ADVERTISEMENT

ಐಟಿಎಫ್ ಆತಿಥ್ಯಕ್ಕೆ ಬೆಳಗಾವಿ ಸಜ್ಜು

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2012, 19:54 IST
Last Updated 15 ಡಿಸೆಂಬರ್ 2012, 19:54 IST

ಬೆಳಗಾವಿ: ಅಂತರರಾಷ್ಟ್ರೀಯ ಮಟ್ಟದ ಟೆನಿಸ್ ಟೂರ್ನಿಯ ಆತಿಥ್ಯ ವಹಿಸಲು ಬೆಳಗಾವಿ ಸಿದ್ಧವಾಗಿದೆ. ಇಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಟೆನಿಸ್ ಅಂಕಣದಲ್ಲಿ ಇದೇ 17ರಿಂದ 22ರವರೆಗೆ `ಬೆಳಗಾವಿ ಓಪನ್' ಪುರುಷರ ಐಟಿಎಫ್ ಟೂರ್ನಿ ನಡೆಯಲಿದೆ.

ಶನಿವಾರ ಟೂರ್ನಿಯ ಅರ್ಹತಾ ಸುತ್ತಿನ ಪಂದ್ಯಗಳು ಆರಂಭಗೊಂಡಿದ್ದು, ಸೋಮವಾರದಂದು ಟೆನಿಸ್ ಹಬ್ಬಕ್ಕೆ ಅಧಿಕೃತ ಚಾಲನೆ ದೊರೆಯಲಿದೆ. ದಾವಣಗೆರೆ ಹಾಗೂ ಧಾರವಾಡ ಓಪನ್ ಐಟಿಎಫ್ ಟೂರ್ನಿಗಳ ಪ್ರಶಸ್ತಿ ವಿಜೇತ ಹರಿಯಾಣದ ಸನಮ್ ಸಿಂಗ್ ಕಣದಲ್ಲಿದ್ದು, ಹ್ಯಾಟ್ರಿಕ್ ಸಾಧಿಸುವ ಹುಮ್ಮಸ್ಸಿನಲ್ಲಿದ್ದಾರೆ.

ಇವರಿಗೆ ಸ್ಪರ್ಧೆಯೊಡ್ಡಲು ಟೂರ್ನಿಯ ಅಗ್ರ ಶ್ರೇಯಾಂಕಿತ ತಮಿಳುನಾಡಿನ ಶ್ರೀರಾಮ್ ಬಾಲಾಜಿ ಸಿದ್ಧತೆ ನಡೆಸಿದ್ದಾರೆ. ಇವರಲ್ಲದೆ ಎನ್. ವಿಜಯಸುಂದರ್ ಪ್ರಶಾಂತ್, ಅಶ್ವಿನ್ ವಿಜಯರಾಘವನ್, ಕಾಜಾ ವಿನಾಯಕ್ ಶರ್ಮಾ, ಧಾರವಾಡ ಓಪನ್ ಫೈನಲಿಸ್ಟ್ ರಾಮ್‌ಕುಮಾರ್ ರಾಮನಾಥನ್ ಇತರರು ಭಾರತದ ಸ್ಪರ್ಧಿಗಳಾಗಿದ್ದಾರೆ.

ಗ್ರೀಕ್‌ನ ತಿಯಡೊರೊಸ್ ಏಂಜಲಿನೊಸ್, ರಷ್ಯಾದ ಸೆರ್ಗೈ ಕ್ರೊಟಿಯೊಕ್, ನೆದರ್‌ಲ್ಯಾಂಡ್‌ನ ಕೊಲಿನ್ ವ್ಯಾನ್‌ಬೀಮ್, ಜೆರೊನ್ ಬರ್ನಾಡ್, ಸ್ವಿಟ್ಜರ್‌ಲ್ಯಾಂಡ್‌ನ ಲುಕಾ ಮಾರ್ಗರೋಲಿ, ಜರ್ಮನಿಯ ಟಾರ್ಸ್ಟನ್ ವಿಟೊಸ್ಕಾ ಇತರರು ಸಹ 5,55,000 ರೂಪಾಯಿ ಮೊತ್ತದ ಪ್ರಶಸ್ತಿಗಾಗಿ ಸೆಣೆಸಲಿದ್ದಾರೆ.

ಎಟಿಪಿ ಮೆಲುಕು:  2003ರ ಅಕ್ಟೋಬರ್‌ನಲ್ಲಿ ಬೆಳಗಾವಿ ನಗರವು ಎಟಿಪಿ ಟೂರ್ನಿಯ ಆತಿಥ್ಯ ವಹಿಸಿತ್ತು. ಜಿಲ್ಲಾ ಕ್ರೀಡಾಂಗಣದ ಅಂಕಣದಲ್ಲಿ ಅಂದು ನಡೆದ ಟೂರ್ನಿಯಲ್ಲಿ ಅನೇಕ ಖ್ಯಾತನಾಮರು ಸೆಣೆಸಿದ್ದರು. ಟೆನಿಸ್ ತಾರೆಗಳಾದ ಪ್ರಕಾಶ್ ಅಮೃತ್‌ರಾಜ್, ರೋಹನ್ ಬೋಪಣ್ಣ, ಹರ್ಷಾ ಮಂಕಡ್, ಸೋಮದೇವ್ ದೇವವರ್ಮನ್ ಮೊದಲಾದವರು ಕಣದಲ್ಲಿದ್ದರು. ಹಿಂದಿನ ವಾರವಷ್ಟೇ ನಡೆದಿದ್ದ ಧಾರವಾಡ ಎಟಿಪಿ ಚಾಲೆಂಜರ್‌ನಲ್ಲಿ ಪ್ರಶಸ್ತಿ ಎತ್ತಿಹಿಡಿದಿದ್ದ ಅಗ್ರ ಶ್ರೇಯಾಂಕಿತ ಡೆನೈ ಉದೊಮ್‌ಚೊಕ್ ಕೂಡ ಮತ್ತೊಂದು ಪ್ರಶಸ್ತಿಯ ಕನಸಿನಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT