ಮೈಸೂರು: ತವರಿನಲ್ಲಿಯೇ ಚಾಂಪಿ ಯನ್‌ಷಿಪ್ ನಡೆಯುತ್ತಿರು ವುದರಿಂದ ಅಪಾರ ನಿರೀಕ್ಷೆ ಇಡಲಾಗಿತ್ತು. ಹಲವು ದಿನಗಳ ಕನಸು ಈ ಬಾರಿಯಾದರೂ ನನಸಾಗಬಹುದು ಎಂದು ಊಹಿಸ ಲಾಗಿತ್ತು. ಆದರೆ, ಮತ್ತೆ ಎದುರಾಗಿದ್ದು ಅದೇ ನಿರಾಸೆ. ಹೀಗಾಗಿ ಗುರುವಾರ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಸೇರಿದ್ದ ಅಭಿಮಾನಿಗಳಲ್ಲಿ ಏನೋ ಬೇಸರ.
ಪುರುಷರ ವಿಭಾಗದ ಕ್ವಾರ್ಟರ್ ಫೈನಲ್‌ನಲ್ಲಿ ಸೋಲು ಕಂಡ ಆತಿಥೇಯ ಕರ್ನಾಟಕ ತಂಡದವರು 66ನೇ ರಾಷ್ಟ್ರೀಯ ಸೀನಿಯರ್ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನಿಂದ ಹೊರಬಿದ್ದರು.
ಆರಂಭದಿಂದಲೇ ಭಾರಿ ಕುತೂಹಲಕ್ಕೆ ಕಾರಣವಾಗಿದ್ದ ಪಂದ್ಯದಲ್ಲಿ 89–63 ಪಾಯಿಂಟ್‌ಗಳಿಂದ ಗೆದ್ದ ಸರ್ವೀಸಸ್ ತಂಡದವರು ಸೆಮಿಫೈನಲ್‌ಗೆ ಲಗ್ಗೆ ಇಟ್ಟರು.
ರಾಜ್ಯ ತಂಡದ ಅನಿಲ್ ಕುಮಾರ್ (20 ಪಾಯಿಂಟ್) ಅವರು ಆಕ್ರಮಣ ಕಾರಿ ಆಟದ ಮೂಲಕ ಚೆಂಡನ್ನು ಬ್ಯಾಸ್ಕೆಟ್ ಮಾಡುತ್ತಾ ಭರವಸೆ ಮೂಡಿಸಿ ದ್ದರು. ಆದರೆ, ಉಳಿದ ಆಟಗಾರರಿಂದ ಹೇಳಿಕೊಳ್ಳುವಂಥ ಪ್ರದರ್ಶನ ಮೂಡಿ ಬರಲಿಲ್ಲ. ಪ್ರೀ ಥ್ರೋಗಳಲ್ಲಿ ಎಡವಟ್ಟು ಹಾಗೂ ತಪ್ಪಿದ ಗುರಿ ತಂಡವನ್ನು ಸೋಲಿನ ಪ್ರಪಾತಕ್ಕೆ ತಳ್ಳಿದವು. ಗಾಯದ ಸಮಸ್ಯೆಗೆ ಒಳಗಾಗಿದ್ದ ನಾಯಕ ಎ. ಅರವಿಂದ್ ಅವರಿಂದ ನಿರೀಕ್ಷಿತ ಮಟ್ಟದ ಆಟ ಮೂಡಿಬರಲಿಲ್ಲ.
ಮೊದಲ ಕ್ವಾರ್ಟರ್‌ನಲ್ಲಿ ಮಾತ್ರ 19–15 ಪಾಯಿಂಟ್‌ಗಳಿಂದ ಮುಂದಿದ್ದರು. ನಂತರ ಮೂರೂ ಕ್ವಾರ್ಟರ್‌ಗಳಲ್ಲಿ ಹಿನ್ನಡೆ ಅನುಭವಿಸಿದರು. ಸರ್ವೀಸಸ್ ತಂಡದ ನರೇಂದ್ರ ಗ್ರೆವಾಲ್ (24 ಪಾಯಿಂಟ್), ಜೋಗಿಂದರ್ ಸಿಂಗ್ (17) ಉತ್ತಮ ಗುರಿ ಎಸೆತದ ಆಟವಾಡಿದರು. ಈ ತಂಡದವರು ವಿರಾಮದ ವೇಳೆಗೆ 35–31 ಪಾಯಿಂಟ್‌ಗಳಿಂದ ಮುಂದಿದ್ದರು.
ಕರ್ನಾಟಕ ತಂಡದವರು 1956ರಲ್ಲಿ ತಿರುವನಂತಪುರದಲ್ಲಿ ನಡೆದ ರಾಷ್ಟ್ರೀಯ ಸೀನಿಯರ್ ಚಾಂಪಿಯನ್ ಷಿಪ್‌ನಲ್ಲಿ ಪ್ರಶಸ್ತಿ ಜಯಿಸಿದ್ದರು. ಆ ಬಳಿಕ ಬರಿ ನಿರಾಸೆ. ಆತಿಥೇಯ ಮಹಿಳಾ ತಂಡದವರು ಬುಧವಾರವೇ ಚಾಂಪಿ ಯನ್‌ಷಿಪ್‌ನಿಂದ ಹೊರಬಿದ್ದಿದ್ದರು.
ಸೆಮಿಗೆ ಉತ್ತರಾಖಂಡ:
ಹಾಲಿ ಚಾಂಪಿಯನ್ ಉತ್ತರಾಖಂಡ ತಂಡದವರ ಗೆಲುವಿನ ನಾಗಾಲೋಟ ಮುಂದುವರಿದಿದೆ. ಎಂಟರ ಘಟ್ಟದ ಪಂದ್ಯದಲ್ಲಿ 84–64 ಪಾಯಿಂಟ್‌ಗಳಿಂದ ರೈಲ್ವೆ ತಂಡವನ್ನು ಸೋಲಿಸಿ ಸೆಮಿಫೈನಲ್ ಪ್ರವೇಶಿಸಿದರು.
ರಾಷ್ಟ್ರೀಯ ತಂಡದ ನಾಯಕರೂ ಆಗಿರುವ ವಿಶೇಷ್ ಭೃಗುವಂಶಿ (26 ಪಾಯಿಂಟ್) ಅವರ ಚಾಣಾಕ್ಷ ಆಟ ಮತ್ತೆ ಉತ್ತರಾಖಂಡದ ನೆರವಿಗೆ ಬಂತು. ಎತ್ತರದ ನಿಲುವಿನ ಈ ಆಟಗಾರ ಎದುರಾಳಿ ಆಟಗಾರರನ್ನು ತಪ್ಪಿಸಿ ಚೆಂಡನ್ನು ಬ್ಯಾಸ್ಕೆಟ್ ಮಾಡುತ್ತಿದ್ದ ರೀತಿಗೆ ಕ್ರೀಡಾಪ್ರೇಮಿಗಳಿಂದ ಜೋರು ಚಪ್ಪಾಳೆ ಲಭಿಸುತಿತ್ತು.
ಚಾಂಪಿಯನ್ನರಿಗೆ ಆಘಾತ:
ಮಹಿಳೆಯರ ವಿಭಾಗದ ಎರಡು ಬಾರಿಯ ಚಾಂಪಿಯನ್ ಛತ್ತೀಸ್‌ಗಡ ತಂಡ ಕೂಡ ಆಘಾತ ಅನುವಿಸಿತು. ಕ್ವಾರ್ಟರ್ ಫೈನಲ್‌ನಲ್ಲಿ 76–84 ಪಾಯಿಂಟ್‌ಗಳಿಂದ ದೆಹಲಿ ಎದುರು ಸೋಲು ಕಂಡು ಚಾಂಪಿಯನ್‌ಷಿಪ್ ನಿಂದ ಹೊರಬಿತ್ತು.
ದೆಹಲಿ ತಂಡದ ಸಹೋದರಿ ಯರಾದ ಪ್ರತಿಮಾ ಸಿಂಗ್ (36 ಪಾಯಿಂಟ್) ಹಾಗೂ ಪ್ರಶಾಂತಿ ಸಿಂಗ್ (24 ಪಾಯಿಂಟ್) ಗೆಲುವಿನ ರೂವಾರಿ ಎನಿಸಿದರು. ಛತ್ತೀಸ್‌ಗಡ ತಂಡದ ಪೂನಮ್ ಚತುರ್ವೇದಿ ಉತ್ತಮ ಗುರಿ ಎಸೆತದ ಮೂಲಕ 44 ಪಾಯಿಂಟ್ ಗಳಿಸಿಕೊಟ್ಟರು.ತೆಲಂಗಾಣ ತಂಡದವರು 70–52 ಪಾಯಿಂಟ್‌ಗಳಿಂದ ತಮಿಳುನಾಡು ತಂಡ ಮಣಿಸಿ ನಾಲ್ಕರ ಘಟ್ಟ ತಲುಪಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.