ADVERTISEMENT

ಎಂಟರ ಘಟ್ಟಕ್ಕೆ ನಾವು ಸಿದ್ಧ: ಸನತ್ ಕುಮಾರ್

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2010, 10:55 IST
Last Updated 19 ಡಿಸೆಂಬರ್ 2010, 10:55 IST

ಕಾನ್ಪುರ: “ನಾವೀಗ ನಾಕೌಟ್ ಹಂತಕ್ಕೆ ಸಿದ್ಧರಾಗಿದ್ದೇವೆ. ಇನ್ನು ಮುಂದೆ ನಿಜವಾದ ಪರೀಕ್ಷೆಗಳು ಎದುರಾಗಲಿವೆ. ನಮ್ಮ ತಂಡದ ಆಟಗಾರರ ಪ್ರದರ್ಶನ ಸಂತಸ ತಂದಿದೆ”- ಶನಿವಾರ ಸಂಜೆ ಗ್ರೀನ್ ಪಾರ್ಕ್‌ನಲ್ಲಿ ಉತ್ತರ ಪ್ರದೇಶ ವಿರುದ್ಧ ಪಂದ್ಯ ಡ್ರಾ ಆದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಕರ್ನಾಟಕದ ಕೋಚ್ ಸನತ್‌ಕುಮಾರ ಮುಖದ ಮೇಲೆ ಸಮಾಧಾನದ ಛಾಯೆಯಿತ್ತು. ಅದರೆ, ಧ್ವನಿಯಲ್ಲಿ ಮುಂದಿನ ಗುರಿಯನ್ನು ಸಮರ್ಥವಾಗಿ ನಿಭಾಯಿಸುವ ಆತ್ಮವಿಶ್ವಾಸವೂ ಇತ್ತು.

“ಪ್ರಸಕ್ತ ಋತುವಿನ ಎಲ್ಲ ಪಂದ್ಯಗಳಲ್ಲಿ ಆರಂಭಿಕ ಬ್ಯಾಟ್ಸ್‌ಮನ್‌ಗಳು ಹೆಚ್ಚು ರನ್ ಗಳಿಸಲು ಸಾಧ್ಯವಾಗಿರಲಿಲ್ಲ. ಆದರೆ, ಈ ಪಂದ್ಯದಲ್ಲಿ ಬ್ಯಾಟ್ಸ್‌ಮನ್‌ಗಳು ತಮ್ಮ ಫಾರ್ಮ್ ಕಂಡುಕೊಂಡಿದ್ದಾರೆ. ವಿಶೇಷವಾಗಿ ಮಧ್ಯಮ ಕ್ರಮಾಂಕದಲ್ಲಿ ಆಡುವ ಅಮಿತ್ ವರ್ಮಾ, ಮನೀಶ್ ಪಾಂಡೆ, ಸ್ಟುವರ್ಟ್ ಬಿನ್ನಿ, ಸಿ.ಎಂ. ಗೌತಮ್ ಉತ್ತಮ ಫಾರ್ಮ್‌ನಲ್ಲಿದ್ದಾರೆ. ನಮಗೆ ಕ್ಲಿಷ್ಟಕರ ಪಿಚ್‌ಗಳಲ್ಲಿಯೇ ಬಹುತೇಕ ಎಲ್ಲರೂ ಅರ್ಧಶತಕಗಳನ್ನು ಗಳಿಸಿದ್ದಾರೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

“ಮುಂದಿನ ಹಂತದಲ್ಲಿ ನಾವು ಎದುರಿಸುವ ಎಲ್ಲ ತಂಡಗಳೂ ಸವಾಲು ನೀಡುವಂತದ್ದೇ. ಪ್ರಮುಖ ಮಧ್ಯಮ ವೇಗಿ ಅಭಿಮನ್ಯು ಮಿಥುನ್ ಬೆನ್ನುನೋವಿನಿಂದ ಚೇತರಿಸಿಕೊಂಡಿದ್ದಾರೆ. ಮುಂದಿನ ಪಂದ್ಯದಲ್ಲಿ ಆಡುವುದು ಬಹುತೇಕ ಖಚಿತ. ಎಲ್ಲರೂ ಉತ್ತಮ ಫಾರ್ಮ್‌ನಲ್ಲಿದ್ದು, ಎಲ್ಲರ ಮನದಲ್ಲಿಯೂ ಟ್ರೋಫಿ ಗೆಲ್ಲುವ ಹುಮ್ಮಸ್ಸಿದೆ” ಎಂದು ಹೇಳಿದರು. ಕಳೆದ ರಣಜಿ ಋತುವಿನ ರನ್ನರ್ಸ್ ಅಪ್ ಆಗಿರುವ ಕರ್ನಾಟಕ ಈ ಋತುವಿನಲ್ಲಿ ಬಿ ಗುಂಪಿನಲ್ಲಿ 23 ಪಾಯಿಂಟ್‌ಗಳೊಂದಿಗೆ ಅಗ್ರಸ್ಥಾನಕ್ಕೇರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.