ADVERTISEMENT

ಎಲ್ಲೆ ಮೀರಿದ ಸಂಭ್ರಮ, ಕೊನೆಯಲ್ಲಿ ನಿರಾಸೆ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2012, 19:57 IST
Last Updated 25 ಡಿಸೆಂಬರ್ 2012, 19:57 IST

ಬೆಂಗಳೂರು: `ಸಾಂಪ್ರದಾಯಿಕ ಎದುರಾಳಿ'ಗಳ ನಡುವಿನ ಹೋರಾಟವನ್ನು ಕ್ರಿಕೆಟ್ ಪ್ರಿಯರು ಹೇಗೆ ಆನಂದಿಸುವರು ಎಂಬುದಕ್ಕೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಂಗಳವಾರ ರಾತ್ರಿ ನಡೆದ ಪಂದ್ಯವೇ ಉತ್ತಮ ಉದಾಹರಣೆ. ಕ್ರಿಸ್‌ಮಸ್ ದಿನ ಕ್ರೀಡಾಂಗಣದಲ್ಲಿ ಹಬ್ಬದ ವಾತಾವರಣ ಕಂಡುಬಂತು. ಹಿರಿಯರು, ಕಿರಿಯರು ಎಂಬ ಭೇದಭಾವಿಲ್ಲದೆ ಅಲ್ಲಿ ನೆರೆದಿದ್ದ ಎಲ್ಲರೂ ಆಟದ ಸೊಬಗನ್ನು ಸವಿದರು.

ಭಾರತ ಮತ್ತು ಪಾಕಿಸ್ತಾನ ತಂಡಗಳು ಐದು ವರ್ಷಗಳ ಬಿಡುವಿನ ಬಳಿಕ ಸರಣಿಯೊಂದರಲ್ಲಿ ಆಡುತ್ತಿದೆ. ಆದ್ದರಿಂದ ಎಲ್ಲರೂ ಮೊದಲ ಟ್ವೆಂಟಿ-20 ಪಂದ್ಯಕ್ಕಾಗಿ ಕಾತರದಿಂದ ಕಾಯುತ್ತಿದ್ದರು. ಭಾರತದ ನೆಲದಲ್ಲಿ ಉಭಯ ತಂಡಗಳು ಆಡಿದ ಮೊದಲ ಟ್ವೆಂಟಿ-20 ಅಂತರರಾಷ್ಟ್ರೀಯ ಪಂದ್ಯ ಇದಾಗಿತ್ತು.

ಪಂದ್ಯದ ಆರಂಭಕ್ಕೆ ಸಾಕಷ್ಟು ಮುನ್ನವೇ ಕ್ರೀಡಾಂಗಣ ಭರ್ತಿಯಾಗಿತ್ತು. ಉಭಯ ದೇಶಗಳ ನಾಯಕರು ಟಾಸ್‌ಗಾಗಿ ಅಂಗಳದ ಮಧ್ಯಕ್ಕೆ ಆಗಮಿಸುವ ಸಂದರ್ಭ ಪ್ರೇಕ್ಷಕರಲ್ಲಿ ವಿದ್ಯುತ್ ಸಂಚರಿಸಿದ ಅನುಭವ.

ಭಾರತದ ಬ್ಯಾಟ್ಸ್‌ಮನ್‌ಗಳು ಪ್ರತಿ ರನ್ ಗಳಿಸುವ ವೇಳೆ ಪ್ರೇಕ್ಷಕರು ಚಪ್ಪಾಳೆ ತಟ್ಟಿದರು. ಬೌಂಡರಿ, ಸಿಕ್ಸರ್‌ಗಳು ಸಿಡಿದ ಸಂದರ್ಭದಲ್ಲಂತೂ ಹುಚ್ಚೆದ್ದು ಕುಣಿದರು. ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್ ಬ್ಯಾಟಿಂಗ್‌ಗೆ ಆಗಮಿಸುವ ವೇಳೆ ನೆರೆದವರ ಮೈಮನ ಪುಳಕಗೊಂಡವು. ಆದರೆ ಇವರಿಬ್ಬರು ಮಿಂಚದೇ ಇದ್ದದ್ದು ಅಲ್ಪ ನಿರಾಸೆಗೂ ಕಾರಣವಾಯಿತು.

ಭುವನೇಶ್ವರ್ ಕುಮಾರ್ ಆರಂಭದಲ್ಲಿ ಎದುರಾಳಿ ತಂಡದ ವಿಕೆಟ್‌ಗಳನ್ನು ಪಟಪಟನೆ ಉರುಳಿಸಿದಾಗ ನೆರೆದವರ ಸಂಭ್ರಮ ಹೇಳತೀರದು. ಆದರೆ ಭಾರತ ಸೋಲು ಅನುಭವಿಸಿದ ಕಾರಣ ಅಭಿಮಾನಿಗಳು ನಿರಾಸೆಯ ಮೊಗಹೊತ್ತು ಮನೆಯತ್ತ ಹೆಜ್ಜೆಯಿಟ್ಟರು.

ಚಿತ್ರ ವಿಚಿತ್ರ ವೇಷತೊಟ್ಟ ಕ್ರಿಕೆಟ್ ಪ್ರಿಯರು ಕ್ರೀಡಾಂಗಣದ ಕಳೆ ಹೆಚ್ಚಿಸಿದರು. ಸಾವಿರಾರು ರಾಷ್ಟ್ರಧ್ವಜಗಳು ಆರಂಭದಿಂದ ಕೊನೆಯವರೆಗೂ ಹಾರಾಡುತ್ತಿದ್ದವು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಹಿಂದೆ ನಡೆದ ಹಲವು ಪಂದ್ಯಗಳು ಪ್ರೇಕ್ಷಕರಿಗೆ ಸ್ಮರಣೀಯ ಕ್ಷಣಗಳನ್ನು ತಂದುಕೊಟ್ಟಿದೆ. ಈ ಪಂದ್ಯ ಇನ್ನಷ್ಟು ಸುಂದರ ನೆನಪುಗಳನ್ನು ಉದ್ಯಾನನಗರಿಯ ಕ್ರಿಕೆಟ್ ಪ್ರಿಯರಿಗೆ ನೀಡಿತು.

ಎಲ್ಲರಿಗೂ ತಟ್ಟಿದ ಭದ್ರತೆಯ `ಬಿಸಿ'
ಕ್ರೀಡಾಂಗಣ ಪೊಲೀಸರ ಭದ್ರ ಕೋಟೆಯಾಗಿ ಬದಲಾದದ್ದು ಪಂದ್ಯ ನೋಡಲು ಆಗಮಿಸಿದವರಿಗೆ ಕಿರಿಕಿರಿ ಉಂಟುಮಾಡಿತು. ಪ್ರತಿಯೊಬ್ಬರನ್ನೂ ತಪಾಸಣೆ ನಡೆಸಿ ಒಳಗೆ ಬಿಡಲಾಗುತಿತ್ತು. ಇದರಿಂದ ಕ್ರೀಡಾಂಗಣದ ಒಳಗೆ ಸೇರುವವರೆಗೂ ಎಲ್ಲರ ಮುಖದಲ್ಲೂ ಒಂದು ರೀತಿಯ ಆತಂಕ ಎದ್ದುಕಾಣುತಿತ್ತು. ಕ್ರೀಡಾಂಗಣದ ಎಲ್ಲ ದ್ವಾರಗಳ ಮುಂದೆಯೂ ಜನರು ಸಾಲುಗಟ್ಟಿ ನಿಂತದ್ದು ಕಂಡುಬಂತು. ಕೆಲವರು ಮಧ್ಯಾಹ್ನವೇ ಸರತಿಯಲ್ಲಿ ಸಾಲಿನಲ್ಲಿ ನಿಂತು ಗೇಟ್‌ಗಳು ತೆರೆಯುವ ಕ್ಷಣಕ್ಕಾಗಿ ಕಾಯುತ್ತಿದ್ದರು.

ಜನರನ್ನು ನಿಯಂತ್ರಿಸಲು ಪೊಲೀಸರು ಕೂಡಾ ಹರಸಾಹಸಪಟ್ಟರು. ಭಾರತ-ಪಾಕಿಸ್ತಾನ ಬೆಂಗಳೂರಿನಲ್ಲಿ ನಡೆಯದಿದ್ದರೆ ಒಳ್ಳೆಯದು ಎಂಬ ಭಾವನೆ ಹಲವು ಸಿಬ್ಬಂದಿಯ ಮನಸ್ಸಿನಲ್ಲಿ ಹಾದುಹೋದದ್ದು ನಿಜ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.