ADVERTISEMENT

ಐಎಸ್‌ಎಲ್ ಫೈನಲ್‌ಗೆ ಬೆಂಗಳೂರು ಆತಿಥ್ಯ

ಕಂಠೀರವ ಕ್ರೀಡಾಂಗಣದಲ್ಲಿ ಮಾರ್ಚ್‌ 17ರಂದು ರಾತ್ರಿ 8 ಗಂಟೆಗೆ ಟೂರ್ನಿಯ ಅಂತಿಮ ಪಂದ್ಯ

ಪಿಟಿಐ
Published 8 ಮಾರ್ಚ್ 2018, 19:30 IST
Last Updated 8 ಮಾರ್ಚ್ 2018, 19:30 IST
ಎಫ್‌ಸಿ ಗೋವಾ ತಂಡದ ಆಟಗಾರರು ಸೆಮಿಫೈನಲ್‌ನ ತವರಿನ ಲೆಗ್‌ ಪಂದ್ಯದಲ್ಲಿ ಗೆಲ್ಲುವ ಭರವಸೆಯಲ್ಲಿದ್ದಾರೆ. -ಪಿಟಿಐ ಚಿತ್ರ
ಎಫ್‌ಸಿ ಗೋವಾ ತಂಡದ ಆಟಗಾರರು ಸೆಮಿಫೈನಲ್‌ನ ತವರಿನ ಲೆಗ್‌ ಪಂದ್ಯದಲ್ಲಿ ಗೆಲ್ಲುವ ಭರವಸೆಯಲ್ಲಿದ್ದಾರೆ. -ಪಿಟಿಐ ಚಿತ್ರ   

ಮುಂಬೈ: ಇಂಡಿಯನ್ ಸೂಪರ್ ಲೀಗ್‌ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯ ಫೈನಲ್ ಪಂದ್ಯಕ್ಕೆ ಬೆಂಗಳೂರು ಆತಿಥ್ಯ ವಹಿಸಲಿದೆ.

‘ಈ ಮೊದಲು ಕೋಲ್ಕತ್ತದಲ್ಲಿ ಫೈನಲ್‌ ಪಂದ್ಯವನ್ನು ಆಯೋಜಿಸಲು ಚಿಂತನೆ ನಡೆಸಲಾಗಿತ್ತು. ಬಳಿಕ ಬೆಂಗಳೂರಿಗೆ ವರ್ಗಾಯಿಸಲಾಯಿತು’ ಎಂದು ಆಯೋಜಕರು ಸ್ಪಷ್ಟಪಡಿಸಿದ್ದಾರೆ.

ಫುಟ್‌ಬಾಲ್ ಸ್ಪೋರ್ಟ್ಸ್‌ ಡೆವಲಪ್‌ ಮೆಂಟ್ ಲಿಮಿಟೆಡ್‌ (ಎಫ್‌ಎಸ್‌ಡಿಎಲ್‌) ತನ್ನ ಪ್ರಕಟಣೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದೆ.

ADVERTISEMENT

ಕಂಠೀರವ ಕ್ರೀಡಾಂಗಣದಲ್ಲಿ ಮಾರ್ಚ್‌ 17ರಂದು ರಾತ್ರಿ 8 ಗಂಟೆಗೆ ಟೂರ್ನಿಯ ಅಂತಿಮ ಪಂದ್ಯ ನಡೆಯಲಿದೆ. ಸೆಮಿಫೈನಲ್‌ನಲ್ಲಿ ಬೆಂಗ ಳೂರು ಎಫ್‌ಸಿ , ಎಫ್‌ಸಿ ಗೋವಾ, ಚೆನ್ನೈಯಿನ್ ಎಫ್‌ಸಿ ಮತ್ತು ಎಫ್‌ಸಿ ಪುಣೆ ಸಿಟಿ ತಂಡಗಳು ಪೈಪೋಟಿ ನಡೆಸಲಿವೆ. ಗೆದ್ದ ತಂಡಗಳು ಬೆಂಗಳೂರಿನಲ್ಲಿ ನಡೆಯುವ ಫೈನಲ್‌ನಲ್ಲಿ ಪೈಪೋಟಿ ನಡೆಸಲಿವೆ.

ಇಂದು ಚೆನ್ನೈಯಿನ್‌ – ಎಫ್‌ಸಿ ಗೋವಾ ಹಣಾಹಣಿ: ಗೋವಾ: ಇಂಡಿಯನ್ ಸೂಪರ್ ಲೀಗ್‌ನ (ಐಎಸ್‌ಎಲ್‌) ಎರಡನೇ ಸೆಮಿಫೈನಲ್‌ನ ಮೊದಲ ಲೆಗ್ ಪಂದ್ಯದಲ್ಲಿ ಸೆಣಸಲು ಎಫ್‌ಸಿ ಗೋವಾ ಮತ್ತು ಚೆನ್ನೈಯಿನ್ ಎಫ್‌ಸಿ ತಂಡಗಳು ಸಜ್ಜಾಗಿವೆ. ಇಲ್ಲಿನ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಶುಕ್ರವಾರ ರಾತ್ರಿ ಪಂದ್ಯ ನಡೆಯಲಿದೆ.

ಲೀಗ್ ಹಂತದ ಮೊದಲ ಒಂಬತ್ತು ಪಂದ್ಯಗಳಲ್ಲಿ 22 ಗೋಲು ಗಳಿಸಿ ಮಿಂಚಿದ್ದ ಎಫ್‌ಸಿ ಗೋವಾ ತಂಡ ನಂತರ ಕೆಲವು ಪಂದ್ಯಗಳಲ್ಲಿ ಕಳೆಗುಂದಿತ್ತು. ಆದರೆ ಕೊನೆಯ ಪಂದ್ಯಗಳಲ್ಲಿ ಲಯ ಕಂಡುಕೊಂಡು ಅಂತಿಮ ನಾಲ್ಕರಲ್ಲಿ ಸ್ಥಾನ ಗಳಿಸಲು ಯಶಸ್ವಿಯಾಗಿತ್ತು. ಕೊನೆಯ ಮೂರು ಪಂದ್ಯಗಳಲ್ಲಿ 12 ಗೋಲು ಗಳಿಸಿತ್ತು.

ಈ ಪಂದ್ಯಗಳಲ್ಲಿ ಕೇವಲ ಒಂದು ಗೋಲು ಮಾತ್ರ ಬಿಟ್ಟುಕೊಟ್ಟು ಆಲ್‌ ರೌಂಡ್‌ ಸಾಮರ್ಥ್ಯ ಮೆರೆದಿತ್ತು. ಇದು ಚೆನ್ನೈಯಿನ್ ತಂಡದ ಆತಂಕಕ್ಕೆ ಕಾರಣವಾಗಿದ್ದು, ಗೋವಾ ತಂಡವನ್ನು ಅದರ ತವರಿನಲ್ಲೇ ಮಣಿಸಲು ಹೆಚ್ಚು ಬೆವರು ಹರಿಸುವ ಸವಾಲು ಇದೆ.

ಗೋವಾ ತಂಡದ ಯಶಸ್ಸಿನಲ್ಲಿ ಫೆರಾನ್ ಕೊರೊಮಿನಾಸ್ ಮತ್ತು ಮ್ಯಾನ್ಯುಯೆಲ್ ಲಾನ್ಜರೊಟ್‌ ಮಹತ್ವದ ಪಾತ್ರ ವಹಿಸಿದ್ದಾರೆ. ಇವರಿಬ್ಬರು ಈವರೆಗೆ ಒಟ್ಟು 30 ಗೋಲುಗಳನ್ನು ಬಾರಿಸಿದ್ದಾರೆ.

ಶುಕ್ರವಾರದ ‍‍ಪಂದ್ಯ ದಲ್ಲೂ ಇವರು ಪ್ರಮುಖ ಆಕರ್ಷಣೆಯಾಗಿದ್ದಾರೆ. ತಂಡದ ಇಲ್ಲಿಯವರೆಗಿನ ಸಾಧನೆ ಬಗ್ಗೆ ಕೋಚ್‌ ರೊಬೆರಾ ಖುಷಿ ವ್ಯಕ್ತಪಡಿಸಿದ್ದಾರೆ.

‘ಉತ್ತಮ ಸರಾಸರಿಯಲ್ಲಿ ಗೋಲು ಗಳಿಸಲು ಸಾಧ್ಯವಾಗಿರುವುದು ಸಂತಸದ ವಿಷಯ. ತಂಡ ಆಕ್ರಮಣಕ್ಕೆ ಹೆಚ್ಚು ಒತ್ತು ಕೊಟ್ಟು ಆಡು ತ್ತಿದೆ. ಇದು ಶುಭ ಸೂಚನೆ’ ಎಂದು  ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.