ADVERTISEMENT

ಈಜು: ಫೆಲ್ಪ್ಸ್‌ಗೆ ಒಲಿಂಪಿಕ್ಸ್‌ನಲ್ಲಿ 20ನೇ ಪದಕ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2012, 19:30 IST
Last Updated 3 ಆಗಸ್ಟ್ 2012, 19:30 IST
ಈಜು: ಫೆಲ್ಪ್ಸ್‌ಗೆ ಒಲಿಂಪಿಕ್ಸ್‌ನಲ್ಲಿ 20ನೇ ಪದಕ
ಈಜು: ಫೆಲ್ಪ್ಸ್‌ಗೆ ಒಲಿಂಪಿಕ್ಸ್‌ನಲ್ಲಿ 20ನೇ ಪದಕ   

ಲಂಡನ್ (ಎಪಿ): ಅಮೆರಿಕದ ಮೈಕಲ್ ಫೆಲ್ಪ್ಸ್ ಲಂಡನ್ ಒಲಿಂಪಿಕ್ಸ್‌ನಲ್ಲಿ ಮೊದಲ ವೈಯಕ್ತಿಕ ಚಿನ್ನ ಜಯಿಸಿದ್ದಾರೆ. ಗುರುವಾರ ರಾತ್ರಿ ನಡೆದ ಪುರುಷರ 200 ಮೀ. ವೈಯಕ್ತಿಕ ಮೆಡ್ಲೆ ಸ್ಪರ್ಧೆಯಲ್ಲಿ `ಚಿನ್ನದ ಮೀನು~ ಖ್ಯಾತಿಯ ಫೆಲ್ಪ್ಸ್ ಅಗ್ರಸ್ಥಾನ ಪಡೆದರು.

ಆರಂಭದಿಂದಲೇ ಮುನ್ನಡೆ ಕಾಪಾಡಿಕೊಂಡ ಅಮೆರಿಕದ ಸ್ಪರ್ಧಿ ಒಂದು ನಿಮಿಷ 54.27 ಸೆಕೆಂಡ್‌ಗಳಲ್ಲಿ ಗುರಿ ತಲುಪಿದರು. ಇದು ಒಟ್ಟಾರೆಯಾಗಿ     ಫೆಲ್ಪ್ಸ್‌ಗೆ ಒಲಿದ 20ನೇ ಒಲಿಂಪಿಕ್ ಪದಕ. ಮಾತ್ರವಲ್ಲ ಅವರಿಗೆ ದೊರೆತ 16ನೇ ಚಿನ್ನದ ಪದಕ ಇದಾಗಿದೆ.

ಅಮೆರಿಕದವರೇ ಆದ ರ‌್ಯಾನ್ ಲಾಕ್ಟೆ (1:54.90) ಬೆಳ್ಳಿ ಜಯಿಸಿದರೆ, ಹಂಗರಿಯ ಲಾಜ್ಲೊ ಕೆ (1:56.22) ಕಂಚಿನ ಪದಕ ಪಡೆದರು. ಈ ಗೆಲುವಿನ ಮೂಲಕ ಫೆಲ್ಪ್ಸ್ ಅವರು ಲಾಕ್ಟೆ ವಿರುದ್ಧ ಮುಯ್ಯಿ ತೀರಿಸಿಕೊಂಡರು. ಲಾಕ್ಟೆ ಎರಡು ದಿನಗಳ ಹಿಂದೆ ನಡೆದ 400 ಮೀ. ಮೆಡ್ಲೆ ಸ್ಪರ್ಧೆಯಲ್ಲಿ ಫೆಲ್ಪ್ಸ್ ಅವರನ್ನು ಹಿಂದಿಕ್ಕಿ ಬಂಗಾರ ಜಯಿಸಿದ್ದರು.

ಫೆಲ್ಪ್ಸ್ ಈ ಗೆಲುವಿನ ಮೂಲಕ ಅಪೂರ್ವ ಸಾಧನೆಗೆ ಭಾಜನರಾದರು. ಅವರು ಅಥೆನ್ಸ್ ಮತ್ತು ಬೀಜಿಂಗ್ ಕೂಟದಲ್ಲಿ ಇದೇ ವಿಭಾಗದಲ್ಲಿ ಸ್ವರ್ಣ ಜಯಿಸಿದ್ದರು. ಒಂದೇ ವೈಯಕ್ತಿಕ ವಿಭಾಗದಲ್ಲಿ ಸತತ ಮೂರು ಒಲಿಂಪಿಕ್ ಸ್ವರ್ಣ ಗೆದ್ದ ಮೊದಲ ಈಜುಗಾರ ಎಂಬ ಗೌರವ ತಮ್ಮದಾಗಿಸಿಕೊಂಡರು.

ಲಂಡನ್ ಒಲಿಂಪಿಕ್ಸ್ ಬಳಿಕ ನಿವೃತ್ತಿಯಾಗುವೆನು ಎಂಬುದನ್ನು ಫೆಲ್ಪ್ಸ್ ಪುನರುಚ್ಚರಿಸಿದ್ದಾರೆ. `ಈ ಕೂಟದ ಬಳಿಕ ಸ್ಪರ್ಧಾತ್ಮಕ ಈಜಿನಿಂದ ದೂರವಾಗುವೆ. ಕ್ಲಬ್ ಮಟ್ಟದಲ್ಲೂ ಸ್ಪರ್ಧಿಸುವುದಿಲ್ಲ. ಖಂಡಿತವಾಗಿಯೂ ನಿವೃತ್ತಿಯಾಗುವೆ~ ಎಂದು ಫೆಲ್ಪ್ಸ್ ನುಡಿದಿದ್ದಾರೆ.

ಅಮೆರಿಕದ ಟೇಲರ್ ಕ್ಲೇರಿ ಪುರುಷರ 200 ಮೀ. ಬ್ಯಾಕ್‌ಸ್ಟ್ರೋಕ್‌ನಲ್ಲಿ ಕೂಟ ದಾಖಲೆಯೊಂದಿಗೆ ಚಿನ್ನ ಗೆದ್ದರು. ಅವರು ಒಂದು ನಿಮಿಷ 53.41 ಸೆಕೆಂಡ್‌ಗಳಲ್ಲಿ ಗುರಿ ತಲುಪಿದರು. ಜಪಾನ್‌ನ ರ‌್ಯೋಸುಕೆ ಇರೀ (1:53.78) ಬೆಳ್ಳಿ ಗೆದ್ದರೆ, `ಫೇವರಿಟ್~ ಎನಿಸಿದ್ದ ರ‌್ಯಾನ್ ಲಾಕ್ಟೆ ಕಂಚಿನ ಪದಕ (1:53.94) ತಮ್ಮದಾಗಿಸಿಕೊಂಡರು.

ಸೋನಿ ವಿಶ್ವದಾಖಲೆ:
ಅಮೆರಿಕದ ರೆಬೆಕಾ ಸೋನಿ ಮಹಿಳೆಯರ 200 ಮೀ. ಬ್ರೆಸ್ಟ್‌ಸ್ಟ್ರೋಕ್ ಸ್ಪರ್ಧೆಯಲ್ಲಿ ನೂತನ ವಿಶ್ವದಾಖಲೆ ಸ್ಥಾಪಿಸಿ ಬಂಗಾರದ ಪದಕ ಜಯಿಸಿದರು. ಹಾಲಿ ಚಾಂಪಿಯನ್ ರೆಬೆಕಾ 2 ನಿಮಿಷ 19.59 ಸೆಕೆಂಡ್‌ಗಳಲ್ಲಿ ಗುರಿ ತಲುಪಿದರು. ಜಪಾನ್‌ನ ಸತೋಮಿ ಸುಜುಕಿ (2:20.72 ಸೆ.) ಎರಡನೇ ಸ್ಥಾನ ಪಡೆದರೆ, ರಷ್ಯಾದ ಲುಲಿಯಾ ಎಫಿಮೋವಾ (2:20.92) ಕಂಚು ಗೆದ್ದರು.

ರನೋಮಿಗೆ ಚಿನ್ನ: ಹಾಲೆಂಡ್‌ನ ರನೋಮಿ ಕ್ರೊಮೊವಿಜೊಜೊ ಮಹಿಳೆಯರ 100ಮೀ. ಫ್ರೀಸ್ಟೈಲ್‌ನಲ್ಲಿ ನೂತನ ಕೂಟ ದಾಖಲೆಯೊಂದಿಗೆ ಬಂಗಾರದ ಪದಕ ಗೆದ್ದುಕೊಂಡರು. ಅವರು 53.00 ಸೆಕೆಂಡ್‌ಗಳಲ್ಲಿ ಗುರಿ ತಲುಪಿದರು. ಬೆಲಾರಸ್‌ನ ಅಲೆಕ್ಸಾಂಡ್ರಾ ಹೆರಸಿಮೆನಿಯಾ (53.38) ಹಾಗೂ ಚೀನಾದ ತಾಂಗ್ ಯಿ (53.44) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಗಿಟ್ಟಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.