ADVERTISEMENT

ಉಸೇನ್ ಬೋಲ್ಟ್‌ಗೆ ಬಂಗಾರ

​ಪ್ರಜಾವಾಣಿ ವಾರ್ತೆ
Published 7 ಜುಲೈ 2013, 19:43 IST
Last Updated 7 ಜುಲೈ 2013, 19:43 IST

ಪ್ಯಾರಿಸ್ (ಎಎಫ್‌ಪಿ): ಒಲಿಂಪಿಕ್ ಚಾಂಪಿಯನ್ ಉಸೇನ್ ಬೋಲ್ಟ್ ಪ್ಯಾರಿಸ್‌ನಲ್ಲಿ ನಡೆದ ಐಎಎಎಫ್ ಡೈಮಂಡ್ ಲೀಗ್ ಅಥ್ಲೆಟಿಕ್ಸ್‌ನ 200 ಮೀ. ಓಟದಲ್ಲಿ ಚಿನ್ನ ಗೆದ್ದರು. ಈ ಮೂಲಕ ಅಮೆರಿಕದ ಟೈಸನ್ ಗೇ ಅವರಿಗೆ ಎಚ್ಚರಿಕೆಯ ಸಂದೇಶ ರವಾನಿಸಿದರು.

ಶನಿವಾರ ನಡೆದ ಸ್ಪರ್ಧೆಯಲ್ಲಿ ಜಮೈಕದ ಬೋಲ್ಟ್ 19.73 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿದರು. ಪ್ರಸಕ್ತ ಋತುವಿನಲ್ಲಿ ದಾಖಲಾದ ಅತಿವೇಗದ ಸಮಯ ಇದಾಗಿದೆ. ಟೈಸನ್ ಗೇ ಕೆಲ ದಿನಗಳ ಹಿಂದೆ ನಡೆದ ಕೂಟದಲ್ಲಿ 19.74 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಋತುವಿನ ಅತಿವೇಗದ ಸಮಯ ಕಂಡುಕೊಂಡಿದ್ದರು. ಅದನ್ನು ಬೋಲ್ಟ್ ಮುರಿದರು.|

ಬೋಲ್ಟ್ ಮತ್ತು ಟೈಸನ್ ಗೇ ಮುಂಬರುವ ವಿಶ್ವ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ಗೆ ಸಜ್ಜಾಗುತ್ತಿದ್ದಾರೆ. ಆದ್ದರಿಂದ ಇವರಿಬ್ಬರು ಪಾಲ್ಗೊಳ್ಳುತ್ತಿರುವ ಪ್ರತಿ ಕೂಟಗಳೂ ಎಲ್ಲರ ಗಮನ ಸೆಳೆಯುತ್ತಿದೆ. ವಿಶ್ವ ಅಥ್ಲೆಟಿಕ್ ಚಾಂಪಿಯನ್‌ಷಿಪ್ ಮಾಸ್ಕೊದಲ್ಲಿ ಆಗಸ್ಟ್ 10 ರಿಂದ 18ರ ವರೆಗೆ ನಡೆಯಲಿದೆ.

`ಎಲ್ಲರೂ ವಿಶ್ವ    ಚಾಂಪಿಯನ್‌ಷಿಪ್‌ಗೆ ಸಜ್ಜಾಗುತ್ತಿದ್ದಾರೆ. ಅಲ್ಲಿ ತುರುಸಿನ ಪೈಪೋಟಿಯನ್ನು ನಿರೀಕ್ಷಿಸಬಹುದು. ನಾನು ಕೂಡಾ ಆ ಪ್ರಮುಖ ಕೂಟಕ್ಕೆ ಸಿದ್ಧತೆ ನಡೆಸುತ್ತಿದ್ದೇನೆ' ಎಂದು ಬೋಲ್ಟ್ ಪ್ರತಿಕ್ರಿಯಿಸಿದ್ದಾರೆ.

ಗ್ರೆನಾಡದ ಕಿರನಿ ಜೇಮ್ಸ 400 ಮೀ. ಓಟದಲ್ಲಿ ಬಂಗಾರ ಜಯಿಸಿದರು. ಅವರು 43.96 ಸೆಕೆಂಡ್‌ಗಳಲ್ಲಿ ಗುರಿ ತಲುಪಿದರು. ಇಥಿಯೋಪಿಯದ ತಿರುನೇಶ್ ದಿಬಾಬಾ ಮಹಿಳೆಯರ 5000 ಮೀ. ಓಟದಲ್ಲಿ ಕೂಟ ದಾಖಲೆಯೊಂದಿಗೆ ಚಿನ್ನ ಗೆದ್ದರು. ಅವರು 14:23.68 ಸೆಕೆಂಡ್‌ಗಳಲ್ಲಿ ಗುರಿ ತಲುಪಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.