ADVERTISEMENT

ಉಳಿದ ಪಂದ್ಯಗಳು ಕೋಟ್ಲಾಕ್ಕೆ ಸ್ಥಳಾಂತರ?

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2013, 19:30 IST
Last Updated 15 ಡಿಸೆಂಬರ್ 2013, 19:30 IST

ನವದೆಹಲಿ (ಪಿಟಿಐ): ದೆಹಲಿ ಮತ್ತು ವಿದರ್ಭ ತಂಡಗಳ ಪಂದ್ಯಕ್ಕೆ ರೋಷನರ ಕ್ರೀಡಾಂಗಣದ ಪಿಚ್‌ ಅನ್ನು ಸಮರ್ಪಕವಾಗಿ ಸಜ್ಜುಗೊಳಿಸದ ಕಾರಣ ಈ ಸಲದ ರಣಜಿ ಋತುವಿನ ಉಳಿದ ಪಂದ್ಯಗಳನ್ನು ಫಿರೋಜ್‌ ಷಾ ಕೋಟ್ಲಾ ಕ್ರೀಡಾಂಗಣಕ್ಕೆ ಸ್ಥಳಾಂತರಿಸುವ ಸಾಧ್ಯತೆಯಿದೆ.

ದೆಹಲಿ ತಂಡ ತವರು ನೆಲದಲ್ಲಿ ಇನ್ನು ಎರಡು ಪಂದ್ಯಗಳನ್ನು ಆಡಬೇಕಿದೆ. ಆ ಪಂದ್ಯಗಳು ಪಂಜಾಬ್‌ (ಡಿಸೆಂಬರ್‌ 22ರಿಂದ 25) ಮತ್ತು ಕರ್ನಾಟಕ (ಡಿ. 30ರಿಂದ) ಎದುರು ನಡೆಯಲಿವೆ.

ಈಗ ನಡೆಯುತ್ತಿರುವ ಪಂದ್ಯಕ್ಕೆ ಪಿಚ್‌ ಸರಿಯಾಗಿ ಸಜ್ಜುಗೊಳಿಸಿಲ್ಲ ಎಂದು ವಿದರ್ಭ ತಂಡದ ನಾಯಕ ಶಲಭ್‌ ಶ್ರೀವಾತ್ಸವ್‌ ಟೀಕಿಸಿದ್ದಾರೆ. ಈ ಬಗ್ಗೆ ವಿದರ್ಭ ಕ್ರಿಕೆಟ್‌ ಸಂಸ್ಥೆ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಗೆ ದೂರು ನೀಡಲು ಮುಂದಾಗಿದೆ. ಆದ್ದರಿಂದ ದೆಹಲಿ ಜಿಲ್ಲಾ ಕ್ರಿಕೆಟ್‌ ಸಂಸ್ಥೆ (ಡಿಡಿಸಿಎ) ಉಳಿದ ಪಂದ್ಯಗಳನ್ನು ಕೋಟ್ಲಾ ಕ್ರೀಡಾಂಗಣದಲ್ಲಿ ನಡೆಸಲು ಚಿಂತಿಸುತ್ತಿದೆ.

ರೋಷನರ ಅಂಗಳದ ಪಿಚ್‌ ಸಾಕಷ್ಟು ಪುಟಿದೇಳುತ್ತಿದೆ. ಇದರಿಂದ ವಿದರ್ಭ ಮೊದಲ ದಿನವೇ ಕೇವಲ 88 ರನ್‌ ಆಲ್‌ಔಟ್‌ ಆಗಿತ್ತು. ಜೊತೆಗೆ ಪಿಚ್‌ ವಿವಾದದ ಕಾರಣದಿಂದ ಶನಿವಾರ 28 ನಿಮಿಷ ಆಟ ಸ್ಥಗಿತಗೊಂಡಿತ್ತು. ಆದ್ದರಿಂದ ಬಿಸಿಸಿಐ ಮುಖ್ಯ ಕ್ಯೂರೇಟರ್‌ ದಲಜೀತ್‌ ಸಿಂಗ್‌ ಭಾನುವಾರ ಪಿಚ್‌ ಪರಿಶೀಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.