ADVERTISEMENT

ಐಪಿಎಲ್‌ನಿಂದ ಹೊರಬಿದ್ದ ಆರ್‌ಸಿಬಿ

​ಪ್ರಜಾವಾಣಿ ವಾರ್ತೆ
Published 20 ಮೇ 2012, 19:30 IST
Last Updated 20 ಮೇ 2012, 19:30 IST
ಐಪಿಎಲ್‌ನಿಂದ ಹೊರಬಿದ್ದ ಆರ್‌ಸಿಬಿ
ಐಪಿಎಲ್‌ನಿಂದ ಹೊರಬಿದ್ದ ಆರ್‌ಸಿಬಿ   

ಹೈದರಾಬಾದ್ (ಪಿಟಿಐ): ಕನಸಿನ ಗೋಪುರ ಕುಸಿದು ಬಿದ್ದಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ಐಪಿಎಲ್ ಟೂರ್ನಿಯ ಪ್ಲೇ ಆಫ್‌ನಲ್ಲಿ ಆಡುವುದನ್ನು ನೋಡಲು ಕನಸು ಕಟ್ಟಿಕೊಂಡಿದ್ದ ಅದೆಷ್ಟೊ ಅಭಿಮಾನಿಗಳ ಆಸೆ ಛಿದ್ರವಾಗಿದೆ.

ಏಕೆಂದರೆ ಐಪಿಎಲ್ ಐದನೇ ಆವೃತ್ತಿಯಿಂದ ಆರ್‌ಸಿಬಿ ಹೊರಬಿದ್ದಿದೆ. ಉಪ್ಪಳದ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ತಮ್ಮ ಕೊನೆಯ ಲೀಗ್ ಪಂದ್ಯದಲ್ಲಿ ಡೆಕ್ಕನ್ ಚಾರ್ಜರ್ಸ್ ಹೈದರಾಬಾದ್ ಎದುರು ಸೋಲು ಕಂಡಿದ್ದು ಈ ಆಘಾತಕ್ಕೆ ಕಾರಣ.

`ಮಾಡು ಇಲ್ಲವೇ ಮಡಿ~ ಪಂದ್ಯದಲ್ಲಿ ಡೆಕ್ಕನ್ ಚಾರ್ಜರ್ಸ್ ನೀಡಿದ 133 ರನ್‌ಗಳ ಅಲ್ಪ ಗುರಿಯನ್ನು ಮುಟ್ಟಲು ಚಾಲೆಂಜರ್ಸ್ ಬಳಗಕ್ಕೆ ಸಾಧ್ಯವಾಗಲಿಲ್ಲ. ಇದಕ್ಕೆ ಕಾರಣ ವೇಗಿ ಡೇಲ್ ಸ್ಟೇಯ್ನ (4-0-8-3) ಅವರ ಅಮೋಘ ಬೌಲಿಂಗ್ ದಾಳಿ.

ಈ ಪರಿಣಾಮ ಚಾಲೆಂಜರ್ಸ್ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 123 ರನ್ ಗಳಿಸುವಷ್ಟರಲ್ಲಿ ಸುಸ್ತೆದ್ದು ಹೋಯಿತು. ಈ ತಂಡದವರು ಸೋಲು ಕಂಡಿದ್ದು ಚೆನ್ನೈ ಸೂಪರ್ ಕಿಂಗ್ಸ್ ಬಳಗದ ಖುಷಿಗೆ ಕಾರಣವಾಯಿತು. ಏಕೆಂದರೆ ಪ್ಲೇ ಆಫ್ ಹಂತದಲ್ಲಿ ಆಡಲು ಮಹೇಂದ್ರ ಸಿಂಗ್ ದೋನಿ ಬಳಗದ ಹಾದಿ ಸುಗಮವಾಯಿತು.
ಉಭಯ ತಂಡಗಳದ್ದು 17 ಪಾಯಿಂಟ್. ಆದರೆ ರನ್‌ರೇಟ್‌ನಲ್ಲಿ ಸೂಪರ್ ಕಿಂಗ್ಸ್ ಮುಂದಿದೆ.

ಡೆಲ್ಲಿ ಡೇರ್‌ಡೆವಿಲ್ಸ್, ಕೋಲ್ಕತ್ತ ನೈಟ್ ರೈಡರ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಈಗಾಗಲೇ ಪ್ಲೇ ಆಫ್ ಹಂತ ಪ್ರವೇಶಿಸಿವೆ. ಮೇ 23ರಂದು ಬೆಂಗಳೂರಿನಲ್ಲಿ ನಡೆಯಲಿರುವ ಪ್ಲೇ ಆಫ್‌ನ ಎಲಿಮಿನೇಟರ್ ಹೋರಾಟದಲ್ಲಿ ಸೂಪರ್ ಕಿಂಗ್ಸ್ ಹಾಗೂ   ಮುಂಬೈ ಇಂಡಿಯನ್ಸ್ ಪೈಪೋಟಿ ನಡೆಸಲಿವೆ.

ಆದರೆ ಇದುವರೆಗೆ ಉತ್ತಮ ಪ್ರದರ್ಶನ ತೋರುತ್ತಾ ಆಸೆಗಳ ಅರಮನೆ ಕಟ್ಟಿದ್ದ ಚಾಲೆಂಜರ್ಸ್ ಬಹುಮುಖ್ಯ ಹಂತದಲ್ಲಿ ಎಡವಟ್ಟು ಮಾಡಿಕೊಂಡಿತು. ಸುಲಭ ಗುರಿ ಎದುರು ಒತ್ತಡಕ್ಕೆ ಒಳಗಾಗಿ ಆಘಾತವನ್ನು ಮೈಮೇಲೆ ಎಳೆದುಕೊಂಡಿತು.

ಮುಖ್ಯವಾಗಿ ಸ್ಟೇಯ್ನ ಈ ಪಂದ್ಯದಲ್ಲಿ ಸೇಡು ತೀರಿಸಿಕೊಂಡರು. ಏಕೆಂದರೆ ಉದ್ಯಾನ ನಗರಿಯಲ್ಲಿ ನಡೆದಿದ್ದ ಹಿಂದಿನ ಮುಖಾಮುಖಿಯಲ್ಲಿ ಡೆಕ್ಕನ್ ಚಾರ್ಜರ್ಸ್‌ಗೆ ಆಘಾತ ನೀಡಿದ್ದು ಎಬಿ ಡಿವಿಲಿಯರ್ಸ್. ಅವರು ಸ್ಟೇಯ್ನ ಹಾಕಿದ್ದ ಒಂದೇ ಓವರ್‌ನಲ್ಲಿ 23 ರನ್ ಚಚ್ಚಿದ್ದರು. ಆ ಸೇಡು ತೀರಿಸಿಕೊಳ್ಳಲು ಕಾಯುತ್ತಿದ್ದ ಸ್ಟೇಯ್ನ ಅದ್ಭುತ   ಫಾರ್ಮ್‌ನಲ್ಲಿದ್ದ ಕ್ರಿಸ್ ಗೇಲ್ ಹಾಗೂ ತಿಲಕರತ್ನೆ ದಿಲ್ಶಾನ್ ಅವರ ವಿಕೆಟ್ ಪಡೆದು ಈ ಪಂದ್ಯದಲ್ಲಿ 9 ರನ್‌ಗಳ ಗೆಲುವಿಗೆ ಕಾರಣರಾದರು.

ಕೇವಲ 10 ಎಸೆತಗಳಲ್ಲಿ ಎರಡು ಸಿಕ್ಸರ್ ಸಮೇತ 27 ರನ್ ಗಳಿಸಿದ್ದ ಗೇಲ್ ಉತ್ತಮ ಆರಂಭವನ್ನೇ ನೀಡಿದ್ದರು. ಆದರೆ 6 ರನ್‌ಗಳ ಅಂತರದಲ್ಲಿ ಸ್ಟೇಯ್ನ ಎರಡು ವಿಕೆಟ್ ಪಡೆದಿದ್ದು ಆರ್‌ಸಿಬಿಗೆ ಮಾರಕವಾಗಿ ಪರಿಣಮಿಸಿತು. ಸೌರಭ್ ತಿವಾರಿ ಸ್ನಾಯು ಸೆಳೆತಕ್ಕೆ ಒಳಗಾಗಿದ್ದು ಮತ್ತಷ್ಟು ಆತಂಕಕ್ಕೆ ಕಾರಣವಾಯಿತು. ಆದರೆ ನಾಯಕ ವಿರಾಟ್ ಕೊಹ್ಲಿ (42; 40 ಎ, 2 ಬೌಂ, 2 ಸಿ.) ಕೊಂಚ ಭರವಸೆ ತುಂಬಿದರು.

ಸುಧಾರಿಸಿಕೊಂಡು ಬಂದ ತಿವಾರಿ (30; 27 ಎ.) ಸ್ವಲ್ಪ ಹೊತ್ತು ತಂಡಕ್ಕೆ ಆಸರೆಯಾಗಿದ್ದರು.
ಆದರೆ ಆಶಿಶ್ ರೆಡ್ಡಿ ಹಾಗೂ ಅಮಿತ್ ಮಿಶ್ರಾ ಈ ಹಂತದಲ್ಲಿ ಎದುರಾಳಿಗೆ ಬಲವಾದ ಪೆಟ್ಟು ನೀಡಿದರು. 18 ರನ್ ಸೇರಿಸುವಷ್ಟರಲ್ಲಿ ಆರ್‌ಸಿಬಿ ಐದು ವಿಕೆಟ್ ಕಳೆದುಕೊಂಡಿತು.
 
ಈ ಗೆಲುವಿನಿಂದ ಚಾರ್ಜರ್ಸ್‌ಗೆ (9 ಪಾಯಿಂಟ್ಸ್) ಯಾವುದೇ ಲಾಭ ಇರಲಿಲ್ಲ. ಆದರೆ ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಕುಸಿಯುವುದರಿಂದ ಪಾರಾಯಿತು. ಪುಣೆ ವಾರಿಯರ್ಸ್ (8ಪಾಯಿಂಟ್ಸ್) ಕೊನೆಯ ಸ್ಥಾನಕ್ಕೆ ಕುಸಿಯಿತು.

ಟಾಸ್ ಗೆದ್ದು ಆತಿಥೇಯರಿಗೆ ಬ್ಯಾಟಿಂಗ್ ಆಹ್ವಾನ ನೀಡಿದ ಆರ್‌ಸಿಬಿ ಕ್ರಮ ಸರಿಯಾಗಿತ್ತು. ಏಕೆಂದರೆ ಬಿಗು ಬೌಲಿಂಗ್ ದಾಳಿ ಕಾರಣ ಜಾರ್ಜರ್ಸ್ ಹೆಚ್ಚು ಮೊತ್ತ ಗಳಿಸಲು ಸಾಧ್ಯವಾಗಲಿಲ್ಲ. ಆದರೆ ಜೀನ್ ಪಾಲ್ ಡುಮಿನಿ (74; 53 ಎ, 4 ಬೌ, 5 ಸಿ.) ಆಟವನ್ನು ಮರೆಯುವಂತಿಲ್ಲ.

ಸ್ಕೋರ್ ವಿವರ:
ಡೆಕ್ಕನ್ ಚಾರ್ಜರ್ಸ್ ಹೈದರಾಬಾದ್ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 132

ಶಿಖರ್ ಧವನ್ ಬಿ ಜಹೀರ್ ಖಾನ್   05
ಅಕ್ಷತ್ ರೆಡ್ಡಿ ಸಿ ಡಿವಿಲಿಯರ್ಸ್ ಬಿ ಆರ್.ವಿನಯ್  07
ಕುಮಾರ ಸಂಗಕ್ಕಾರ ಸಿ ಆರ್.ವಿನಯ್ ಬಿ ಮುರಳೀಧರನ್  15
ಕೆಮರೂನ್ ವೈಟ್ ಸಿ ಮಯಾಂಕ್ ಬಿ ಪರಮೇಶ್ವರನ್  01
ಜೆ.ಪಿ. ಡುಮಿನಿ ಸಿ ಸಬ್ (ಅಪ್ಪಣ್ಣ) ಬಿ ಜಹೀರ್ ಖಾನ್  74
ಪಾರ್ಥಿವ್ ಪಟೇಲ್ ಸಿ ಗೇಲ್ ಬಿ ಆರ್.ವಿನಯ್ ಕುಮಾರ್  16
ಆಶಿಶ್ ರೆಡ್ಡಿ ಬಿ ಆರ್.ವಿನಯ್ ಕುಮಾರ್  04
ಡೇಲ್ ಸ್ಟೇಯ್ನ ಔಟಾಗದೆ  00
ಇತರೆ (ಬೈ-1, ಲೆಗ್‌ಬೈ-5, ವೈಡ್-4)  10
ವಿಕೆಟ್ ಪತನ: 1-6 (ಧವನ್; 0.6); 2-19 (ಅಕ್ಷತ್; 3.3); 3-20 (ವೈಟ್; 4.2); 4-51 (ಸಂಗಕ್ಕಾರ; 11.1): 5-122 (ಡುಮಿನಿ; 18.5); 6-132 (ಪಾರ್ಥಿವ್; 19.5); 7-132 (ಆಶಿಶ್; 19.6)
ಬೌಲಿಂಗ್: ಜಹೀರ್ ಖಾನ್ 4-0-30-2, ಆರ್.ವಿನಯ್ ಕುಮಾರ್ 4-0-22-3 (ವೈಡ್-2), ಪಿ.ಪರಮೇಶ್ವರನ್ 3-0-12-1, ಮುತ್ತಯ್ಯ ಮುರಳೀಧರನ್ 4-0-30-1 (ವೈಡ್-1), ಹರ್ಷಲ್ ಪಟೇಲ್ 4-0-26-0, ತಿಲಕರತ್ನೆ ದಿಲ್ಶಾನ್ 1-0-6-0 (ವೈಡ್-1).

ರಾಯಲ್ ಚಾಲೆಂಜರ್ಸ್ ಬೆಂಗಳೂರು 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 123
ಕ್ರಿಸ್ ಗೇಲ್ ಬಿ ಡೇಲ್ ಸ್ಟೇಯ್ನ  27
ತಿಲಕರತ್ನೆ ದಿಲ್ಶಾನ್ ಎಲ್‌ಬಿಡಬ್ಲ್ಯು ಬಿ ಡೇಲ್ ಸ್ಟೇಯ್ನ  04
ವಿರಾಟ್ ಕೊಹ್ಲಿ ಸಿ ಗೋನಿ ಬಿ ಆಶೀಶ್ ರೆಡ್ಡಿ  42
ಸೌರಭ್ ತಿವಾರಿ ಸಿ ಕುಮಾರ ಸಂಗಕ್ಕಾರ ಬಿ ಪ್ರತಾಪ್ ಸಿಂಗ್ 30
ಡಿವಿಲಿಯರ್ಸ್ ಸಿ ಡುಮಿನಿ ಬಿ ಅಮಿತ್ ಮಿಶ್ರಾ   04
ಮಯಾಂಕ್ ಅಗರ್‌ವಾಲ್ ಬಿ ಅಮಿತ್ ಮಿಶ್ರಾ  01
ಜಹೀರ್ ಖಾನ್ ಬಿ ಡೇಲ್ ಸ್ಟೇಯ್ನ   00
ಆರ್.ವಿನಯ್ ಕುಮಾರ್ ಸಿ ಡುಮಿನಿ ಬಿ ಆಶೀಶ್ ರೆಡ್ಡಿ  07
ಹರ್ಷಲ್ ಪಟೇಲ್ ಔಟಾಗದೆ  05
ಮುತ್ತಯ್ಯ ಮುರಳೀಧರನ್ ಸಿ ಡುಮಿನಿ ಬಿ ಆಶೀಶ್ ರೆಡ್ಡಿ  00
ಪಿ.ಪರಮೇಶ್ವರನ್ ಔಟಾಗದೆ  00
ಇತರೆ (ವೈಡ್-3)  03
ವಿಕೆಟ್ ಪತನ: 1-30 (ಗೇಲ್; 2.5); 2-36 (ದಿಲ್ಶಾನ್; 4.3); 2-40* (ತಿವಾರಿ, ಗಾಯಗೊಂಡು ನಿವೃತ್ತಿ; 5.3); 3-55 (ಡಿವಿಲಿಯರ್ಸ್; 9.2); 4-57 (ಅಗರ್‌ವಾಲ್; 9.5); 5-103 (ಕೊಹ್ಲಿ; 15.6); 6-104 (ಜಹೀರ್; 16.5); 7-111 (ತಿವಾರಿ; 18.1); 8-120 (ವಿನಯ್; 19.2); 9-121 (ಮುರಳೀಧರನ್; 19.4)
ಬೌಲಿಂಗ್: ಡೇಲ್ ಸ್ಟೇಯ್ನ 4-0-8-3, ಮನ್‌ಪ್ರೀತ್ ಗೋನಿ 4-0-38-0 (ವೈಡ್-2), ವಿ.ಪ್ರತಾಪ್ ಸಿಂಗ್ 4-0-26-1, ಅಮಿತ್ ಮಿಶ್ರಾ 4-0-26-2, ಆಶೀಶ್ ರೆಡ್ಡಿ 4-0-25-3 (ವೈಡ್-1).
ಫಲಿತಾಂಶ: ಡೆಕ್ಕನ್ ಚಾರ್ಜರ್ಸ್‌ಗೆ 9 ರನ್ ಜಯ. ಪಂದ್ಯ ಶ್ರೇಷ್ಠ: ಡೇಲ್ ಸ್ಟೇಯ್ನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.