ADVERTISEMENT

ಎಚ್‌ಎಎಲ್‌ಗೆ ಸತತ ನಾಲ್ಕನೇ ಜಯ

ಫುಟ್‌ಬಾಲ್: ಎಸ್‌ಎಐಗೆ ಸುಲಭ ಗೆಲುವು

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2012, 19:59 IST
Last Updated 27 ಡಿಸೆಂಬರ್ 2012, 19:59 IST

ಬೆಂಗಳೂರು: ಎಚ್‌ಎಎಲ್ ತಂಡದವರು ಇಲ್ಲಿ ನಡೆಯುತ್ತಿರುವ ಬಿಡಿಎಫ್‌ಎ ಆಶ್ರಯದ ರಾಜ್ಯ ಸೂಪರ್ ಡಿವಿಷನ್ ಫುಟ್‌ಬಾಲ್ ಲೀಗ್ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ 3-1 ಗೋಲುಗಳಿಂದ ಎಡಿಇ ವಿರುದ್ಧ ಜಯ ಪಡೆದರು.

ಎಚ್‌ಎಎಲ್‌ಗೆ ದೊರೆತ ಸತತ ನಾಲ್ಕನೇ ಗೆಲುವು ಇದಾಗಿದೆ. ಇದೀಗ ತಂಡ ಐದು ಪಂದ್ಯಗಳಿಂದ ಒಟ್ಟು 12 ಪಾಯಿಂಟ್‌ಗಳ ಮೂಲಕ ಅಗ್ರಸ್ಥಾನದಲ್ಲಿದೆ. ಇಷ್ಟೇ ಪಂದ್ಯಗಳನ್ನು ಆಡಿರುವ ಎಡಿಇ 7 ಪಾಯಿಂಟ್  ಹೊಂದಿದೆ.

ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಉತ್ತಮ ಸಂಖ್ಯೆಯಲ್ಲಿ ನೆರೆದಿದ್ದ ಪ್ರೇಕ್ಷಕರ ಸಮ್ಮುಖದಲ್ಲಿ ನಡೆದ ಪಂದ್ಯದ ಮೊದಲ ಅವಧಿಯಲ್ಲಿ ತುರುಸಿನ ಪೈಪೋಟಿ ಕಂಡುಬಂತು. ಆದರೆ ಎರಡನೇ ಅವಧಿಯಲ್ಲಿ ಎಚ್‌ಎಎಲ್ ಪ್ರಭುತ್ವ ಸಾಧಿಸಿತು. ಮೊದಲಾರ್ಧದಲ್ಲಿ ಯಾವುದೇ ಗೋಲು ದಾಖಲಾಗಲಿಲ್ಲ.

ಎರಡನೇ ಅವಧಿಯ ಆರಂಭದಲ್ಲೇ ಎಚ್‌ಎಎಲ್ ಮುನ್ನಡೆ ಪಡೆಯಿತು. ರಮೇಶ್ ಅವರ `ಥ್ರೋ ಇನ್'ನಿಂದ ಚೆಂಡನ್ನು ಪಡೆದ ಎಮ್ಯಾನುಯೆಲ್ ಎದುರಾಳಿ ಗೋಲ್‌ಕೀಪರ್ ಮಾರ್ಕ್ ಮಸ್ಕರೇನಸ್ ಅವರನ್ನು ತಪ್ಪಿಸಿ ಗುರಿ ಸೇರಿಸುವಲ್ಲಿ ಯಶಸ್ವಿಯಾದರು.

ಇದಾದ 3 ನಿಮಿಷಗಳ ಬಳಿಕ ಎಡಿಇ ತಂಡದ ಗೋಲಿ ಮಸ್ಕರೇನಸ್ `ರೆಡ್ ಕಾರ್ಡ್' ಪಡೆದು ಹೊರನಡೆದರು. ಆ ಬಳಿಕ 10 ಮಂದಿಯೊಂದಿಗೆ ಆಡಿದ ತಂಡ ಎಚ್‌ಎಎಲ್ ಆಟಗಾರರನ್ನು ತಡೆಯಲು ಬಹಳ ಪ್ರಯಾಸಪಟ್ಟಿತು.

64ನೇ ನಿಮಿಷದಲ್ಲಿ ಎಚ್‌ಎಎಲ್ ಮುನ್ನಡೆಯನ್ನು 2-0ಗೆ ಹೆಚ್ಚಿಸಿಕೊಂಡಿತು. ಪ್ರಕಾಶ್ ನೀಡಿದ ಚುರುಕಿನ ಪಾಸ್‌ನಿಂದ ಚೆಂಡನ್ನು ಪಡೆದ ಎಮ್ಯಾನುಯೆಲ್ ಗುರಿಯತ್ತ ಬಲವಾಗಿ ಒದ್ದರು. ಎದುರಾಳಿ ಗೋಲಿ ಚೆಂಡನ್ನು ತಡೆದರೂ, ಹಿಡಿತಕ್ಕೆ ಪಡೆಯುವಲ್ಲಿ ವಿಫಲರಾದರು. ರಿಬೌಂಡ್ ಆಗಿ ಬಂದ ಚೆಂಡನ್ನು ವಿನೋದ್ ಕುಮಾರ್ ಸುಲಭವಾಗಿ ಗುರಿ ಸೇರಿಸಿದರು.

77 ನೇ ನಿಮಿಷದಲ್ಲಿ ಎಡಿಇಗೆ ಪೆನಾಲ್ಟಿ ಕಿಕ್ ಅವಕಾಶ ಲಭಿಸಿತು. ಆ್ಯಂಟೊ ಕ್ಸೇವಿಯರ್ ಯಾವುದೇ ತಪ್ಪು ಮಾಡದೆ ಚೆಂಡನ್ನು ನೆಟ್‌ನೊಳಕ್ಕೆ ಕಳುಹಿಸಿದರು. ಆ ಬಳಿಕ ಎಚ್‌ಎಎಲ್ ರಕ್ಷಣೆಗೆ ಹೆಚ್ಚಿನ ಒತ್ತಡ ನೀಡಿತು. ಪಂದ್ಯ ಕೊನೆಗೊಳ್ಳಲು ಕೆಲವೇ ಸೆಕೆಂಡ್‌ಗಳಿರುವಾಗ (90+2) ಆರ್.ಸಿ. ಪ್ರಕಾಶ್ ಎಚ್‌ಎಎಲ್‌ನ ಮೂರನೇ ಗೋಲು ಗಳಿಸಿದರು.

ಎಸ್‌ಎಐಗೆ ಜಯ: `ಎ' ಡಿವಿಷನ್ ಲೀಗ್ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಎಸ್‌ಎಐ 4-0 ಗೋಲುಗಳಿಂದ ಬೆಂಗಳೂರು ಕಿಕ್ಕರ್ಸ್ ತಂಡವನ್ನು ಮಣಿಸಿತು. ರಜಿಬ್ (35 ಮತ್ತು 44ನೇ ನಿಮಿಷ), ಸುದರ್ಶನ್ (27) ಹಾಗೂ ಸರೋಜ್ ರಾಯ್ (73) ಚೆಂಡನ್ನು ಗುರಿ ಸೇರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.