ADVERTISEMENT

ಎಲ್ಲೆಲ್ಲೂ ಫುಟ್‌ಬಾಲ್ ಜ್ವರ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2011, 19:30 IST
Last Updated 2 ಸೆಪ್ಟೆಂಬರ್ 2011, 19:30 IST

ಕೋಲ್ಕತ್ತ (ಪಿಟಿಐ): ನಗರದಲ್ಲಿ ಎಲ್ಲಿ ನೋಡಿದರೂ ಫುಟ್‌ಬಾಲ್‌ನದ್ದೇ ಮಾತು. ಅದಕ್ಕೆ ಕಾರಣ ಮೆಸ್ಸಿ. ಅರ್ಜೆಂಟೀನಾ ಹಾಗೂ ವೆನಿಜುವೆಲಾ ನಡುವಿನ ಸೌಹಾರ್ದ ಫುಟ್‌ಬಾಲ್ ಪಂದ್ಯವಿದ್ದ ಕಾರಣ ಎಲ್ಲೆಲ್ಲೂ ದೊಡ್ಡ ದೊಡ್ಡ ಪರದೆ ಮೇಲೆ ಪಂದ್ಯದ ನೇರ ಪ್ರಸಾರ.

ಅರ್ಜೆಂಟೀನಾದ ಧ್ವಜ, ಆ ದೇಶದ ಫುಟ್‌ಬಾಲ್ ತಂಡದ ಜರ್ಸಿಯದ್ದೇ ಆರ್ಭಟ. ಅವುಗಳದ್ದೇ ಮಾರಾಟ. ಮೆಸ್ಸಿ ಅವರ ಪೋಸ್ಟರ್‌ಗಳದ್ದೇ ಮೆರೆದಾಟ.

ಸಾಂಪ್ರದಾಯಿಕ ಎದುರಾಳಿಗಳಾದ ಬ್ರೆಜಿಲ್ ಹಾಗೂ ಅರ್ಜೆಂಟೀನಾ ಪಂದ್ಯಗಳೆಂದರೆ ಅದೊಂದು ಅದ್ಭುತ ಪಂದ್ಯವೆಂದೇ ಅರ್ಥ. ಹಾಗೇ, ಕೋಲ್ಕತ್ತದಲ್ಲೂ ಎರಡು ಗುಂಪುಗಳಿವೆ. ಕೆಲವರು ಬ್ರೆಜಿಲ್‌ಗೆ ಬೆಂಬಲ ವ್ಯಕ್ತಪಡಿಸಿದರೆ, ಇನ್ನು ಕೆಲವರು ಅರ್ಜೆಂಟೀನಾ ತಂಡಕ್ಕೆ ಬೆಂಬಲ ನೀಡುತ್ತಾರೆ.

ಆದರೆ ಶುಕ್ರವಾರ ಇವರೆಲ್ಲರ ಚಿತ್ತ ಹರಿದಿದ್ದು ಅರ್ಜೆಂಟೀನಾದ ಲಿಯೊನೆಲ್ ಮೆಸ್ಸಿ ಅವರತ್ತ.
 `ನಾನು ಬ್ರೆಜಿಲ್‌ನ ರೊನಾಲ್ಡೊ ಹಾಗೂ ರೊನಾಲ್ಡಿನೊ ಅವರ ಪರಮ ಅಭಿಮಾನಿ. ಆದರೆ ನಾನೀಗ ಮೆಸ್ಸಿ ಅಭಿಮಾನಿ~ ಎಂದು ದೇವನಾರಾಯಣ ಬ್ಯಾನರ್ಜಿ ನುಡಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.