ನವದೆಹಲಿ (ಪಿಟಿಐ): ಮಹತ್ವಾಕಾಂಕ್ಷೆಯ `ಲಕ್ಷ್ಯ 2022' ಯೋಜನೆ ಜಾರಿಗೆ ಮೀನಮೇಷ ಎನಿಸುತ್ತಿರುವ ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್ (ಐಎಎಫ್‌ಎಫ್) ಕ್ರಮದಿಂದ ಯೋಜನೆಯ ತಾಂತ್ರಿಕ ನಿರ್ದೇಶಕ ರಾಬ್ ಬಾನ್ ನಿರಾಸೆಗೊಂಡಿದ್ದಾರೆ. ಇದೇ ವರ್ಷದ ಅಕ್ಟೋಬರ್‌ನಲ್ಲಿ ಕೊನೆಗೊಳ್ಳಲಿರುವ ಈ ಒಪ್ಪಂದ ವಿಸ್ತರಣೆಗೊಳ್ಳುವುದು ಅನುಮಾನ ಎಂದು ಮೂಲಗಳು ತಿಳಿಸಿವೆ.
ಅಪಾರ ಅನುಭವ ಹೊಂದಿರುವ ಬಾನ್, ಕತಾರ್‌ನಲ್ಲಿ 2022ರಲ್ಲಿ ನಡೆಯಲಿರುವ ಫುಟ್‌ಬಾಲ್ ವಿಶ್ವಕಪ್‌ಗೆ ಭಾರತ ತಂಡ ಅರ್ಹತೆ ಪಡೆಯುವ ಗುರಿಯೊಂದಿಗೆ `ಲಕ್ಷ್ಯ 2022' ಎಂಬ ಯೋಜನೆ ರೂಪಿಸಿದ್ದರು. ಆದರೆ ಅವರ ಕನಸಿನ ಯೋಜನೆ ಕಳೆದ ಆಗಸ್ಟ್‌ನಿಂದಲೇ ದೂಳು ತಿನ್ನುತ್ತಿದೆ. ಇದನ್ನರಿತ 70 ವರ್ಷದ ಬಾನ್, ಒಪ್ಪಂದವನ್ನು ಮತ್ತೊಂದು ಅವಧಿಗೆ ವಿಸ್ತರಿಸುವ ಸಾಧ್ಯತೆಗಳಿಲ್ಲ ಎಂಬ ಸಂದೇಶವನ್ನು ಸೂಕ್ಷ್ಮವಾಗಿ ರವಾನಿಸಿದ್ದಾರೆ.
`ಲಕ್ಷ್ಯ 2022 ಯೋಜನೆ ಜಾರಿಗೊಳಿಸದ್ದರಿಂದ ಬಾನ್ ಅಸಂತುಷ್ಟರಾಗಿರುವುದು ನಿಜ. ಆದ್ದರಿಂದ ನಿಗದಿತ ಒಪ್ಪಂದವನ್ನು ಬಾನ್ ಮತ್ತೊಂದು ಅವಧಿಗೆ ವಿಸ್ತರಿಸುವ ಸಾಧ್ಯತೆಗಳು ಕಡಿಮೆ. ಆದರೆ ಈ ಸಂಬಂಧ ಬಾನ್ ಯಾವುದೇ ಹೇಳಿಕೆ ನೀಡಿಲ್ಲ' ಎಂದು ಎಐಎಫ್‌ಎಫ್ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ.
2011ರ ಅಕ್ಟೋಬರ್‌ನಲ್ಲಿ ಬಾನ್ ಅವರು ಎರಡು ವರ್ಷಗಳ ಅವಧಿಗೆ ಯೋಜನೆಯ ತಾಂತ್ರಿಕ ನಿರ್ದೇಶಕರಾಗಿ ನೇಮಕಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.