ADVERTISEMENT

ಐಟಿಎಫ್ ಟೆನಿಸ್; ಇಂದಿನಿಂದ ಪ್ರಧಾನ ಹಂತದ ಪಂದ್ಯಗಳು

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2012, 16:25 IST
Last Updated 18 ಮಾರ್ಚ್ 2012, 16:25 IST
ಐಟಿಎಫ್ ಟೆನಿಸ್; ಇಂದಿನಿಂದ ಪ್ರಧಾನ ಹಂತದ ಪಂದ್ಯಗಳು
ಐಟಿಎಫ್ ಟೆನಿಸ್; ಇಂದಿನಿಂದ ಪ್ರಧಾನ ಹಂತದ ಪಂದ್ಯಗಳು   

ಬೆಂಗಳೂರು: ಸ್ಥಳೀಯ ಪ್ರತಿಭೆಗಳಾದ ಸ್ಫೂರ್ತಿ ಶಿವಲಿಂಗಯ್ಯ ಹಾಗೂ ಶರ್ಮದಾ ಬಾಲು ಸೋಮವಾರ ಆರಂಭವಾಗುವ ಕ್ಯೂನೆಟ್ ಐಟಿಎಫ್ ಟೆನಿಸ್ ಟೂರ್ನಿಯ ಮೊದಲ ಸುತ್ತಿನಲ್ಲಿ ಪ್ರಬಲ ಸವಾಲನ್ನು ಎದುರಿಸಲಿದ್ದಾರೆ.

ನಗರದ ಕೆಎಸ್‌ಎಲ್‌ಟಿಎ ಕೋರ್ಟ್‌ನಲ್ಲಿ ಪಂದ್ಯಗಳು ನಡೆಯಲಿವೆ. 25,000 ಡಾಲರ್ ಬಹುಮಾನ ಹೊಂದಿರುವ ಈ ಟೂರ್ನಿಯ ಡಬಲ್ಸ್ ವಿಭಾಗದಲ್ಲಿ ಸ್ಫೂರ್ತಿ ಜರ್ಮನಿಯ ಮೈಕೆಲಾ ಫ್ರಾಲಿಕಾ ಜೊತೆ ಕಣಕ್ಕಿಳಿಲಿದ್ದಾರೆ. ಈ ಜೋಡಿ ಇಸ್ರೇಲ್‌ನ ಡೇನಿಜ್ ಕಜುನಿಕು ಮತ್ತು ಚೀನಾದ ಯಾ ಜಾವೊ ಸವಾಲನ್ನು ಎದುರಿಸಲಿದ್ದಾರೆ.

ಬೆಂಗಳೂರಿನ ಇನ್ನೊಬ್ಬ ಆಟಗಾರ್ತಿ ಶರ್ಮದಾ ಡಬಲ್ಸ್‌ನಲ್ಲಿ ಸೆದಾ ಅರಂತೆಕಿನ್ ಜೊತೆ ಆಡಲಿದ್ದಾರೆ. ಇವರು ಕೊರಿಯಾದ ಸುಂಗ್ ಹೇಯ್ ಹನ್ ಹಾಗೂ ಇಸ್ರೇಲ್‌ನ ಕೇರನ್ ಶಲಾಮೊ ಎದುರು ಆಡಲಿದ್ದಾರೆ.

ಭಾರತದ ಪ್ರೇರಣಾ ಭಾಂಬ್ರಿ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಬೆಲ್ಜಿಯಂನ ತಮರ‌್ಯಾನ್ ಹೆಂಡ್ಲೆರ್ ಜೊತೆ ಸೆಣಸಲಿದ್ದಾರೆ. ತವರು ನೆಲದಲ್ಲಿಯೇ ಈ ಟೂರ್ನಿಯ ನಡೆಯಲಿರುವ ಕಾರಣ ಈ ಇಬ್ಬರೂ ಸ್ಪರ್ಧಿಗಳು ಉತ್ತಮ ಪ್ರದರ್ಶನ ನೀಡುವ ಒತ್ತಡಲಿದ್ದಾರೆ.

ರಿಷಿಕಾ ಸುಂಕರ, ನಿಧಿ ಚಿಲುಮುಲ, ಅಂಕಿತಾ ರೈನಾ ಅವರು ಅರ್ಹತಾ ಸುತ್ತಿನಲ್ಲಿ ಆಡಿ ಪ್ರಧಾನ ಹಂತ ಪ್ರವೇಶಿಸಿದ್ದಾರೆ. ಇವರು ಭಾರತದ ಭರವಸೆ ಎನಿಸಿದ್ದಾರೆ. ಸ್ಫೂರ್ತಿ, ಶರ್ಮದಾ  ಸೇರಿದಂತೆ ಒಟ್ಟು ನಾಲ್ಕು ಆಟಗಾರ್ತಿಯರು `ವೈಲ್ಡ್ ಕಾರ್ಡ್~ ಪ್ರವೇಶ ಪಡೆದಿದ್ದಾರೆ.

ಪ್ರಧಾನ ಹಂತಕ್ಕೆ ರಿಷಿಕಾ: ಭಾರತದ ರಿಷಿಕಾ ಶಂಕರ ಪ್ರಧಾನ ಹಂತ ಪ್ರವೇಶಿಸುವಲ್ಲಿ ಯಶ ಕಂಡಿದ್ದಾರೆ. ಭಾನುವಾರ ನಡೆದ ಅರ್ಹತಾ ಸುತ್ತಿನ ಪಂದ್ಯದಲ್ಲಿ ರಿಷಿಕಾ 6-0, 6-2 ನೇರ ಸೆಟ್‌ಗಳಿಂದ ಸೆದಾ ಅರಂತೆಕಿನ್ ಎದುರು ಜಯ ಪಡೆದರು. ಎರಡೂ ಸೆಟ್‌ಗಳಲ್ಲಿ ರಿಷಿಕಾಗೆ ಪ್ರಬಲ ಸವಾಲು ಎದುರಾಗಲಿಲ್ಲ.
ಅರ್ಹತಾ ಹಂತದಲ್ಲಿ ಯಶಸ್ಸು ಕಾಣಲು ಆತಿಥೇಯ ದೇಶದ ರುಷ್ಮಿ ಚಕ್ರವರ್ತಿಗೆ ಸಾಧ್ಯವಾಗಲಿಲ್ಲ.

ಥಾಯ್ಲೆಂಡ್‌ನ ನುಂಗನಾದ್ ವಾನ್‌ಸುಕಾ 6-1, 6-1ರಲ್ಲಿ ರುಷ್ಮಿ ಅವರನ್ನು ಮಣಿಸಿದರು.
ಅರ್ಹತಾ ಸುತ್ತಿನ ಫೈನಲ್‌ನಲ್ಲಿ ಭಾರತದ ನಿಧಿ 6-2, 2-6, 6-3ರಲ್ಲಿ ಇಟಲಿಯ ಮಾರ್ಟಿನಾ ಸಿಕ್ಕೊಟ್ಟಿ ಎದುರು ಜಯ ಪಡೆದು ಪ್ರಧಾನ ಹಂತ ಪ್ರವೇಶಿಸಿದರು. ಮೊದಲ ಸುತ್ತಿನಲ್ಲಿ ಈ ಆಟಗಾರ್ತಿ ಮಿಲನಿಯಾ ಕ್ಲಾಫಿನರ್ ಎದುರು ಆಡಲಿದ್ದಾರೆ.

ಇಂದು ಉದ್ಘಾಟನೆ: ಕೆಎಸ್‌ಎಲ್‌ಟಿಎ ಕ್ರೀಡಾಂಗಣದಲ್ಲಿ ಬೆಳಿಗ್ಗೆ 9ಗಂಟೆಗೆ ಟೂರ್ನಿಯ ಉದ್ಘಾಟನೆ ನಡೆಯಲಿದೆ. ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಅವರು ಟೂರ್ನಿಗೆ ಚಾಲನೆ ನೀಡಲಿದ್ದಾರೆ. ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎಂ. ಲಕ್ಷಿನಾರಾಯಣ, ಕ್ಯೂನೆಟ್‌ನ ಸಿಇಒ ಸುರೇಶ್ ತಿಮಿರಿ ಮುಖ್ಯ ಅತಿಥಿಗಳಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.