ADVERTISEMENT

ಒಲಿಂಪಿಕ್ಸ್‌ಗೆ ಮನೋಜ್ ಅರ್ಹತೆ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2011, 19:30 IST
Last Updated 4 ಅಕ್ಟೋಬರ್ 2011, 19:30 IST

ನವದೆಹಲಿ (ಪಿಟಿಐ): ಭಾರತದ ಬಾಕ್ಸರ್‌ಗಳಾದ ಎಲ್. ದೇವೇಂದ್ರೊ ಸಿಂಗ್ (49 ಕೆ.ಜಿ.) ಹಾಗೂ ಮನೋಜ್ ಕುಮಾರ್ (64 ಕೆ.ಜಿ.) ಅವರು ಲಂಡನ್ ಒಲಿಂಪಿಕ್ ಕ್ರೀಡಾಕೂಟಕ್ಕೆ ಅರ್ಹತೆ ಪಡೆದಿದ್ದಾರೆ.

ಅಜರ್‌ಬೈಜಾನ್‌ನ ಬಾಕುವಿನಲ್ಲಿ ನಡೆಯುತ್ತಿರುವ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಕ್ವಾರ್ಟರ್ ಫೈನಲ್‌ಗೆ ಪ್ರವೇಶ ಪಡೆಯುವುದರೊಂದಿಗೆ ಒಲಿಂಪಿಕ್‌ನಲ್ಲಿ ಸ್ಥಾನವನ್ನು ಖಾತ್ರಿ ಮಾಡಿಕೊಂಡರು ಎಂದು ಇಲ್ಲಿಗೆ ಬಂದ ವರದಿಗಳು ತಿಳಿಸಿವೆ.

 ಮನೋಜ್ ಅವರು ಮಂಗಳವಾರ ನಡೆದ ಕಾದಾಟದಲ್ಲಿ 17-15ರಲ್ಲಿ ಚೀನಾದ ಕ್ಸಿಂಗ್ ಹೂ ವಿರುದ್ಧ ಗೆದ್ದರು. 19 ವರ್ಷ ವಯಸ್ಸಿನ ದೇವೇಂದ್ರೊ ಅವರು ಪ್ರಬಲ ಎದುರಾಳಿ ಎನಿಸಿದ ಇಕ್ವೆಡಾರ್‌ನ ಕಾರ್ಲೊಸ್ ಕ್ಯೂಪೊ ಎದುರು 18-12 ಪಾಯಿಂಟುಗಳ ಅಂತರದಲ್ಲಿ ವಿಜಯ ಸಾಧಿಸಿದರು.

ಈ ಟೂರ್ನಿಯಲ್ಲಿ 49ರಿಂದ 81 ಕೆ.ಜಿ. ವಿಭಾಗದಲ್ಲಿ ಮೊದಲ ಹತ್ತರ ಪಟ್ಟಿಯಲ್ಲಿ ಸ್ಥಾನ ಪಡೆಯುವ ಬಾಕ್ಸರ್‌ಗಳು ಒಲಿಂಪಿಕ್‌ಗೆ ಅರ್ಹತೆ ಸಿಗುತ್ತದೆ. ಎಂಟರ ಘಟ್ಟವನ್ನು ಪ್ರವೇಶಿಸಿದ್ದರಿಂದ ಭಾರತದ ಈ ಇಬ್ಬರು ಯುವಕರಿಗೆ ಲಂಡನ್‌ನಲ್ಲಿ ರಿಂಗ್‌ನಲ್ಲಿ ಕಾಣಿಸಿಕೊಳ್ಳುವ ಅವಕಾಶದ ಬಾಗಿಲು ತೆರೆದಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.