ADVERTISEMENT

ಈಜು: ಮಾಳವಿಕಾಗೆ ಐದು ಚಿನ್ನ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2012, 19:39 IST
Last Updated 5 ಡಿಸೆಂಬರ್ 2012, 19:39 IST

ಬೆಂಗಳೂರು: ನೆಟ್ಟಕಲ್ಲಪ್ಪ ಈಜು ಕೇಂದ್ರದ ವಿ. ಮಾಳವಿಕಾ ಇಲ್ಲಿ ನಡೆಯುತ್ತಿರುವ 13ನೇ ರಾಜ್ಯ ಜೂನಿಯರ್ ಶಾರ್ಟ್ ಕೋರ್ಸ್ ಈಜು ಚಾಂಪಿಯನ್‌ಷಿಪ್‌ನಲ್ಲಿ ಒಟ್ಟು ಐದು ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.

ಬಸವನಗುಡಿ ಈಜು ಕೇಂದ್ರದಲ್ಲಿ (ಬಿಎಸಿ) ನಡೆಯುತ್ತಿರುವ ಈಜು ಚಾಂಪಿಯನ್‌ಷಿಪ್‌ನಲ್ಲಿ ಮಾಳವಿಕಾಗೆ ಬುಧವಾರ ಎರಡು ಸ್ವರ್ಣ ಪದಕಗಳು ಬಂದವು. ಮೊದಲ ದಿನ ಈ ಸ್ಪರ್ಧಿ 100, 200 ಹಾಗೂ 800ಮೀ. ಫ್ರೀಸ್ಟೈಲ್ ವಿಭಾಗದಲ್ಲಿ ಚಿನ್ನ ಜಯಿಸಿದ್ದರು. ಎರಡನೇ ದಿನ 50ಮೀ. ಫ್ರೀಸ್ಟೈಲ್‌ನಲ್ಲಿ (ಕಾಲ: 28.28ಸೆಕೆಂಡ್) ಬಂಗಾರದ ಪದಕಕ್ಕೆ ಕೊರಳೊಡ್ಡಿದರು. 400ಮೀ. ಫ್ರೀಸ್ಟೈಲ್ ಸ್ಪರ್ಧೆಯಲ್ಲಿ ನೂತನ ದಾಖಲೆ ಸಹ ಮಾಡಿದರು. ಮಾಳವಿಕಾ 4:38.57 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟುವ ಮೂಲಕ 2008ರಲ್ಲಿ ಪ್ರತಿಮಾ ಕೊಳ್ಳಾಲಿ (ಕಾಲ: 4:45.78ಸೆ.) ನಿರ್ಮಿಸಿದ್ದ ದಾಖಲೆಯನ್ನು ಅಳಿಸಿ ಹಾಕಿದರು.

200ಮೀ. ವೈಯಕ್ತಿಕ ಮೆಡ್ಲೆ ವಿಭಾಗದಲ್ಲಿ ಬಿಎಸಿಯ ಎಸ್.ಪಿ. ಲಿಖಿತ್ (ಕಾಲ: 5:20.75ಸೆ.) ಬಂಗಾರ ಗೆದ್ದುಕೊಂಡರು. ಬಾಲಕಿಯರ `ಗುಂಪು'-2ರ ವಿಭಾಗದಲ್ಲಿ ಶ್ರದ್ಧಾ ಸುಧೀರ್ 400ಮೀ. ವೈಯಕ್ತಿಕ ಮೆಡ್ಲೆ ಸ್ಪರ್ಧೆಯಲ್ಲಿ ಚಿನ್ನ ಗೆದ್ದರು. ಈ ಈಜುಗಾರ್ತಿ 5:46.68 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿದರು.

ವಿಶ್ವ ಈಜುಗೆ ಅರವಿಂದ್, ಪೂಜಾ: ಕರ್ನಾಟಕದ ಪೂಜಾ ಆರ್. ಆಳ್ವಾ ಮತ್ತು ಅರವಿಂದ್ ಎಂ. ಅವರು ಡಿಸೆಂಬರ್ 12ರಿಂದ 16ರ ವರೆಗೆ ಟರ್ಕಿಯ ಇಸ್ತಾಂಬುಲ್‌ನಲ್ಲಿ ನಡೆಯಲಿರುವ 11ನೇ ವಿಶ್ವ ಶಾರ್ಟ್ ಕೋರ್ಸ್ ಈಜು ಚಾಂಪಿಯನ್‌ಷಿಪ್‌ಗೆ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.