ADVERTISEMENT

ಎಟಿಪಿ ವಿಶ್ವ ರ್‌್ಯಾಂಕಿಂಗ್: 184ನೇ ಸ್ಥಾನಕ್ಕೇರಿದ ರಾಮಕುಮಾರ್‌

​ಪ್ರಜಾವಾಣಿ ವಾರ್ತೆ
Published 3 ಜುಲೈ 2017, 19:30 IST
Last Updated 3 ಜುಲೈ 2017, 19:30 IST
ರಾಮಕುಮಾರ್ ರಾಮನಾಥನ್
ರಾಮಕುಮಾರ್ ರಾಮನಾಥನ್   

ನವದೆಹಲಿ :  ಭಾರತದ ರಾಮಕುಮಾರ್‌ ರಾಮನಾಥನ್‌ ಅವರು ಸೋಮವಾರ ಬಿಡುಗಡೆಯಾಗಿರುವ ನೂತನ ಎಟಿಪಿ ಪುರುಷರ ಸಿಂಗಲ್ಸ್‌ ವಿಭಾಗದ ವಿಶ್ವ ಕ್ರಮಾಂಕಪಟ್ಟಿಯಲ್ಲಿ 184ನೇ ಸ್ಥಾನಕ್ಕೆ ಬಡ್ತಿ ಹೊಂದಿದ್ದಾರೆ. ಇದು ಭಾರತದ ಆಟಗಾರನ ವೃತ್ತಿಬದುಕಿನ ಶ್ರೇಷ್ಠ ಸಾಧನೆಯಾಗಿದೆ.

ಇತ್ತೀಚೆಗೆ ನಡೆದಿದ್ದ ಅಂತಾಲ್ಯ ಓಪನ್‌ ಟೂರ್ನಿಯಲ್ಲಿ ರಾಮಕುಮಾರ್‌ ಅವರು ವಿಶ್ವ ರ್‍ಯಾಂಕಿಂಗ್‌ನಲ್ಲಿ ಎಂಟನೇ ಸ್ಥಾನ ಹೊಂದಿದ್ದ ಡಾಮಿನಿಕ್‌ ಥಿಯೆಮ್‌ ಅವರಿಗೆ ಆಘಾತ ನೀಡಿದ್ದರು. ಈ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್‌ ಪ್ರವೇಶಿಸಿದ್ದ ಇವರು ಒಟ್ಟು 38 ಸ್ಥಾನ ಮೇಲೇರಿದ್ದಾರೆ.

ಚೆನ್ನೈನ ರಾಮಕುಮಾರ್‌ ಅವರು 57 ಪಾಯಿಂಟ್ಸ್‌ಗಳನ್ನು ಕಲೆ ಹಾಕಿದ್ದು  ಸಿಂಗಲ್ಸ್‌ ವಿಭಾಗದಲ್ಲಿ ಗರಿಷ್ಠ ರ್‍ಯಾಂಕಿಂಗ್‌ ಹೊಂದಿರುವ ಭಾರತದ ಆಟಗಾರ ಎನಿಸಿದ್ದಾರೆ.

ADVERTISEMENT

ಯೂಕಿ ಭಾಂಬ್ರಿ ಅವರು 222ನೇ ಸ್ಥಾನ ಹೊಂದಿದ್ದು, ಪ್ರಗ್ನೇಶ್‌ ಗುಣೇಶ್ವರನ್‌  ಅವರು 259ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಎನ್‌. ಶ್ರೀರಾಮ್‌ ಬಾಲಾಜಿ ಮತ್ತು ಸುಮಿತ್‌ ನಗಾಲ್‌ ಅವರು ಕ್ರಮವಾಗಿ 291 ಮತ್ತು 342ನೇ ಸ್ಥಾನಗಳಲ್ಲಿದ್ದಾರೆ. ಸುಮಿತ್‌ ಅವರು 27 ಸ್ಥಾನ ಪ್ರಗತಿ ಕಂಡಿದ್ದಾರೆ.

ಡಬಲ್ಸ್‌ ವಿಭಾಗದಲ್ಲಿ  ಕರ್ನಾಟಕದ ರೋಹನ್‌ ಬೋಪಣ್ಣ ಅವರು 21ನೇ ಸ್ಥಾನದಲ್ಲಿದ್ದಾರೆ. ಪುರವ್‌ ರಾಜಾ ಮತ್ತು  ದಿವಿಜ್‌ ಶರಣ್‌ ಅವರು ಜಂಟಿಯಾಗಿ 57ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಹಿರಿಯ ಆಟಗಾರ ಲಿಯಾಂಡರ್‌ ಪೇಸ್‌ ಮತ್ತು ಜೀವನ್‌ ನೆಡುಂಚೆಳಿಯನ್‌ ಅವರು ಕ್ರಮವಾಗಿ 62 ಮತ್ತು 90ನೇ ಸ್ಥಾನಗಳನ್ನು ಪಡೆದಿದ್ದಾರೆ.

ಏಳನೇ ಸ್ಥಾನದಲ್ಲಿ ಸಾನಿಯಾ: ಡಬ್ಲ್ಯುಟಿಎ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಸಾನಿಯಾ ಮಿರ್ಜಾ ಅವರು ಏಳನೇ ಸ್ಥಾನ ಕಾಪಾಡಿಕೊಂಡಿದ್ದಾರೆ.
ಅಂಕಿತಾ ರಾಣಾ ಅವರು ಸಿಂಗಲ್ಸ್‌ ವಿಭಾಗದಲ್ಲಿ ಗರಿಷ್ಠ ರ್‍ಯಾಂಕ್ ಹೊಂದಿ ರುವ ಭಾರತದ ಆಟಗಾರ್ತಿಯಾಗಿದ್ದಾರೆ. ಅವರು 274ನೇ ಸ್ಥಾನದಲ್ಲಿದ್ದಾರೆ. ಕರ್ಮಾನ್‌ ಕೌರ್‌ ಥಂಡಿ 413ನೇ ಸ್ಥಾನ ಗಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.