ADVERTISEMENT

ಒಗ್ಗಟ್ಟಿಗೆ ಲಭಿಸಿದ ಯಶಸ್ಸು ಇದು: ಕರುಣ್‌ ನಾಯರ್‌

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2014, 19:30 IST
Last Updated 16 ಮಾರ್ಚ್ 2014, 19:30 IST

ಬೆಂಗಳೂರು: ‘ಪ್ರತಿ ಪಂದ್ಯದಲ್ಲೂ ನಾವು ಒಗ್ಗಟ್ಟಾಗಿ ಆಡುತ್ತೇವೆ. ಒಬ್ಬರ ಮೇಲೆ  ಯಾರೂ ಅವಲಂಬಿತವಾಗಿಲ್ಲ. ಆದ್ದರಿಂದ ಎಲ್ಲಾ ಟೂರ್ನಿಗಳಲ್ಲಿಯೂ ನಮಗೆ ಯಶಸ್ಸು ಲಭಿಸುತ್ತಿದೆ. ನನ್ನ ಮೊದಲ ರಣಜಿ, ಇರಾನಿ ಕಪ್‌ ಮತ್ತು ವಿಜಯ ಹಜಾರೆ ಟೂರ್ನಿಯಲ್ಲಿಯೇ ಪ್ರಶಸ್ತಿ ಗೆದ್ದಿದ್ದು ಖುಷಿ ನೀಡಿದೆ...’
ಟ್ರೋಫಿ ಗೆದ್ದ ಸಂಭ್ರಮವನ್ನು ಕರ್ನಾಟಕ ತಂಡದ ಬ್ಯಾಟ್ಸ್‌ಮನ್ ಕರುಣ್‌ ನಾಯರ್‌ ‘ಪ್ರಜಾವಾಣಿ’ ಜೊತೆ ಹಂಚಿಕೊಂಡಿದ್ದು ಹೀಗೆ.

ಫೈನಲ್‌ ಪಂದ್ಯದಲ್ಲಿ ಕರುಣ್ ಅರ್ಧಶತಕ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಟ್ರೋಫಿ ಗೆದ್ದ         ಸಂಭ್ರಮವನ್ನು ದೂರವಾಣಿ ಮೂಲಕ ಪತ್ರಿಕೆ ಜೊತೆ  ಹಂಚಿಕೊಂಡಿದ್ದಾರೆ. ಅದರ ಸಾರಾಂಶ ಇಲ್ಲಿದೆ.

*ಕರ್ನಾಟಕ ತಂಡ ರಣಜಿ, ಇರಾನಿ ಮತ್ತು ವಿಜಯ ಹಜಾರೆ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿದೆ. ಈ ಬಗ್ಗೆ ಹೇಳಿ?
ನಿಜಕ್ಕೂ ಇದು ಅವಿಸ್ಮರಣೀಯ ಸಂದರ್ಭ. ಏಕೆಂದರೆ, ಮೊದಲ ಸಲ ರಣಜಿ ಟೂರ್ನಿ ಆಡಿದ್ದೇನೆ. ವಿಜಯ ಹಜಾರೆ ಟ್ರೋಫಿಯಲ್ಲಿ ಆಡಿದ್ದು ಇದೇ  ಮೊದಲು. ಮೊದಲ ಯಶಸ್ಸಿನ ಸಂಭ್ರಮ ಕೊನೆಯವರೆಗೂ ನೆನಪಿನರುತ್ತದೆ.

*ಈ ಗೆಲುವಿನಲ್ಲಿ ನೀವು ಗಳಿಸಿದ ಅರ್ಧಶತಕವೇ ಪ್ರಮುಖ ಪಾತ್ರ ವಹಿಸಿತು. ಈ ಬಗ್ಗೆ ಹೇಳಿ?
ವೈಯಕ್ತಿಕವಾಗಿ ನನ್ನ ಆಟಕ್ಕಿಂತ ಒಟ್ಟಾರೆಯಾಗಿ ತಂಡ ತೋರಿದ ಪ್ರದರ್ಶನ ಮುಖ್ಯ. ಮಿಥುನ್‌, ಅಬ್ರಾರ್‌ ಖಾಜಿ ಚೆನ್ನಾಗಿ ಬೌಲ್‌ ಮಾಡಿದರು. ಹಿಂದಿನ ಪಂದ್ಯಗಳಲ್ಲಿ ರಾಬಿನ್‌ ಉತ್ತಪ್ಪ ಶತಕ ಗಳಿಸಿ ತಂಡ ಫೈನಲ್‌ ಪ್ರವೇಶಿಸಲು ಕಾರಣರಾದರು. ಎಲ್ಲಾ ಆಟಗಾರರ ಒಗ್ಗಟ್ಟಿಗೆ ಲಭಿಸಿದ ಫಲ ಇದು.

*ಕರ್ನಾಟಕ ಮೂರೂ ಟೂರ್ನಿಗಳಲ್ಲಿ ಟ್ರೋಫಿ ಗೆದ್ದಿದೆ. ಈ ಯಶಸ್ಸಿನ ಗುಟ್ಟೇನು?
ಆಟಗಾರರ ನಡುವೆ ಇರುವ ಉತ್ತಮ ಹೊಂದಾಣಿಕೆಯೇ ಯಶಸ್ಸಿನ ಗುಟ್ಟು. ಅನುಭವಿ ಹಾಗೂ ಯುವ ಆಟಗಾರರು ನಮ್ಮ ತಂಡದಲ್ಲಿದ್ದಾರೆ. ನಮ್ಮ ನಡುವೆ ಯಾವುದೇ ಭೇದವಿಲ್ಲ. ತರಬೇತುದಾರರೂ ಸ್ನೇಹಿತರಂತಿದ್ದಾರೆ. ಕುಟುಂಬದಲ್ಲಿ ಇರುವಂಥ ವಾತಾವರಣ ತಂಡದಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.