ADVERTISEMENT

ಐಪಿಎಲ್‌ಗೆ ವರ್ಣರಂಜಿತ ಚಾಲನೆ, ಹಾಡು ಕುಣಿತಗಳ ಪ್ರವಾಹ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2012, 19:30 IST
Last Updated 3 ಏಪ್ರಿಲ್ 2012, 19:30 IST

ಚೆನ್ನೈ (ಪಿಟಿಐ): ಹಾಡು ಕುಣಿತಗಳ ಮಹಾಸಂಭ್ರಮ ಧರೆಗಿಳಿದಂತಿತ್ತು... ಐದನೇ ಐಪಿಎಲ್ ಕ್ರಿಕೆಟ್ ಮಹೋತ್ಸವಕ್ಕೆ ಕಿನ್ನರ ಲೋಕದ ವೈಭವದೋಪಾದಿಯ ಸ್ವಾಗತ ತೆರೆದುಕೊಂಡಿತ್ತು. ಬಾನಬಣ್ಣದ ವೇದಿಕೆಯ ಮೇಲೆ ಹರ್ಷೋತ್ಸಾಹದ ಪ್ರವಾಹ ಹರಿದಂತಿತ್ತು. ಬಾಲಿವುಡ್ ತಾರೆಯರ ದಂಡು ತಮಿಳರ ನೆಲದಲ್ಲಿ ತಮ್ಮದೇ ವಿಶಿಷ್ಟ ಛಾಪು ಮೂಡಿಸಿತ್ತು.

ಅಮಿತಾಭ್ ಬಚ್ಚನ್ ತಮ್ಮದೇ ಶೈಲಿಯಲ್ಲಿ ಕವನವೊಂದನ್ನು ಹೇಳುತ್ತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರೆ, ನಟಿ ಪ್ರಿಯಾಂಕಾ ಚೋಪ್ರಾ ತಮ್ಮ ಮನಮೋಹಕ ನೃತ್ಯದಿಂದ ಇಡೀ ಸಮಾರಂಭದಲ್ಲಿ ವಿದ್ಯುತ್ ಸಂಚಲನ ತಂದರು.

ಕಪ್ಪು ಬಿಳುಪು ಚಿತ್ತಾರದ ಉಡುಪು ಧರಿಸಿದ್ದ ಪ್ರಿಯಾಂಕಾ `ಆಜ್ ಕಿ ರಾತ್...~ ಹಾಡಿಗೆ ಹೆಜ್ಜೆ ಇಡುತ್ತಾ ವೇದಿಕೆಯಿಂದ ಪ್ರೇಕ್ಷಕರತ್ತ ನಡೆದಾಗ ತಾಳ ಹಾಕದವರೇ ಇಲ್ಲ. ಹರಭಜನ್ ಅವರಂತೂ ಪ್ರಿಯಾಂಕಾ ಇಟ್ಟ ಹೆಜ್ಜೆಯ ಮೇಲೆ ತಾವೂ ಹೆಜ್ಜೆ ಇಡುತ್ತಾ ಕುಣಿದೇ ಬಿಟ್ಟರು.
 
ಆಗ ಸಹಸ್ರಾರು ಪ್ರೇಕ್ಷಕರು ಚಪ್ಪಾಳೆಯ ತಾಳ ಹಾಕಿದರು. ಕರೀನಾ ಕಪೂರ್, ಪ್ರಭುದೇವ್, ಸಲ್ಮಾನ್ ಖಾನ್ ಪ್ರೇಕ್ಷಕರನ್ನು ಮಾಯಾಲೋಕಕ್ಕೆ ಕೊಂಡೊಯ್ದರು.

ಹೌದು, 9 ತಂಡಗಳು ಪಾಲ್ಗೊಳ್ಳುತ್ತಿರುವ ಈ ಮಹತ್ವದ ಕ್ರಿಕೆಟ್ ಉತ್ಸವಕ್ಕೆ ಹಾಡು ಹಬ್ಬಗಳ ತಳಿರುತೋರಣ ಮನಸೂರೆಗೊಂಡಿತ್ತು. 54 ದಿನಗಳ ಕಾಲ 12 ಕೇಂದ್ರಗಳಲ್ಲಿ 76 ಪಂದ್ಯಗಳು ನಡೆಯಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.