ADVERTISEMENT

ಒಜಿಕ್ಯು ತೆಕ್ಕೆಗೆ ಲಕ್ಷ್ಯ ಸೇನ್

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2011, 19:00 IST
Last Updated 12 ಸೆಪ್ಟೆಂಬರ್ 2011, 19:00 IST

ಬೆಂಗಳೂರು: ಒಲಿಂಪಿಕ್ ಕೂಟದಲ್ಲಿ ದೇಶಕ್ಕೆ ಪದಕ ಗೆದ್ದುಕೊಡಬಲ್ಲಂತಹ ಸ್ಪರ್ಧಿಗಳನ್ನು ತಯಾರು ಮಾಡುವ ಉದ್ದೇಶ ಹೊಂದಿರುವ `ಒಲಿಂಪಿಕ್ ಗೋಲ್ಡ್ ಕ್ವೆಸ್ಟ್~ (ಒಜಿಕ್ಯು) 10ರ ಹರೆಯದ ಬ್ಯಾಡ್ಮಿಂಟನ್ ಸ್ಪರ್ಧಿ ಲಕ್ಷ್ಯ ಸೇನ್ ಅವರನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡಿದೆ.

ಉತ್ತರಾಖಂಡದ ಅಲಮೋರಾದ ಎಸ್‌ಎಐ ಕೇಂದ್ರದ ಬ್ಯಾಡ್ಮಿಂಟನ್ ಕೋಚ್ ಅವರ ಮಗನಾಗಿರುವ ಲಕ್ಷ್ಯ ಸೇನ್ ರಾಷ್ಟ್ರೀಯ ಟೂರ್ನಿಗಳಲ್ಲಿ 13 ವರ್ಷ ವಯಸ್ಸಿನೊಳಗಿನವರ ವಿಭಾಗದಲ್ಲಿ ಮಿಂಚಿನ ಪ್ರದರ್ಶನ ನೀಡುತ್ತಿದ್ದಾರೆ.

ಇದೀಗ ಈ ಎಳೆಯ ಪ್ರತಿಭೆಗೆ ಸೂಕ್ತ ತರಬೇತಿ ನೀಡಿ 2020ರ ಒಲಿಂಪಿಕ್‌ಗೆ ಸಜ್ಜುಗೊಳಿಸುವ ಗುರಿಯನ್ನು ಒಲಿಂಪಿಕ್ ಗೋಲ್ಡ್ ಕ್ವೆಸ್ಟ್ ಹೊಂದಿದೆ. ಪ್ರಕಾಶ್ ಪಡುಕೋಣೆ ಮತ್ತು ಬಿಲಿಯರ್ಡ್ಸ್ ಆಟಗಾರ ಗೀತ್ ಸೇಠಿ ಜೊತೆಯಾಗಿ ಒಜಿಕ್ಯುನ್ನು ಅಸ್ತಿತ್ವಕ್ಕೆ ತಂದಿದ್ದರು. ಒಲಿಂಪಿಕ್‌ನಲ್ಲಿ ಭಾರತಕ್ಕೆ ಪದಕ ತಂದುಕೊಡುವ ಸಾಧ್ಯತೆ ಹೊಂದಿರುವ ಸ್ಪರ್ಧಿಗಳಿಗೆ ತರಬೇತಿ ಹಾಗೂ ನೆರವು ನೀಡುವುದು ಇದರ ಗುರಿ.

`ಲಕ್ಷ್ಯ ಅಸಾಮಾನ್ಯ ಸಾಮರ್ಥ್ಯ ಹೊಂದಿರುವ ಪ್ರತಿಭೆ. ಆತನ ಸ್ಟ್ರೋಕ್‌ಗಳು, ಅಂಗಳದಲ್ಲಿ ಅತ್ತಿತ್ತ ಓಡಾಡುವ ರೀತಿ ಮತ್ತು ಉತ್ಸಾಹವನ್ನು ಇದೇ ವಯಸ್ಸಿನ ಇತರರಲ್ಲಿ ಕಾಣಲು ಸಾಧ್ಯವಿಲ್ಲ. 10 ರ ಹರೆಯದಲ್ಲಿ ಇಷ್ಟೊಂದು ಸೊಗಸಾದ ರೀತಿಯಲ್ಲಿ ಆಡಬಲ್ಲಂತಹ ಪ್ರತಿಭೆಯನ್ನು ನಾನು ನೋಡಿಯೇ ಇಲ್ಲ~ ಎಂದ ಪ್ರಕಾಶ್ ಪಡುಕೋಣೆ ಹೇಳಿದರು.

`ಗೋಲ್ಡ್ ಕ್ವೆಸ್ಟ್‌ಗೆ ಅರ್ಹರನ್ನು ಆಯ್ಕೆ ಮಾಡುವ ವೇಳೆ ಸಾಕಷ್ಟು ಎಚ್ಚರ ವಹಿಸುವೆವು. ಲಕ್ಷ್ಯ ಸೇನ್ ಅದ್ಭುತ ಪ್ರತಿಭೆ ಎಂಬುದರಲ್ಲಿ ಯಾವುದೇ ಅನುಮಾನ ಬೇಡ. ಆದರೆ ಎಳೆ ಹರೆಯದಲ್ಲೇ ನಿರೀಕ್ಷೆಯ ಭಾರ ಅವರ ಮೇಲೆ ಬೀಳದಂತೆ ನೋಡಿಕೊಳ್ಳುವೆವು~ ಎಂದು ಒಜಿಕ್ಯುನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಮಾಜಿ ಹಾಕಿ ಆಟಗಾರ ವಿರೇನ್ ರಸ್ಕ್ವಿನ ನುಡಿದರು.  ಪ್ರಸಕ್ತ ಬೆಂಗಳೂರಿನ ಪ್ರಕಾಶ್ ಪಡುಕೋಣೆ ಬ್ಯಾಡ್ಮಿಂಟನ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿರುವ ಲಕ್ಷ್ಮ ಅವರನ್ನು ಕಳೆದ ವರ್ಷ ತರಬೇತಿಗಾಗಿ ಇಂಡೊನೇಷ್ಯಕ್ಕೆ ಕಳುಹಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.