ಮೀರ್‌ಪುರ (ಪಿಟಿಐ): ವಿಶ್ವಕಪ್ ರನ್ನರ್ ಅಪ್ ಶ್ರೀಲಂಕಾ ತಂಡದವರೇನು ಕೆಟ್ಟದಾಗಿ ಆಡಲಿಲ್ಲ. ಆದರೆ ಅದ್ಭುತ ಪ್ರದರ್ಶನ ತೋರಿದ ಪುಟ್ಟ ದೇಶ ಬಾಂಗ್ಲಾ ತಂಡದವರು ಏಷ್ಯಾಕಪ್ ಕ್ರಿಕೆಟ್ ಫೈನಲ್ ತಲುಪಿದ್ದಾರೆ. ಈ ಕಾರಣ ವಿಶ್ವ ಚಾಂಪಿಯನ್ ಭಾರತ ತಂಡ ಈ ಟೂರ್ನಿಯಿಂದಲೇ ಹೊರಬಿದ್ದಿದೆ.
ಈ ಪಂದ್ಯದಲ್ಲಿ ಶ್ರೀಲಂಕಾ ಗೆಲ್ಲಲಿ ಎಂಬ ಭಾರತ ತಂಡದ ಅಭಿಮಾನಿಗಳ ಪ್ರಾರ್ಥನೆ ಫಲಿಸಲಿಲ್ಲ. ಕಿಕ್ಕಿರಿದು ತುಂಬಿದ್ದ ಶೇರ್ ಎ ಬಾಂಗ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ರಾತ್ರಿ ಐದು ವಿಕೆಟ್‌ಗಳಿಂದ ಲಂಕಾ ತಂಡವನ್ನು ಸೋಲಿಸುತ್ತಿದ್ದಂತೆ ಬಾಂಗ್ಲಾ ಆಟಗಾರರು ವಿಶ್ವಕಪ್ ಗೆದ್ದಷ್ಟೇ ಖುಷಿಯಿಂದ ಕುಣಿದಾಡಿದರು. ಪ್ರಧಾನಿ ಶೇಖ್ ಹಸೀನಾ ಕೂಡ ಎದ್ದು ನಿಂತು ಚಪ್ಪಾಳೆ ತಟ್ಟಿ ಖುಷಿ ವ್ಯಕ್ತಪಡಿಸಿದರು.
ಏಕೆಂದರೆ ಈ ದೇಶದ ತಂಡದವರು ಇದೇ ಮೊದಲ ಬಾರಿ ಏಷ್ಯಾಕಪ್ ಫೈನಲ್‌ನಲ್ಲಿ ಆಡಲು ಅವಕಾಶ ಪಡೆದಿದ್ದಾರೆ. ಈ ಹಾದಿಯಲ್ಲಿ ವಿಶ್ವ ಚಾಂಪಿಯನ್ ಭಾರತ ಹಾಗೂ ರನ್ನರ್ ಅಪ್ ಶ್ರೀಲಂಕಾ ತಂಡಕ್ಕೆ ಶಾಕ್ ನೀಡಿದ್ದು ವಿಶೇಷ. ಹಾಗಾಗಿ ಮುಷ್ಫಿಕರ್ ರಹೀಮ್ ಬಳಗ ಗುರುವಾರ ನಡೆಯಲಿರುವ ಈ ಟೂರ್ನಿಯ ಫೈನಲ್‌ನಲ್ಲಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ.
ಮಳೆಯ ಕಾರಣ ಅಡಚಣೆಗೆ ಒಳಗಾದ ಈ ಪಂದ್ಯದಲ್ಲಿ ಸಿಂಹಳೀಯ ಪಡೆ ನೀಡಿದ 212 ರನ್‌ಗಳ ಗುರಿಯನ್ನು ಆತಿಥೇಯರು 37.1 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು ತಲುಪಿದರು. ಮೊದಲು ಬ್ಯಾಟ್ ಮಾಡಿದ್ದ ಲಂಕಾ ತಂಡವನ್ನು 49.5 ಓವರ್‌ಗಳಲ್ಲಿ ಕೇವಲ 232 ರನ್‌ಗಳಿಗೆ ನಿಯಂತ್ರಿಸುವಲ್ಲಿ ಈ ದೇಶದ ಆಟಗಾರರು ಯಶಸ್ವಿಯಾಗಿದ್ದರು. ಆದರೆ ಡಕ್ವರ್ಥ್ ಲೂಯಿಸ್ ನಿಯಮದನ್ವಯ 40 ಓವರ್‌ಗಳಲ್ಲಿ 212 ರನ್ ಗಳಿಸುವ ಪರಿಷ್ಕೃತ ಗುರಿ ನೀಡಲಾಯಿತು.
ಈ ಪಂದ್ಯದಲ್ಲಿ ಬಾಂಗ್ಲಾ ಸೋಲು ಕಂಡಿದ್ದರೆ ದೋನಿ ಬಳಗ ಫೈನಲ್ ತಲುಪುತಿತ್ತು. ಪಾಕ್ ಎದುರು ಮತ್ತೊಂದು ಪೈಪೋಟಿಯನ್ನು ಭಾರತದ ಅಭಿಮಾನಿಗಳು ಸವಿಯಬಹುದಿತ್ತು. ಆದರೆ ಈ ಆಸೆ, ಕನಸುಗಳನ್ನು ಬಾಂಗ್ಲಾ ಹುಡುಗರು ಛಿದ್ರ ಮಾಡಿದರು.
ಉಭಯ ತಂಡಗಳ ಪಾಯಿಂಟ್ 8. ಆದರೆ ಟೂರ್ನಿಯ ನಿಯಮದ ಪ್ರಕಾರ ಬಾಂಗ್ಲಾ ಫೈನಲ್ ಪ್ರವೇಶಿಸಿತು. ಭಾರತದ ಎದುರಿನ ಲೀಗ್ ಪಂದ್ಯದಲ್ಲಿ ಈ ತಂಡ ಗೆದ್ದಿದ್ದು ಈ ಎಲ್ಲಾ ಅಚ್ಚರಿ ಫಲಿತಾಂಶಗಳಿಗೆ ಕಾರಣ.
ಲಂಕಾ ನೀಡಿದ ಗುರಿ ಎದುರು ಬಾಂಗ್ಲಾ ಆರಂಭದಲ್ಲಿ ಕೊಂಚ ತಡವರಿಸಿತಾದರೂ ತಮೀಮ್ ಇಕ್ಬಾಲ್ (59; 57 ಎಸೆತ, 9 ಬೌಂ.) ಹಾಗೂ ಶಕೀಬ್ ಅಲ್ ಹಸನ್ (56; 46 ಎಸೆತ, 7 ಬೌಂ.) ತಂಡದ ನೆರವಿಗೆ ನಿಂತರು. ಬಳಿಕ ನಾಸೀರ್ ಹೊಸೇನ್ ಹಾಗೂ ಮಹಮ್ಮುದಲ್ಲಾ ತಂಡವನ್ನು ಗೆಲುವಿನ ಗೆರೆ ದಾಟಿಸಿದರು.
ಸ್ಕೋರ್ ವಿವರ:
ಶ್ರೀಲಂಕಾ 49.5 ಓವರ್‌ಗಳಲ್ಲಿ 232
ಮಾಹೇಲ ಜಯವರ್ಧನೆ ಬಿ ನಜ್ಮುಲ್ ಹೊಸೇನ್ 05
ತಿಲಕರತ್ನೆ ದಿಲ್ಶಾನ್ ಬಿ ನಜ್ಮುಲ್ ಹೊಸೇನ್ 19
ಕುಮಾರ ಸಂಗಕ್ಕಾರ ಸಿ ನಜಿಮುದ್ದೀನ್ ಬಿ ನಜ್ಮಲ್ ಹೊಸೇನ್ 06
ಚಾಮರ ಕಪುಗೆದೆರಾ ಸಿ ಶಕೀಬ್ ಹಸನ್ ಬಿ ಅಬ್ದುರ್ ರಜಾಕ್ 62
ಲಹಿರು ತಿರಿಮಾನೆ ಸ್ಟಂಪ್ಡ್ ಮುಷ್ಫಿಕರ್ ರಹೀಮ್ ಬಿ ರಜಾಕ್ 48
ಉಪುಲ್ ತರಂಗ ಸಿ ಮುಷ್ಫಿಕರ್ ರಹೀಮ್ ಬಿ ಹೊಸೇನ್ 48
ಫರ್ವೀಜ್ ಮಹಾರೂಫ್ ಸಿ ಮುಷ್ಫಿಕರ್ ರಹೀಮ್ ಬಿ ಶಕೀಬ್ 03
ನುವಾನ್ ಕುಲಶೇಖರ ಎಲ್‌ಬಿಡಬ್ಲ್ಯು ಬಿ ಶಕೀಬ್ ಅಲ್ ಹಸನ್ 01
ಸಚಿತ್ರ ಸೇನನಾಯಕೆ ಔಟಾಗದೆ 19
ಲಸಿತ್ ಮಾಲಿಂಗ ಬಿ ಮಷ್ರಫೆ ಮೋರ್ತಜಾ 10
ಸುರಂಗ ಲಕ್ಮಲ್ ರನ್‌ಔಟ್ (ಜುಹುರುಲ್/ಮಷ್ಫಿಕರ್) 00
ಇತರೆ (ಲೆಗ್‌ಬೈ-3, ವೈಡ್-8) 11
ವಿಕೆಟ್ ಪತನ: 1-19 (ಜಯವರ್ಧನೆ; 3.6); 2-29 (ಸಂಗಕ್ಕಾರ; 7.2); 3-32 (ದಿಲ್ಶಾನ್; 9.2); 4-120 (ತಿರಿಮಾನೆ; 31.6); 5-169 (ಕಪುಗೆದೆರಾ; 39.5); 6-175 (ಮಹಾರೂಫ್; 40.6); 7-183 (ಕುಲಶೇಖರ; 42.2); 8-204 (ತರಂಗ; 45.4); 9-230 (ಮಾಲಿಂಗ; 49.1); 10-232 (ಲಕ್ಮಲ್; 49.5).
ಬೌಲಿಂಗ್: ಮಷ್ರಫೆ ಮೋರ್ತಜಾ 9.5-1-30-1, ನಜ್ಮುಲ್ ಹೊಸೇನ್ 8-1-32-3, ಶಹಾದತ್ ಹೊಸೇನ್ 8-0-51-1 (ವೈಡ್-2), ಅಬ್ದುರ್ ರಜಾಕ್ 10-0-44-2 (ವೈಡ್-2), ಶಕೀಬ್ ಅಲ್ ಹಸನ್ 10-1-56-2 (ವೈಡ್-3), ಮೊಹಮುದುಲ್ಲಾ 4-0-16-0 (ವೈಡ್-1).
ಬಾಂಗ್ಲಾದೇಶ 37.1 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 212 (ಡಕ್ವರ್ಥ್ ಲೂಯಿಸ್ ನಿಯಮದನ್ವಯ)
ತಮೀಮ್ ಇಕ್ಬಾಲ್ ಸಿ ಲಹಿರು ತಿರಿಮಾನೆ ಬಿ ಸೇನನಾಯಕೆ 59
ನಜಿಮುದ್ದೀನ್ ಬಿ ನುವಾನ್ ಕುಲಶೇಖರ 06
ಜಹುರಲ್ ಇಸ್ಲಾಮ್ ಸಿ ಚಾಮರ ಕಪುಗೆದೆರಾ ಬಿ ಲಕ್ಮಲ್ 02
ಮುಷ್ಫಿಕರ್ ರಹೀಮ್ ಬಿ ನುವಾನ್ ಕುಲಶೇಖರ 01
ಶಕೀಬ್ ಅಲ್ ಹಸನ್ ಎಲ್‌ಬಿಡಬ್ಲ್ಯು ಬಿ ಸಚಿತ್ರ ಸೇನನಾಯಕೆ 56
ನಸೀರ್ ಹೊಸೇನ್ ಔಟಾಗದೆ 36
ಮಹಮ್ಮುದಲ್ಲಾ ಔಟಾಗದೆ 32
ಇತರೆ (ಲೆಗ್‌ಬೈ-13, ವೈಡ್-7) 20
ವಿಕೆಟ್ ಪತನ: 1-8 (ನಜಿಮುದ್ದೀನ್; 1.4); 2-39 (ಜಹುರುಲ್; 6.2); 3-40 (ಮುಷ್ಫಿಕರ್; 7.1); 4-116 (ತಮೀಮ್; 19.2); 5-135 (ಶಕೀಬ್; 23.2).
ಬೌಲಿಂಗ್: ಲಸಿತ್ ಮಾಲಿಂಗ 8-0-29-0 (ವೈಡ್-3), ನುವಾನ್ ಕುಲಶೇಖರ 6-0-30-2 (ವೈಡ್-1), ಸುರಂಗ ಲಕ್ಮಲ್ 7-0-40-1 (ವೈಡ್-3), ಸಚಿತ್ರಾ ಸೇನನಾಯಕೆ 8-0-38-2, ಫರ್ವೀಜ್ ಮಹಾರೂಫ್ 6-0-46-0, ತಿಲಕರತ್ನೆ ದಿಲ್ಶಾನ್ 2.1-0-16-0
ಫಲಿತಾಂಶ: ಡಕ್ವರ್ಥ್ ಲೂಯಿಸ್ ನಿಯಮದನ್ವಯ ಬಾಂಗ್ಲಾದೇಶಕ್ಕೆ ಐದು ವಿಕೆಟ್‌ಗಳ ಜಯ ಹಾಗೂ ಫೈನಲ್ ಪ್ರವೇಶ. ಪಾಯಿಂಟ್: ಬಾಂಗ್ಲಾ-4, ಶ್ರೀಲಂಕಾ-0. ಪಂದ್ಯ ಶ್ರೇಷ್ಠ: ಶಕೀಬ್ ಅಲ್ ಹಸನ್. ಫೈನಲ್: ಪಾಕ್-ಬಾಂಗ್ಲಾ (ಮಾರ್ಚ್ 22).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.