ADVERTISEMENT

ಐಟಿಎಫ್ ಓಪನ್ ಟೆನಿಸ್: ಪ್ರಿಕ್ವಾರ್ಟರ್ ಫೈನಲ್‌ಗೆ ವಿಜಯಂತ್ ಮಲಿಕ್

​ಪ್ರಜಾವಾಣಿ ವಾರ್ತೆ
Published 11 ಜೂನ್ 2012, 19:30 IST
Last Updated 11 ಜೂನ್ 2012, 19:30 IST
ಐಟಿಎಫ್ ಓಪನ್ ಟೆನಿಸ್: ಪ್ರಿಕ್ವಾರ್ಟರ್ ಫೈನಲ್‌ಗೆ ವಿಜಯಂತ್ ಮಲಿಕ್
ಐಟಿಎಫ್ ಓಪನ್ ಟೆನಿಸ್: ಪ್ರಿಕ್ವಾರ್ಟರ್ ಫೈನಲ್‌ಗೆ ವಿಜಯಂತ್ ಮಲಿಕ್   

ಬೆಂಗಳೂರು: ಮೂರನೇ ಶ್ರೇಯಾಂಕದ ಆಟಗಾರ ವಿಜಯಂತ್ ಮಲಿಕ್ ಸೋಮವಾರ ಇಲ್ಲಿ ಆರಂಭವಾದ 5.5 ಲಕ್ಷ ರೂಪಾಯಿ ಬಹುಮಾನ ಮೊತ್ತದ ಐಟಿಎಫ್ ಪುರುಷರ ಓಪನ್ ಟೆನಿಸ್ ಟೂರ್ನಿಯ ಸಿಂಗಲ್ಸ್ ವಿಭಾಗದಲ್ಲಿ ಪ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.

ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆ (ಕೆಎಸ್‌ಎಲ್‌ಟಿಎ) ಕೋರ್ಟ್‌ನಲ್ಲಿ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ವಿಜಯಂತ್ 6-1, 6-2ರಲ್ಲಿ ವಿನೋದ್ ಗೌಡ ಅವರನ್ನು ಪರಾಭವಗೊಳಿಸಿದರು.

ವಿಜಯಂತ್ ಮೊದಲ ಸೆಟ್‌ನಲ್ಲಿ ಸತತ ಐದು ಗೇಮ್ ಗೆದ್ದರು. ಎರಡನೇ ಹಾಗೂ ನಾಲ್ಕನೇ ಗೇಮ್‌ನಲ್ಲಿ ಎದುರಾಳಿಯ ಸರ್ವ್ ಬ್ರೇಕ್ ಮಾಡಿ ಮುನ್ನಡೆದರು. ಎರಡನೇ ಸೆಟ್‌ನಲ್ಲಿಯೂ ಮಿಂಚಿನಆಟ ಪ್ರದರ್ಶಿಸಿದ ಅವರು ಐದು ಹಾಗೂ ಏಳನೇ ಗೇಮ್‌ನಲ್ಲಿ ವಿನೋದ್ ಅವರ ಸರ್ವ್ ಬ್ರೇಕ್ ಮಾಡಿ ಮುಂದಿನ ಸುತ್ತಿನಲ್ಲಿ ಆಡಲು ಅರ್ಹತೆ ಪಡೆದುಕೊಂಡರು. ಈ ಪಂದ್ಯ 73 ನಿಮಿಷ ನಡೆಯಿತು.

ಅಗ್ರ ಶ್ರೇಯಾಂಕದ ಆಟಗಾರ ಚೀನಾ ತೈಪೆಯ ಟಿ ಚೆನ್ ಕೂಡ ಶುಭಾರಂಭ ಮಾಡಿದರು. ಅವರು 6-2, 6-1ರಲ್ಲಿ ಆಸ್ಟ್ರೇಲಿಯಾದ ಸ್ಕಾಟ್ ಪ್ಯೂಡಿನಾಸ್ ಎದುರು ಗೆದ್ದರು. ಇದಕ್ಕಾಗಿ ಅವರು ಕೇವಲ 55 ನಿಮಿಷ ತೆಗೆದುಕೊಂಡರು.

ಆದರೆ ಎಂಟನೇ ಶ್ರೇಯಾಂಕದ ಆಟಗಾರ ಇಟಲಿಯ ಫ್ರಾನ್ಸೆಸ್ಕೊ ವಿರಾರ್ಡೊ ಆಘಾತ ಅನುಭವಿಸಿದರು. ಅವರು 3-6, 6-2, 6-7ರಲ್ಲಿ ಥಾಯ್ಲೆಂಡ್‌ನ ವಾರಿಟ್ ಸೊರ್ನ್‌ಬುಟ್ನಾರ್ಕ್‌ಗೆ ಶರಣಾದರು. ಸಾಕಷ್ಟು ಪೈಪೋಟಿಗೆ ಕಾರಣವಾದ ಪಂದ್ಯದಲ್ಲಿ ಶ್ರೇಯಾಂಕ ರಹಿತ ಆಟಗಾರ ವಾರಿಟ್ ಮೇಲುಗೈ ಸಾಧಿಸಿದರು.

ಸಿಂಗಲ್ಸ್‌ನ ಇನ್ನುಳಿದ ಪಂದ್ಯಗಳಲ್ಲಿ ಅಭಿಜಿತ್ ತಿವಾರಿ 6-1, 6-2ರಲ್ಲಿ ಕೃಷಿಕ್ ದಿವಾಕರ್ ಎದುರೂ, ಕುನಾಲ್ ಆನಂದ್ 6-4, 6-3ರಲ್ಲಿ ಆದಿತ್ಯ ತಿವಾರಿ ವಿರುದ್ಧವೂ, ಥಾಯ್ಲೆಂಡ್‌ನ ಕಿಟ್ಟಿಫೋಂಗ್ ವಾಚಿರಮನೊವಾಂಗ್ 6-4, 6-2ರಲ್ಲಿ ಯೋಗೇಶ್ ಫೋಗಟ್ ಮೇಲೂ ಗೆದ್ದರು.

ಡಬಲ್ಸ್ ವಿಭಾಗದ ಪಂದ್ಯಗಳಲ್ಲಿ ವಿಜಯಂತ್ ಮಲಿಕ್ ಹಾಗೂ ಕಾಜಾ ವಿನಾಯಕ್ ಶರ್ಮ 6-1, 6-2ರಲ್ಲಿ ಕೃಷ್ಣ ಹಾಗೂ ವಾಕಿಲ್ ಜೋಡಿಯನ್ನು ಮಣಿಸಿದರು. ಮತ್ತೊಂದು ಪಂದ್ಯದಲ್ಲಿ ಕೃಷಿಕ್ ದಿವಾಕರ್ ಹಾಗೂ ಸಾಗರ್ ಮಂಜಣ್ಣ 6-1, 3-6, 10-6ರಲ್ಲಿ ರವಿಶಂಕರ್-ಗಂಗಾ ಸಿಂಗ್ ಎದುರು ಜಯ ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.