ADVERTISEMENT

ಐಸಿಸಿ ಅಂಪೈರ್ ಸಮಿತಿಯಿಂದ ರವೂಫ್ ಹೊರಕ್ಕೆ

ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಭಾಗಿಯಾದ ಆರೋಪ

​ಪ್ರಜಾವಾಣಿ ವಾರ್ತೆ
Published 25 ಜೂನ್ 2013, 19:59 IST
Last Updated 25 ಜೂನ್ 2013, 19:59 IST

ಲಂಡನ್ (ಪಿಟಿಐ/ಐಎಎನ್‌ಎಸ್): ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಭಾಗಿಯಾದ ಆರೋಪದ ಕುರಿತು ತನಿಖೆ ಎದುರಿಸುತ್ತಿರುವ ಪಾಕಿಸ್ತಾನದ ಅಂಪೈರ್ ಅಸಾದ್ ರವೂಫ್ ಅವರನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಅಂಪೈರ್‌ಗಳ ಎಲೈಟ್ ಸಮಿತಿಯಿಂದ ಕೈಬಿಟ್ಟಿದೆ.

ಇದರ ಜೊತೆಗೆ ನ್ಯೂಜಿಲೆಂಡ್‌ನ ಬಿಲಿ ಬೌಡನ್ ಅವರನ್ನೂ ಸಮಿತಿ ಹೊರ ಹಾಕಿದೆ. ಅಂಪೈರ್‌ಗಳ ಕಾರ್ಯನಿರ್ವಹಣಾ ವಾರ್ಷಿಕಾ ಪರಿಶೀಲನಾ ಸಭೆಯಲ್ಲಿ ಸಮಿತಿ ಈ ತೀರ್ಮಾನ ಕೈಗೊಂಡಿದೆ. ಈ ಸ್ಥಾನಗಳಿಗೆ ಮಾಜಿ ಕ್ರಿಕೆಟಿಗರಾದ ಇಂಗ್ಲೆಂಡ್‌ನ ರಿಚರ್ಡ್ ಕೇಥಿ ಇಲ್ಲಿಂಗ್‌ವರ್ಥ್ ಮತ್ತು ಆಸ್ಟ್ರೇಲಿಯಾದ ಪಾಲ್ ರಿಫೆಲ್ ಅವರನ್ನು ಸೇರಿಸಿಕೊಳ್ಳಲಾಗಿದೆ.

`ಒಂದು ವರ್ಷದ ಅವಧಿಯಲ್ಲಿ ಅಂಪೈರ್‌ಗಳ ಕಾರ್ಯ ವೈಖರಿಯನ್ನು ಅವಲೋಕಿಸಿ ಈ ನಿರ್ಧಾರ ತೆಗೆದುಕೊಂಡಿದ್ದೇವೆ. ಸ್ಪಾಟ್ ಫಿಕ್ಸಿಂಗ್‌ನಲ್ಲಿ ಅಸಾದ್ ರವೂಫ್ ಹೆಸರು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಅವರನ್ನು 2013-14ನೇ ವರ್ಷಕ್ಕೆ ಪರಿಗಣಿಸಿಲ್ಲ' ಎಂದು ಐಸಿಸಿ ಅಂಪೈರ್ ಅಯ್ಕೆ ಸಮಿತಿಯ ಚೇರಮನ್ ಜೆಫ್ ಅಲಾರ್ಡಿಸ್ ಮಾಧ್ಯಮದವರಿಗೆ ತಿಳಿಸಿದರು. ರವೂಫ್ ಅವರನ್ನು ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯಿಂದಲೂ ಕೈ ಬಿಡಲಾಗಿತ್ತು.

57 ವರ್ಷದ ರವೂಫ್ 2006ರಿಂದ ಅಂಪೈರ್‌ಗಳ ಸಮಿತಿಯಲಿದ್ದು, 48 ಟೆಸ್ಟ್, 98 ಏಕದಿನ ಮತ್ತು 23 ಟ್ವೆಂಟಿ-20 ಪಂದ್ಯಗಳಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದರು. ಬೌಡನ್ 2003ರಿಂದಲೇ ಈ ಸಮಿತಿಯಲ್ಲಿದ್ದರು. ಇವರು 75 ಟೆಸ್ಟ್, 181ಏಕದಿನ ಮತ್ತು 19 ಟ್ವೆಂಟಿ-20 ಪಂದ್ಯಗಳಿಗೆ ಅಂಪೈರ್ ಆಗಿದ್ದರು.

ಮಾಜಿ ಎಡಗೈ ಸ್ಪಿನ್ನರ್ ಇಲ್ಲಿಂಗ್‌ವರ್ಥ್ 2010ರ ಜುಲೈನಿಂದ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಿಗೆ ಅಂಪೈರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆಸೀಸ್‌ನ ಮಾಜಿ ಆಟಗಾರ ನಾಲ್ಕು ಟೆಸ್ಟ್, 16 ಏಕದಿನ ಮತ್ತು ಏಳು ಟ್ವೆಂಟಿ-20 ಪಂದ್ಯಗಳಿಗೆ ಅಂಪೈರ್ ಆಗಿದ್ದರು. ರಿಫೆಲ್ ನಾಲ್ಕು ಟೆಸ್ಟ್, 30 ಏಕದಿನ ಹಾಗೂ ಒಂಬತ್ತು ಟ್ವೆಂಟಿ-20 ಪಂದ್ಯಗಳಿಗೆ ಅಂಪೈರ್ ಆಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಇವರು 2009ರ ಜನವರಿಯಿಂದಲೇ ಅಂಪೈರ್ ಆಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.