
ಮೀರ್‌ಪುರ (ಢಾಕಾ): ಬಾಂಗ್ಲಾದೇಶವನ್ನು ಮಣಿಸಿ ಏಷ್ಯಾಕಪ್‌ನಲ್ಲಿ ಶುಭಾರಂಭ ಮಾಡಿದ ಪಾಕಿಸ್ತಾನಕ್ಕೆ ಗೆಲುವಿನ ಓಟ ಮುಂದುವರಿಸುವ ನಿರೀಕ್ಷೆ. ಆದರೆ ಭಾರತದ ಎದುರು ಆಘಾತ ಅನುಭವಿಸಿದ ಶ್ರೀಲಂಕಾ ಪುಟಿದೆದ್ದು ಜಯದ ಹಾದಿ ಹಿಡಿಯುವ ಉತ್ಸಾಹ ಹೊಂದಿದೆ.
ಭಾರತದ ಎದುರು ಗುರಿಯನ್ನು ಬೆನ್ನಟ್ಟುವ ಮಾರ್ಗದಲ್ಲಿ ಮುಗ್ಗರಿಸಿ ಐವತ್ತು ರನ್‌ಗಳ ಅಂತರದ ಸೋಲನುಭವಿಸಿದ ಸಿಂಹಳೀಯರು ಈಗ ಗಾಯಗೊಂಡ ಸಿಂಹವಾಗಿದ್ದಾರೆ. ಆಸ್ಟ್ರೇಲಿಯಾದಲ್ಲಿ ಆಡಿದ ತ್ರಿಕೋನ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಈ ತಂಡಕ್ಕೆ ಏಷ್ಯಾಕಪ್ ಕ್ರಿಕೆಟ್‌ನಲ್ಲಿನ ಮೊದಲ ಪರಾಭವ ಸಹನೀಯ ಎನಿಸಿಲ್ಲ.
ಮಂಗಳವಾರದ ಪಂದ್ಯದಲ್ಲಿ ಭಾರತವು ಮುಂದಿಟ್ಟಿದ್ದ ಸವಾಲಿಗೆ ತಕ್ಕ ಉತ್ತರ ನೀಡುವ ಹುಮ್ಮಸ್ಸಿನಲ್ಲಿಯೇ ಇನಿಂಗ್ಸ್ ಆರಂಭಿಸಿಯೂ ಲೆಕ್ಕಾಚಾರ ತಪ್ಪಿದ ಮಾಹೇಲ ಜಯವರ್ಧನೆ ನೇತೃತ್ವದ ತಂಡವು ಆಗಿರುವ ಪ್ರಮಾದ ಮರುಕಳಿಸದಂತೆ ಎಚ್ಚರ ವಹಿಸಬೇಕು. ಇನಿಂಗ್ಸ್ ಕಟ್ಟುವಲ್ಲಿ ಕಷ್ಟಪಟ್ಟ ಹಾಗೂ ವಿಕೆಟ್ ಕಾಯ್ದುಕೊಳ್ಳಲಾಗದೇ ಚಡಪಡಿಸಿದ್ದ ಲಂಕಾ ಪಡೆಗೆ ಪಾಕಿಸ್ತಾನ ವಿರುದ್ಧದ ಪಂದ್ಯ ಮಹತ್ವದ್ದು. ಫೈನಲ್ ಕನಸು ಕಟ್ಟಿಕೊಳ್ಳಲು ದೊಡ್ಡ ಎದುರಾಳಿಯನ್ನು ಮಣಿಸಬೇಕು.
ಭಾರತದ ಎದುರು ಕೈತಪ್ಪಿದ ಯಶಸ್ಸು ಪಾಕ್ ವಿರುದ್ಧದ ಪಂದ್ಯದಲ್ಲಿಯೂ ಕೈಕೊಟ್ಟರೆ ಪ್ರಶಸ್ತಿಗಾಗಿ ಹೋರಾಡುವ ಆಸೆ ಕೈಬಿಡಬೇಕಾಗುತ್ತದೆ. ಊಹೆಗೆ ನಿಲುಕದಂಥ ಆಟವಾಡುವ ಮಿಸ್ಬಾ ಉಲ್ ಹಕ್ ನಾಯಕತ್ವದ ಪಡೆಯು ಉದ್ಘಾಟನಾ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಮಣಿಸಿದೆ. ಆದರೆ ಈ ತಂಡದವರು ತಮ್ಮ ಸತ್ವ ಏನೆಂದು ಸಾಬೀತು ಮಾಡಬೇಕಾಗಿರುವುದು ಶ್ರೀಲಂಕಾ ವಿರುದ್ಧ. ಬಲಾಢ್ಯ ಎನಿಸಿಕೊಂಡಿರುವ ಮಾಹೇಲ ಬಳಗಕ್ಕೆ ಸವಾಲಾಗಿ ನಿಂತರೆ ಪಾಕ್ ನಿಜವಾಗಿಯೂ ಶಕ್ತಿಯುತವಾಗಿದೆ ಎಂದು ಒಪ್ಪಿಕೊಳ್ಳಬಹುದು. ಈ ಪಂದ್ಯದಲ್ಲಿ ಗೆದ್ದರೆ ಭಾನುವಾರ ನಡೆಯುವ ಹಣಾಹಣಿಯಲ್ಲಿ ಭಾರತವನ್ನು ವಿಶ್ವಾಸದಿಂದ ಎದುರಿಸಬಹುದು.
ಪಾಕ್ ಹಾಗೂ ಲಂಕಾದವರು ತಮ್ಮ ಬ್ಯಾಟಿಂಗ್ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಕಡೆಗೆ ಗಮನ ನೀಡುವುದು ಈಗಿನ ಅಗತ್ಯ. ಯೂನಿಸ್ ಖಾನ್ ಹಾಗೂ ನಾಯಕ ಮಿಸ್ಬಾ ಅವರು ನಿರೀಕ್ಷಿತ ಮಟ್ಟದಲ್ಲಿ ಆಡದ ಕಾರಣ ಪಾಕಿಸ್ತಾನಕ್ಕೆ ಮಧ್ಯಮ ಕ್ರಮಾಂಕದಲ್ಲಿ ಬಲ ಸಿಕ್ಕಿಲ್ಲ. ಶ್ರೀಲಂಕಾ ಕೂಡ ಇಂಥದೇ ಸಮಸ್ಯೆ ಎದುರಿಸಿದೆ. ಆರಂಭದ ಅಬ್ಬರ ಕೊನೆಯವರೆಗೆ ಉಳಿದಿಲ್ಲ. ಅದೇ ಸಿಂಹಳೀಯರನ್ನು ಕಾಡುತ್ತಿರುವ ದೊಡ್ಡ ಸಮಸ್ಯೆ. ಈ ಕೊರತೆಯನ್ನು ನೀಗಿಸಿಕೊಂಡಲ್ಲಿ ಪಾಕ್‌ಗೆ ಆಘಾತ ನೀಡುವ ಆಸೆ ಈಡೇರಲು ಸಾಧ್ಯ.
ತಂಡಗಳು
ಪಾಕಿಸ್ತಾನ: ಮಿಸ್ಬಾ ಉಲ್ ಹಕ್ (ನಾಯಕ), ಅಬ್ದುರ್ ರೆಹಮಾನ್, ಐಜಾಜ್ ಚೀಮಾ, ಅಸದ್ ಶಫೀಕ್, ಅಜರ್ ಅಲಿ, ಹಮ್ಮಾದ್ ಅಜಾಮ್, ಮೊಹಮ್ಮದ್ ಹಫೀಜ್, ನಾಸೀರ್ ಜಮ್‌ಶೇದ್, ಸಯೀದ್ ಅಜ್ಮಲ್, ಸರ್ಫರಾಜ್ ಅಹ್ಮದ್, ಶಾಹೀದ್ ಅಫ್ರಿದಿ, ಉಮರ್ ಅಕ್ಮಲ್, ಉಮರ್ ಗುಲ್, ವಹಾಬ್ ರಿಯಾಜ್ ಮತ್ತು ಯೂನಿಸ್ ಖಾನ್.
ಶ್ರೀಲಂಕಾ: ಮಾಹೇಲ ಜಯವರ್ಧನೆ (ನಾಯಕ), ಆ್ಯಂಜೆಲೊ ಮ್ಯಾಥ್ಯೂಸ್, ದಿನೇಶ್ ಚಂಡಿಮಾಲ, ತಿಲಕರತ್ನೆ ದಿಲ್ಶಾನ್, ನುವಾನ್ ಕುಲಶೇಖರ, ಸುರಂಗ ಲಕ್ಮಲ್, ಫರ್ವೀಜ್ ಮಹರೂಫ್, ಲಸಿತ್ ಮಾಲಿಂಗ, ತಿಸ್ಸಾರ ಪೆರೇರಾ, ಸೀಕ್ಕುಗೆ ಪ್ರಸನ್ನ, ಕುಮಾರ ಸಂಗಕ್ಕಾರ, ಸಚಿತ್ರ ಸೇನನಾಯಕೆ, ಉಪುಲ್ ತರಂಗ ಮತ್ತು ಲಾಹಿರು ತಿರುಮನ್ನೆ.
ಅಂಪೈರ್‌ಗಳು: ಸ್ಟೀವ್ ಡೇವಿಸ್ (ಆಸ್ಟ್ರೇಲಿಯಾ) ಮತ್ತು ಪಾಲ್ ರೀಫೆಲ್ (ಆಸ್ಟ್ರೇಲಿಯಾ); ಮೂರನೇ ಅಂಪೈರ್: ಶರ್ಫುದ್ದೌಲಾ (ಬಾಂಗ್ಲಾದೇಶ).
ಮ್ಯಾಚ್ ರೆಫರಿ: ಡೇವಿಡ್ ಬೂನ್ (ಆಸ್ಟ್ರೇಲಿಯಾ).
ಪಂದ್ಯ ಆರಂಭ: (ಭಾರತೀಯ ಕಾಲಮಾನ) ಮಧ್ಯಾಹ್ನ 1.30ಕ್ಕೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.