ADVERTISEMENT

ಒತ್ತಡವನ್ನು ನಿಭಾಯಿಸುವ ಶಕ್ತಿಯಿದೆ: ಮಹೇಂದ್ರ ಸಿಂಗ್ ದೋನಿ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2011, 17:50 IST
Last Updated 1 ಫೆಬ್ರುವರಿ 2011, 17:50 IST

ಮುಂಬೈ (ಪಿಟಿಐ): ಒತ್ತಡವನ್ನು ನಿಭಾಯಿಸಿಕೊಂಡು ವಿಶ್ವಾಸದಿಂದ ಆಡಿ ವಿಶ್ವಕಪ್‌ನಲ್ಲಿ ಉನ್ನತ ಮಟ್ಟದ ಪ್ರದರ್ಶನ ನೀಡುತ್ತೇವೆಂದು ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ದೋನಿ ಭರವಸೆ ನೀಡಿದ್ದಾರೆ.

ನಾಲ್ಕು ವರ್ಷಗಳ ಹಿಂದೆ ನಿರೀಕ್ಷೆಯ ಭಾರವನ್ನು ಹೊರಲಾಗದೇ ನಿರಾಸೆ ಹೊಂದಿತ್ತು ಭಾರತ. ಪ್ರಾಥಮಿಕ ಹಂತದ ಅಡೆತಡೆಯನ್ನು ದಾಟಿಕೊಂಡು ಮುನ್ನುಗ್ಗುವ ಬಲವನ್ನೂ ತೋರಿರಲಿಲ್ಲ. ಆದರೆ ಈ ಬಾರಿ ಹಾಗೆ ಆಗದು ಎನ್ನುವ ಅಭಯ ನೀಡಿದ್ದಾರೆ ‘ಮಹಿ’.

‘ಒತ್ತಡವನ್ನು ನಾವು ಹೆಚ್ಚುವರಿ ಹೊಣೆ ಎನ್ನುವಂತೆ ನಿಭಾಯಿಸುತ್ತೇವೆ’ ಎಂದು ಖಾಸಗಿ ಕಂಪೆನಿಯ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು.

‘ಆಟದ ಮೂಲ ಅಂಶಗಳನ್ನು ಅನುಸರಿಸಿಕೊಂಡು ಆಡುತ್ತೇವೆ. ಈ ಟೂರ್ನಿಯಲ್ಲಿ ಚೆನ್ನಾಗಿ ಆಡುವ ಶಕ್ತಿ ನಮಗಿದೆ. ಒಂದು ವಿಶೇಷವೂ ಇದೆ. ವಿಶ್ವಕಪ್‌ನಲ್ಲಿ ನಾವು ಗೆಲ್ಲುವ ನೆಚ್ಚಿನ ತಂಡಗಳ ಪಟ್ಟಿಯಿಂದಾಚೆ ಇಲ್ಲ. ಕಳೆದ ಬಾರಿ ಅಂಥ ಸ್ಥಿತಿಯಲ್ಲಿದ್ದೆವು. ಈಗ ಉತ್ತಮ ಮಟ್ಟದಲ್ಲಿದ್ದುಕೊಂಡು ಟೂರ್ನಿಯಲ್ಲಿ ಆಡಲು ಸಜ್ಜಾಗುತ್ತಿದ್ದೇವೆ’ ಎಂದು ವಿವರಿಸಿದರು.

‘ಭವಿಷ್ಯ ನುಡಿಯುವ ಶಕ್ತಿ ನನಗಿಲ್ಲ. ಅದರಲ್ಲಿಯೂ ಕ್ರಿಕೆಟ್ ವಿಷಯ ಬಂದಾಗ ಹಾಗೆ ಮಾಡುವುದೂ ಸಾಧ್ಯವಿಲ್ಲ. ಇಲ್ಲಿ ಆಡುವ ಉಭಯ ತಂಡಗಳಿಗೂ ಯಶಸ್ವಿನ ನಂಬಿಕೆ ಇರುತ್ತದೆ. ಕೊನೆಯವರೆಗೂ ಅದೇ ಪ್ರಕ್ರಿಯೆ ಪ್ರತಿಯೊಂದು ಪಂದ್ಯದಲ್ಲಿಯೂ ನಡೆಯುತ್ತದೆ’ ಎಂದ ಅವರು ‘ಒಂದೊಂದು ಪಂದ್ಯವನ್ನು ಸವಾಲಾಗಿ ಸ್ವೀಕರಿಸಿ ಆಡುತ್ತಾ ಸಾಗುವುದು ಮಾತ್ರ ನಮ್ಮ ಯೋಜನೆ’ ಎಂದು ನುಡಿದರು.

ಫೆಬ್ರುವರಿ 19ರಿಂದ ಏಪ್ರಿಲ್ 2ರವರೆಗೆ ನಡೆಯಲಿರುವ ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಆಡುವ ಕುರಿತು ಯೋಚಿಸುತ್ತಿರುವ ದೋನಿ ಹಿಂದಿನ ಕಹಿ ನೆನಪುಗಳ ಕುರಿತು ಚಿಂತೆಗೀಡಾಗಿಲ್ಲ. 2007ರಲ್ಲಿ ವೆಸ್ಟ್ ಇಂಡೀಸ್‌ನಲ್ಲಿ ಬಾಂಗ್ಲಾ ಎದುರು ಆಘಾತಕಾರಿ ಸೋಲನುಭವಿಸಿ ಟೂರ್ನಿಯಿಂದ ಹೊರಬಿದ್ದ ಬಗ್ಗೆ ಯೋಚನೆ ಕೂಡ ಮಾಡುತ್ತಿಲ್ಲ. ‘ಕಳೆದು ಹೋಗಿರುವ ದಿನಗಳು ಮರೆತು ಹೋಗಿವೆ. ನಾನು ಸಕಾರಾತ್ಮಕವಾಗಿ ಯೋಚನೆ ಮಾಡುತ್ತೇನೆ’ ಎಂದರು.

ವಿಶ್ವಕಪ್ ಕಾರ್ಯಕ್ರಮದ ಬಗ್ಗೆ ಇಂಗ್ಲೆಂಡ್‌ನ ಕೆವಿನ್ ಪೀಟರ್ಸನ್ ಎತ್ತಿರುವ ಆಕ್ಷೇಪದ ಧ್ವನಿಗೆ ವಿರೋಧ ವ್ಯಕ್ತಪಡಿಸಿದ ದೋನಿ ‘ಪಂದ್ಯಗಳ ನಡುವೆ ಸಾಕಷ್ಟು ಕಾಲಾವಕಾಶ ಇರುವುದು ಅಗತ್ಯ. ಅದರಿಂದ ಆಟಗಾರರಿಗೆ ಚೇತರಿಸಿಕೊಂಡು ಮತ್ತೊಂದು ಪಂದ್ಯಕ್ಕಾಗಿ ಸಜ್ಜಾಗಲು ಅವಕಾಶ ದೊರೆಯುತ್ತದೆ’ ಎಂದರು.

‘ಬೇರೆ ಕ್ರೀಡೆಗಳ ಕುರಿತು ಹೆಚ್ಚು ಗೊತ್ತಿಲ್ಲ. ಆದರೆ ಕ್ರಿಕೆಟ್‌ನಲ್ಲಿ ಎಲ್ಲದಕ್ಕೂ ಟೀಕೆ ಮಾಡುತ್ತಾರೆ. ಬಿಗುವಿನ ಕಾರ್ಯಕ್ರಮ ಪಟ್ಟಿ ಇದ್ದರೆ ಅದಕ್ಕೆ ಅಸಮಾಧಾನ ವ್ಯಕ್ತಪಡಿಸುತ್ತಾರೆ. ಈಗ ಸಾಕಷ್ಟು ಬಿಡುವು ಸಿಗುವಂತೆ ಮಾಡಲಾಗಿದೆ. ಅದಕ್ಕೂ ಟೀಕೆ!’ ಎಂದು ವ್ಯಂಗ್ಯವಾಗಿ ನಕ್ಕರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.