ADVERTISEMENT

ಎರಡೂ ಪಂದ್ಯಗಳು ರದ್ದು

ಚಾಂಪಿಯನ್ಸ್‌ ಲೀಗ್‌ ಟ್ವೆಂಟಿ-20: ಮಳೆಯದ್ದೇ ಆಟ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2013, 19:59 IST
Last Updated 23 ಸೆಪ್ಟೆಂಬರ್ 2013, 19:59 IST
ಆಟಕ್ಕೆ ಮಳೆಯ ಕಾಟ... ಚಾಂಪಿಯನ್ಸ್‌ ಲೀಗ್‌ ಟ್ವೆಂಟಿ-20 ಕ್ರಿಕೆಟ್‌ ಟೂರ್ನಿಯ ಸೋಮವಾರದ ಪಂದ್ಯಗಳಿಗೆ ಮಳೆ ಅಡ್ಡಿ ಪಡಿಸಿದ ಕಾರಣ ಎರಡೂ ಪಂದ್ಯಗಳು ನಡೆಯಲಿಲ್ಲ. ಮಳೆ ಸುರಿಯುವಾಗ ಕ್ರೀಡಾಂಗಣ ಕಂಡಿದ್ದು ಹೀಗೆ	-ಪಿಟಿಐ ಚಿತ್ರ
ಆಟಕ್ಕೆ ಮಳೆಯ ಕಾಟ... ಚಾಂಪಿಯನ್ಸ್‌ ಲೀಗ್‌ ಟ್ವೆಂಟಿ-20 ಕ್ರಿಕೆಟ್‌ ಟೂರ್ನಿಯ ಸೋಮವಾರದ ಪಂದ್ಯಗಳಿಗೆ ಮಳೆ ಅಡ್ಡಿ ಪಡಿಸಿದ ಕಾರಣ ಎರಡೂ ಪಂದ್ಯಗಳು ನಡೆಯಲಿಲ್ಲ. ಮಳೆ ಸುರಿಯುವಾಗ ಕ್ರೀಡಾಂಗಣ ಕಂಡಿದ್ದು ಹೀಗೆ -ಪಿಟಿಐ ಚಿತ್ರ   

ಅಹಮದಾಬಾದ್‌ (ಪಿಟಿಐ):  ಚಾಂಪಿಯನ್ಸ್‌ ಲೀಗ್‌ ಟ್ವೆಂಟಿ-20 ಕ್ರಿಕೆಟ್‌ ಟೂರ್ನಿಯ ‘ಎ’ ಗುಂಪಿನ ಎರಡೂ ಪಂದ್ಯಗಳು ಸೋಮವಾರ ಮಳೆಯ ಕಾರಣ ರದ್ದುಗೊಂಡವು.

ಇಲ್ಲಿನ ಸರ್ದಾರ್ ಪಟೇಲ್‌ ಕ್ರೀಡಾಂಗಣದಲ್ಲಿ ಸಂಜೆ ನಾಲ್ಕು ಗಂಟೆಗೆ ಆರಂಭವಾಗಬೇಕಿದ್ದ ಪಂದ್ಯ­ದಲ್ಲಿ ಪರ್ತ್‌ ಸ್ಕಾಚರ್ಸ್‌ ಮತ್ತು ಹೈವೆಲ್ಡ್‌ ಲಯನ್ಸ್‌ ಪೈಪೋಟಿ ನಡೆಸಬೇಕಿತ್ತು.

ಆದರೆ ಟಾಸ್‌ ಬಳಿಕ ಧಾರಾಕಾರ ಮಳೆ ಸುರಿಯಲಾರಂಭಿಸಿತು. ಅಂಗಳದ ಹೆಚ್ಚಿನ ಭಾಗಗಳಲ್ಲಿ ನೀರು ತುಂಬಿದ ಕಾರಣ ಪಂದ್ಯವನ್ನು ರದ್ದುಗೊಳಿಸಲು ಅಂಪೈರ್‌ಗಳು ನಿರ್ಧರಿಸಿದರು.

ರಾತ್ರಿ 8.00ಕ್ಕೆ ಆರಂಭವಾಗಬೇಕಿದ್ದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ಮತ್ತು ನ್ಯೂಜಿಲೆಂಡ್‌ನ ಒಟಾಗೊ ವೋಲ್ಟ್ಸ್‌ ತಂಡಗಳು ಎದುರಾಗಬೇಕಿತ್ತು. ಈ ಪಂದ್ಯದ ವೇಳೆಗೆ ಅಂಗಳವನ್ನು ಸಜ್ಜುಗೊಳಿಸಲು ಮೈದಾನದ ಸಿಬ್ಬಂದಿ ಪ್ರಯತ್ನಿಸಿದರು. ಆದರೆ ತುಂತುರು ಮಳೆ ಸುರಿಯುತ್ತಲೇ ಇದ್ದ ಕಾರಣ ಅವರ ಪ್ರಯತ್ನ ವಿಫಲವಾಯಿತು.

7.30ರ ವರೆಗೆ ಕಾದ ಅಂಪೈರ್‌ಗಳು ಪಂದ್ಯ ನಡೆಸುವುದು ಅಸಾಧ್ಯ ಎಂಬುದು ಖಚಿತವಾದ ಬಳಿಕ ರದ್ದುಗೊಳಿಸಲು ನಿರ್ಧರಿಸಿದರು. ಪಂದ್ಯಗಳು ರದ್ದುಗೊಂಡ ಕಾರಣ ಎಲ್ಲ ನಾಲ್ಕು ತಂಡಗಳು ತಲಾ ಎರಡು ಪಾಯಿಂಟ್‌ ಪಡೆದವು. ಪಂದ್ಯ ನಡೆಯದೇ ಇದ್ದುದು ಮುಂಬೈ ಇಂಡಿಯನ್ಸ್‌ ತಂಡಕ್ಕೆ ಹಿನ್ನಡೆ ಉಂಟುಮಾಡಿದೆ.

ರೋಹಿತ್‌ ಶರ್ಮ ಬಳಗ ಮೊದಲ ಪಂದ್ಯದಲ್ಲಿ ರಾಜಸ್ತಾನ ರಾಯಲ್ಸ್‌ ಕೈಯಲ್ಲಿ ಸೋಲು ಅನುಭವಿಸಿತ್ತು. ಇದೀಗ ಎರಡು ಪಂದ್ಯಗಳಿಂದ ತಂಡ ಎರಡು ಪಾಯಿಂಟ್‌ ಹೊಂದಿದೆ. ನಾಲ್ಕು ಪಾಯಿಂಟ್‌ ಹೊಂದಿರುವ ರಾಯಲ್ಸ್‌ ‘ಎ’ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.