ADVERTISEMENT

ಈಜು: ಫೆಲ್ಪ್ಸ್‌ಗೆ ಆಘಾತ

​ಪ್ರಜಾವಾಣಿ ವಾರ್ತೆ
Published 29 ಜುಲೈ 2012, 19:15 IST
Last Updated 29 ಜುಲೈ 2012, 19:15 IST
ಈಜು: ಫೆಲ್ಪ್ಸ್‌ಗೆ ಆಘಾತ
ಈಜು: ಫೆಲ್ಪ್ಸ್‌ಗೆ ಆಘಾತ   

ಲಂಡನ್ (ಎಎಫ್‌ಪಿ): `ಚಿನ್ನದ ಮೀನು~ ಖ್ಯಾತಿಯ ಮೈಕಲ್ ಫೆಲ್ಪ್ಸ್ ಲಂಡನ್ ಒಲಿಂಪಿಕ್ ಕೂಟದ ತಮ್ಮ ಮೊದಲ ಈಜು ಸ್ಪರ್ಧೆಯಲ್ಲಿ ಪದಕ ಗೆಲ್ಲುವಲ್ಲಿ ವಿಫಲರಾದರು.

ಶನಿವಾರ ನಡೆದ 400 ಮೀ. ವೈಯಕ್ತಿಕ ಮೆಡ್ಲೆ ಸ್ಪರ್ಧೆಯಲ್ಲಿ ಅಮೆರಿಕದ ಫೆಲ್ಪ್ಸ್‌ಗೆ ನಾಲ್ಕನೇ ಸ್ಥಾನ ಪಡೆಯಲಷ್ಟೇ ಸಾಧ್ಯವಾಯಿತು. ಅಮೆರಿಕದವರೇ ಆದ ರ‌್ಯಾನ್ ಲಾಕ್ಟೆ ಚಿನ್ನ ಗೆದ್ದರು. ಈ ಸ್ಪರ್ಧೆಯನ್ನು     ಫೆಲ್ಪ್ಸ್ ಹಾಗೂ ಲಾಕ್ಟೆ ನಡುವಿನ ಹೋರಾಟವೆಂದು ಪರಿಗಣಿಸಲಾಗಿತ್ತು. ಆದರೆ ಫೆಲ್ಪ್ಸ್‌ಗೆ ನಿರೀಕ್ಷಿತ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ.

ಅಥೆನ್ಸ್ ಮತ್ತು ಬೀಜಿಂಗ್ ಒಲಿಂಪಿಕ್ಸ್‌ನ ಈಜುಕೊಳದಲ್ಲಿ ಫೆಲ್ಪ್ಸ್ `ಸೋಲಿಲ್ಲದ ಸರದಾರ~ ಎನಿಸಿಕೊಂಡಿದ್ದರು. ಆದರೆ ಲಂಡನ್‌ನಲ್ಲಿ ಅವರು ಆರಂಭದಲ್ಲೇ ಎಡವಿದ್ದಾರೆ. ಅಮೆರಿಕದ ಸ್ಪರ್ಧಿ ಕಳೆದ ಎರಡು ಒಲಿಂಪಿಕ್ಸ್‌ಗಳಲ್ಲಿ ಒಟ್ಟು 14 ಚಿನ್ನ ಜಯಿಸಿದ್ದರು. ಬೀಜಿಂಗ್‌ನಲ್ಲಿ ಎಂಟು ಬಂಗಾರ ಜಯಿಸಿ ಐತಿಹಾಸಿಕ ಸಾಧನೆ ಮಾಡಿದ್ದರು.

ಆರಂಭದಿಂದಲೇ ಮುನ್ನಡೆ ಕಾಪಾಡಿಕೊಂಡ ಲಾಕ್ಟೆ 4 ನಿಮಿಷ 05.18 ಸೆಕೆಂಡ್‌ಗಳಲ್ಲಿ ಮೊದಲಿಗರಾಗಿ ಗುರಿ ತಲುಪಿದರು. ಬ್ರೆಜಿಲ್‌ನ ಥಿಯಾಗೊ ಪೆರೇರಾ (4:08.86 ಸೆ.) ಬೆಳ್ಳಿ ಗೆದ್ದರೆ, ಜಪಾನ್‌ನ ಕಸುಕೆ ಹಗಿನೊ (4:08.94 ಸೆ.) ಕಂಚು ತಮ್ಮದಾಗಿಸಿಕೊಂಡರು. ಫೆಲ್ಪ್ಸ್ 4:09.28 ಸೆಕೆಂಡ್‌ಗಳಲ್ಲಿ ನಾಲ್ಕನೆಯವರಾಗಿ ಗುರಿ ತಲುಪಿದರು.

ಫೆಲ್ಪ್ಸ್ ಅವರು ಸಿಡ್ನಿ ಒಲಿಂಪಿಕ್ಸ್ ಬಳಿಕ ಫೈನಲ್ ಸ್ಪರ್ಧೆಯೊಂದರಲ್ಲಿ ಪದಕ ಗೆಲ್ಲಲು ವಿಫಲರಾದದ್ದು ಇದೇ ಮೊದಲು. ಸಿಡ್ನಿಯಲ್ಲಿ 200 ಮೀ. ಬಟರ್‌ಫ್ಲೈ ವಿಭಾಗದ ಫೈನಲ್‌ನಲ್ಲಿ ಐದನೇ ಸ್ಥಾನ ಪಡೆದಿದ್ದರು. ಅಂದು ಅವರಿಗೆ 15 ವರ್ಷ ವಯಸ್ಸಾಗಿತ್ತು. ಅಥೆನ್ಸ್‌ನಲ್ಲಿ ಆರು ಚಿನ್ನ ಹಾಗೂ ಎರಡು ಕಂಚು ಜಯಿಸಿದ್ದ ಅಮೆರಿಕದ ಈ ಸ್ಪರ್ಧಿ ಬೀಜಿಂಗ್‌ನಲ್ಲಿ ಕಣಕ್ಕಿಳಿದ ಎಲ್ಲ ಎಂಟು ವಿಭಾಗಗಳಲ್ಲಿ ಚಿನ್ನ ಗೆದ್ದಿದ್ದರು.

`ಮೊದಲ 200 ಮೀ.ವರೆಗೆ ನಾನು ಉತ್ತಮ ವೇಗ ಕಾಪಾಡಿಕೊಂಡಿದ್ದೆ. ಆದರೆ ಕೊನೆಯ 100 ಮೀ. ನಲ್ಲಿ ನಿರೀಕ್ಷಿತ ವೇಗ ಕಂಡುಕೊಳ್ಳಲು ಸಾಧ್ಯವಾಗಲಿಲ್ಲ~ ಎಂದು ಫೆಲ್ಪ್ಸ್ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.