ಬೆಂಗಳೂರು: ಈ ಚಾಂಪಿಯನ್‌ಗೆ ಜೀವ ಸಾಗಿಸಲು ಸ್ವಂತ ಮನೆ ಎಂಬುದು ಇಲ್ಲ. ಮರಗೆಲಸ ಮಾಡುತ್ತಿದ್ದ ತಂದೆ ಎಸ್.ಎಂ.ವಿಠಲಾಚಾರ್ ಎರಡು ವರ್ಷಗಳ ಹಿಂದೆ ಸಾವನ್ನಪ್ಪಿದರು. ತಾಯಿ ಕೂಡ ಇಲ್ಲ. ಅಣ್ಣ ಅಕ್ಕಸಾಲಿಗ. ಇಂತಹ ಕಷ್ಟಗಳ ನಡುವೆ ಜೀವನ ಸಾಗುತ್ತಿರುವ ಎಸ್.ವಿ.ಸುನಿಲ್ ಭಾರತ ಹಾಕಿ ತಂಡದ ಪ್ರಮುಖ ಆಟಗಾರ.
2007ರಲ್ಲಿ ಏಷ್ಯಾ ಕಪ್, 2009 ಹಾಗೂ 2010ರಲ್ಲಿ ಅಜ್ಲನ್ ಷಾ ಕಪ್, ಈಗ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಭಾರತ ತಂಡ ಚಾಂಪಿಯನ್ ಆಗುವಲ್ಲಿ ಕರ್ನಾಟಕದ ಸುನಿಲ್ ಪಾತ್ರ ಮಹತ್ವದ್ದು.
`ನಮ್ಮದು ಬಡ ಕುಟುಂಬ. ಕಷ್ಟದಲ್ಲಿಯೇ ನಮ್ಮ ಜೀವನ ಸಾಗುತ್ತಿದೆ. ಮಡಿಕೇರಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದೇವೆ~ ಎಂದು ಫಾರ್ವರ್ಡ್ ಆಟಗಾರ ಸುನಿಲ್ `ಪ್ರಜಾವಾಣಿ~ ಜೊತೆ ಗುರುವಾರ ತಮ್ಮ ನೋವಿನ ಕಥೆಯನ್ನು ಹೇಳಿಕೊಂಡರು.
`ನಾನು 2007ರಿಂದ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸುತ್ತಿದ್ದೇನೆ. 70 ಪಂದ್ಯಗಳನ್ನು ಆಡಿದ್ದೇನೆ. 20 ಗೋಲು ಗಳಿಸಿದ್ದೇನೆ. ಭಾರತ ತಂಡ ಚಾಂಪಿಯನ್ ಆಗಲು ಕಾರಣವಾಗಿದ್ದೇನೆ. ಇಷ್ಟೆಲ್ಲಾ ಸಾಧನೆಗಳ ನಡುವೆಯೂ ಕಷ್ಟದ ಜೀವನ ಸಾಗಿಸಬೇಕಾಗಿದೆ~ ಎಂದು ಅವರು ನುಡಿದರು.
2009ರಲ್ಲಿ ನಡೆದ ಘಟನೆಯೊಂದನ್ನು ನೆನಪಿಸಿಕೊಳ್ಳಲು ಅವರು ಮರೆಯುವುದಿಲ್ಲ. ಆ ವರ್ಷ ಏಪ್ರಿಲ್‌ನಲ್ಲಿ ಮಲೇಷ್ಯಾದ ಇಪೋದಲ್ಲಿ ಅಜ್ಲನ್ ಷಾ ಕಪ್ ಹಾಕಿ ಚಾಂಪಿಯನ್‌ಷಿಪ್ ನಡೆಯುತಿತ್ತು. ಭಾರತ ತಂಡವನ್ನು ಪ್ರತಿನಿಧಿಸಿದ್ದ ಕೊಡಗಿನ ಸುನಿಲ್ ಅವರ ತಂದೆ ವಿಠಲಾಚಾರ್ ಶ್ವಾಸಕೋಶದ ಸಮಸ್ಯೆಯಿಂದ ಸಾವನ್ನಪ್ಪಿದರು.
ಆದರೆ ಸ್ವದೇಶಕ್ಕೆ ಹಿಂತಿರುಗದ ಸುನಿಲ್ ದೇಶಕ್ಕಾಗಿ ಆಡಿ ಭಾರತ ತಂಡ ಚಾಂಪಿಯನ್ ಆಗಲು ಕಾರಣರಾಗಿದ್ದರು. 13 ವರ್ಷಗಳ ಬಳಿಕ ಭಾರತ ಆ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿತ್ತು. ಇಡೀ ತಂಡ ಆ ಟ್ರೋಫಿಯನ್ನು ಸುನಿಲ್ ತಂದೆಗೆ ಅರ್ಪಿಸಿದ್ದು ವಿಶೇಷ.
`ಆ ಘಟನೆ ಮತ್ತೆ ಮತ್ತೆ ನೆನಪಾಗುತ್ತಿರುತ್ತದೆ. ಅವತ್ತು ದುಃಖ ಮರೆತು ಆಡಿದ್ದೆ. ಸಹ ಆಟಗಾರರಿಂದಲೂ ಉತ್ತಮ ಬೆಂಬಲ ಲಭಿಸಿತ್ತು. ನಾನು ಭಾರತ ತಂಡಕ್ಕೆ ಆಡುವುದು ತಂದೆಯ ಆಸೆಯಾಗಿತ್ತು. ಅವರ ಆಸೆಗೆ ಸ್ಪಂದಿಸಿದ್ದೇನೆ~ ಎಂದು ಭಾವುಕರಾಗುತ್ತಾರೆ ಸುನಿಲ್.
ಚೀನಾದ ಓರ್ಡೊಸ್‌ನಲ್ಲಿ ಇತ್ತೀಚೆಗೆ ನಡೆದ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ಭಾರತ ಗೆಲ್ಲಲು ಅವರು ಮಹತ್ವದ ಪಾತ್ರ ನಿಭಾಯಿಸಿದ್ದರು. `ಈ ಟೂರ್ನಿಯ ಏಳೂ ಪಂದ್ಯಗಳಲ್ಲಿ ನನಗೆ ಆಡಲು ಅವಕಾಶ ಲಭಿಸಿತು. ಒಂದು ಗೋಲು ಕೂಡ ಗಳಿಸಿದೆ~ ಎಂದರು.
`ಆದರೆ ಮಂಡಿ ನೋವಿನ ಶಸ್ತ್ರ ಚಿಕಿತ್ಸೆಯಿಂದಾಗಿ ನಾನು ಒಂದು ವರ್ಷ ತಂಡದಿಂದ ಹೊರಗುಳಿಯಬೇಕಾಯಿತು. ಆ ಸಮಯದಲ್ಲಿ ಮತ್ತಷ್ಟು ಕಷ್ಟದ ಹಾದಿ ಸವೆಸಬೇಕಾಯಿತು. ವಿಶ್ವಕಪ್‌ನಲ್ಲಿಆಡಲು ಕೂಡ ಸಾಧ್ಯವಾಗಲಿಲ್ಲ~ ಎಂದು ಸೇನಾಪಡೆಯಲ್ಲಿ ಹವಾಲ್ದಾರ್ ಆಗಿ ಕಾರ್ಯನಿರ್ವಹಿಸುತ್ತಿರುವ ಸುನಿಲ್ ಹೇಳಿದರು.
ಇಷ್ಟೆಲ್ಲಾ ಸಾಧನೆ ಮಾಡಿದ್ದರೂ ಅವರಿಗೆ ಏಕಲವ್ಯ ಪ್ರಶಸ್ತಿ ಕೂಡ ಲಭಿಸಿಲ್ಲ. `ಈ ಬಗ್ಗೆ ಕೇಳಿದರೆ ಈ ಪ್ರಶಸ್ತಿ ಅರ್ಜಿ ಹಾಕಬೇಕು ಎನ್ನುತ್ತಾರೆ ಅಧಿಕಾರಿಗಳು. ಆದರೆ ನಾನು ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಪಾಲ್ಗೊಳ್ಳಲು ವಿದೇಶಕ್ಕೆ ತೆರಳುತ್ತಿರುತ್ತೇನೆ. ಯಾವಾಗ ಅರ್ಜಿ ಹಾಕಬೇಕು ಎಂಬುದು ಗೊತ್ತಾಗುವುದಿಲ್ಲ. ಅದಕ್ಕೆ ದಿನಾಂಕವನ್ನೂ ಹೇಳುವುದಿಲ್ಲ~ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಈಗ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ಐದು ಲಕ್ಷ ರೂಪಾಯಿ ಬಹುಮಾನ ಪ್ರಕಟಿಸಿರುವುದು ಅವರಲ್ಲಿ ಖುಷಿ ಉಂಟು ಮಾಡಿದೆ. `ಕೊನೆಗೂ ರಾಜ್ಯ ಸರ್ಕಾರ ನನ್ನ ಸಾಧನೆಯನ್ನು ಗುರುತಿಸಿದೆ. ಇದು ಮತ್ತಷ್ಟು ಸಾಧಿಸಬೇಕು ಎಂಬುದಕ್ಕೆ ಸ್ಫೂರ್ತಿಯಾಗಿದೆ~ ಎಂದು ಸುನಿಲ್ ನುಡಿದರು.
ಸುನಿಲ್ ಸಾಧನೆ
* 2007ರಲ್ಲಿ ಏಷ್ಯಾ ಕಪ್ ಚಾಂಪಿಯನ್
* 2008ರಲ್ಲಿ ಅಜ್ಲನ್ ಷಾ ಕಪ್ ಟೂರ್ನಿಯಲ್ಲಿ ಬೆಳ್ಳಿ
* 2009ರ ಅಜ್ಲನ್ ಷಾ ಕಪ್ ಪ್ರಶಸ್ತಿ
* 2010ರ ಅಜ್ಲನ್ ಷಾ ಕಪ್ ಟೂರ್ನಿಯಲ್ಲಿ ಜಂಟಿ ಚಾಂಪಿಯನ್
* 2011ರಲ್ಲಿ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಪ್ರಶಸ್ತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.