೆ)  ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದರು.

ಫಲಿತಾಂಶಗಳು: ಪುರುಷರು: 200ಮೀ ಫ್ರೀಸ್ಟೈಲ್: ವೀರಧವಳ್ ಖಾಡೆ (ಮಹಾರಾಷ್ಟ್ರ) -1, ರೋಹಿತ್ ಹವಾಲ್ದಾರ್ (ಕರ್ನಾ ಟಕ)-2, ಎ.ಪಿ. ಗನ್ (ಕರ್ನಾಟಕ)-3 ಕಾಲ: (ಹೊಸ ದಾಖಲೆ: 1ನಿ, 53,91ಸೆ, ಹಳೆಯದು: 1ನಿ, 54.18ಸೆ). 100 ಮೀ. ಬಟರ್‌ಫ್ಲೈ: ವೀರ ಧವಳ್ ಖಾಡೆ (ಮಹಾ ರಾಷ್ಟ್ರ)-1, ತರುಣ್ ಟೋಕಸ್ (ದೆಹಲಿ)-2, ಸುಮಂತ್ ನಾಥ (ಪಶ್ಚಿಮ ಬಂಗಾಳ)-3, ಕಾಲ: 55.56 (ಹಳೆ ದಾಖಲೆ: 57.38); 4X100 ಮೀ ರಿಲೆ: ಕರ್ನಾಟಕ (ಅರ್ಜುನ್, ಗಗನ್, ಆದಿತ್ಯ ರೋಷನ್, ಅಶ್ವಿನ್ ಮೆನನ್)-1.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.