ADVERTISEMENT

ಎಂಟರ ಘಟ್ಟಕ್ಕೆ ನಡಾಲ್

ಫ್ರೆಂಚ್ ಓಪನ್ ಟೆನಿಸ್: ಅಜರೆಂಕಾ, ಕಿರಿಲೆಂಕೊ ಜಯಭೇರಿ

​ಪ್ರಜಾವಾಣಿ ವಾರ್ತೆ
Published 3 ಜೂನ್ 2013, 19:59 IST
Last Updated 3 ಜೂನ್ 2013, 19:59 IST
ಸರ್ಬಿಯಾದ ನೊವಾಕ್ ಜೊಕೊವಿಚ್ ಆಟದ ವೈಖರಿ
ಸರ್ಬಿಯಾದ ನೊವಾಕ್ ಜೊಕೊವಿಚ್ ಆಟದ ವೈಖರಿ   

ಪ್ಯಾರಿಸ್ (ರಾಯಿಟರ್ಸ್‌): ವಿಶ್ವದ ಅಗ್ರ ರ‌್ಯಾಂಕಿಂಗ್‌ನ ಆಟಗಾರ ಸರ್ಬಿಯದ ನೊವಾಕ್ ಜೊಕೊವಿಚ್ ಹಾಗೂ ಸ್ಪೇನ್‌ನ ರಫೆಲ್ ನಡಾಲ್ ಫ್ರೆಂಚ್ ಓಪನ್ ಗ್ರ್ಯಾನ್ ಸ್ಲಾಮ್ ಟೆನಿಸ್ ಟೂರ್ನಿಯ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.

ರೋಲಂಡ್ ಗ್ಯಾರೋಸ್‌ನ ಫಿಲಿಪ್ ಚಾಟ್ರಿಯರ್ ಕೋರ್ಟ್‌ನಲ್ಲಿ ಸೋಮವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ನಾಲ್ಕನೇ ಸುತ್ತಿನ ಪಂದ್ಯದಲ್ಲಿ ಜೊಕೊವಿಚ್ 4-6, 6-3, 6-4, 6-4 ರಲ್ಲಿ ಜರ್ಮನಿಯ ಫಿಲಿಪ್ ಕೊಲ್‌ಶ್ರೈಬರ್ ವಿರುದ್ಧ ಜಯ ಸಾಧಿಸಿದರು.

ಪಂದ್ಯದಲ್ಲಿ ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾದ ಜೊಕೊವಿಚ್ ಮೊದಲ ಸೆಟ್‌ನಲ್ಲಿ ಸೋಲು ಅನುಭವಿಸಿದರು. ಆ ಬಳಿಕ ತಮ್ಮ ನೈಜ ಆಟ ನೀಡಲು ಯಶಸ್ವಿಯಾದರು. ವೇಗದ ಸರ್ವ್ ಮತ್ತು ಆಕರ್ಷಕ ರಿಟರ್ನ್‌ಗಳ ಮೂಲಕ ಎದುರಾಳಿಯ ಮೇಲೆ ಒತ್ತಡ ಹೇರಿದರಲ್ಲದೆ. ಎರಡು ಗಂಟೆ 42 ನಿಮಿಷಗಳ ಹೋರಾಟದ ಬಳಿಕ ಜಯ ಸಾಧಿಸಿದರು.

ಮೂರನೇ ಶ್ರೇಯಾಂಕದ ಆಟಗಾರ ನಡಾಲ್ ಸುಲಭ ಗೆಲುವು ಪಡೆದರು. ಇಲ್ಲಿ ಎಂಟನೇ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿರುವ ಸ್ಪೇನ್‌ನ ಆಟಗಾರ  6-4, 6-1, 6-3 ರಲ್ಲಿ ಜಪಾನ್‌ನ ಕಿ ನಿಶಿಕೊರಿ ಅವರನ್ನು ಮಣಿಸಿದರು. ದಿನದ ಮತ್ತೊಂದು ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಜರ್ಮನಿಯ ಟಾಮಿ ಹಾಸ್ 6-1, 6-1, 6-3 ರಲ್ಲಿ ರಷ್ಯಾದ ಮಿಖಾಯಿಲ್ ಯೂಜ್ನಿ ವಿರುದ್ಧ ಗೆದ್ದರು.

ಸ್ವಿಟ್ಜರ್‌ಲೆಂಡ್‌ನ ರೋಜರ್ ಫೆಡರರ್ ಈ ಮೊದಲೇ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದರು. ಭಾನುವಾರ ರಾತ್ರಿ ನಡೆದ ಪಂದ್ಯದಲ್ಲಿ ಅವರು 6-1, 4-6, 2-6, 6-2, 6-3 ರಲ್ಲಿ ಫ್ರಾನ್ಸ್‌ನ ಜೈಲ್ಸ್ ಸಿಮೊನ್ ಎದುರು ಪ್ರಯಾಸದ ಜಯ ಸಾಧಿಸಿದ್ದರು.

ಕ್ವಾರ್ಟರ್ ಫೈನಲ್‌ಗೆ ಅಜರೆಂಕಾ: ಮೂರನೇ ಶ್ರೇಯಾಂಕದ ಆಟಗಾರ್ತಿ ಬೆಲಾರಸ್‌ನ ವಿಕ್ಟೋರಿಯಾ ಅಜರೆಂಕಾ ಇದೇ ಟೂರ್ನಿಯ ಮಹಿಳೆಯರ ಸಿಂಗಲ್ಸ್ ವಿಭಾಗದ ಎಂಟರಘಟ್ಟ ಪ್ರವೇಶಿಸಿದರು.

ಸೋಮವಾರ ನಡೆದ ನಾಲ್ಕನೇ ಸುತ್ತಿನ ಪಂದ್ಯದಲ್ಲಿ ಅಜರೆಂಕಾ 6-3, 6-0 ರಲ್ಲಿ ಇಟಲಿಯ ಫ್ರಾನ್ಸಿಸ್ಕಾ ಶಿಯವೋನ್ ವಿರುದ್ಧ ಗೆದ್ದರು. ಅವರು ಕ್ವಾರ್ಟರ್ ಫೈನಲ್‌ನಲ್ಲಿ ರಷ್ಯಾದ ಮರಿಯಾ ಕಿರಿಲೆಂಕೊ ಸವಾಲನ್ನು ಎದುರಿಸುವರು. ದಿನದ ಮತ್ತೊಂದು ಪಂದ್ಯದಲ್ಲಿ ಕಿರಿಲೆಂಕೊ 7-5, 6-4 ರಲ್ಲಿ ಅಮೆರಿಕದ ಬೆಥನಿ ಮಟೆಕ್ ಸ್ಯಾಂಡ್ಸ್ ವಿರುದ್ಧ ಗೆದ್ದರು.

ಇಟಲಿಯ ಸಾರಾ ಎರಾನಿ ಮತ್ತು ಪೋಲೆಂಡ್‌ನ ಅಗ್ನೀಸ್ಕಾ ರಡ್ವಾನ್‌ಸ್ಕಾ ಅವರೂ ಎಂಟರಘಟ್ಟಕ್ಕೆ ಅರ್ಹತೆ ಪಡೆದಿದ್ದಾರೆ. ಭಾನುವಾರ ನಡೆದ ಪಂದ್ಯಗಳಲ್ಲಿ ಎರಾನಿ 5-7, 6-4, 6-3 ರಲ್ಲಿ ಸ್ಪೇನ್‌ನ ಕಾರ್ಲಾ ಸೊರೇಜ್ ನವಾರೊ ವಿರುದ್ಧವೂ, ಅಗ್ನೀಸ್ಕಾ 6-2, 6-4 ರಲ್ಲಿ ಸರ್ಬಿಯದ ಅನಾ ಇವನೋವಿಚ್ ಮೇಲೂ ಗೆಲುವು ಪಡೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.